ಮಂಡ್ಯ , ಏಪ್ರಿಲ್ 22: ಪ್ರೀತಿಗಾಗಿ ಹೆತ್ತವರನ್ನೇ ವಿರೋಧಿಸಿ, ಹಠ ಹಿಡಿದು ಮದುವೆಯಾಗಿದ್ದ ಗೃಹಿಣಿಯೊಬ್ಬಳು ಕೇವಲ ಎರಡೇ ವರ್ಷಕ್ಕೆ ಪತಿಯ ಆತ್ಮೀಯ ಸ್ನೇಹಿತನ ಜೊತೆ ಓಡಿ ಹೋಗಿ ಎರಡನೇ ಮದುವೆಯಾಗಿರುವ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಬನ್ನಂಗಾಡಿಯಲ್ಲಿ ಬೆಳಕಿಗೆ ಬಂದಿದೆ.

ಪಾಂಡವಪುರ ತಾಲೂಕಿನ ಬನ್ನಂಗಾಡಿ ನಿವಾಸಿ ಸಾಗರ್ ವೃತ್ತಿಯಲ್ಲಿ ಆಟೋ ಚಾಲಕರಾಗಿದ್ದು, ಹರವು ಗ್ರಾಮದ ರಕ್ಷಿತಾ ಎಂಬಾಕೆಯೊಂದಿಗೆ ಕಳೆದ ನಾಲ್ಕು ವರ್ಷಗಳಿಂದ ಪ್ರೇಮ ಸಂಬಂಧ ಹೊಂದಿದ್ದರು. ಕಾಲೇಜಿಗೆ ಹೋಗುವ ನೆಪದಲ್ಲಿ ಸಾಗರ್ ಅವರ ಆಟೋದಲ್ಲಿಯೇ ಪ್ರಯಾಣಿಸುತ್ತಿದ್ದ ರಕ್ಷಿತಾ, ಮನೆಯವರ ತೀವ್ರ ವಿರೋಧದ ನಡುವೆಯೂ “ಸಾಗರ್ನನ್ನೇ ಮದುವೆಯಾಗುವುದು” ಎಂದು ಪಟ್ಟು ಹಿಡಿದು ಆತನ ಮನೆಗೆ ಬಂದಿದ್ದಳು. ಆಗ ಆಕೆಗೆ ಇನ್ನೂ 18 ವರ್ಷ ತುಂಬದ ಕಾರಣ, ಸಾಗರ್ ಆಕೆಯನ್ನು ತನ್ನ ಅಕ್ಕನ ಮನೆಯಲ್ಲಿ ಸುರಕ್ಷಿತವಾಗಿರಿಸಿ ಪೋಷಿಸಿದ್ದರು. ನಂತರ ಆಕೆಗೆ ಮದುವೆಯ ವಯಸ್ಸಾದ ಮೇಲೆ ದೇವಸ್ಥಾನದಲ್ಲಿ ಕಾನೂನುಬದ್ಧವಾಗಿ ವಿವಾಹವಾಗಿ ಸುಖ ಸಂಸಾರ ನಡೆಸುತ್ತಿದ್ದರು.
ಆದರೆ ಈ ಸುಖ ಸಂಸಾರಕ್ಕೆ ಕಂಟಕವಾಗಿದ್ದು ಸಾಗರ್ ಅವರ ಆತ್ಮೀಯ ಸ್ನೇಹಿತ ಇಂದ್ರ. ಸಾಗರ್ ಜೊತೆಗೇ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ ಇಂದ್ರ, ಸಾಗರ್ ಮನೆಗೆ ಬರುತ್ತಿದ್ದ. ಎಲ್ಲರ ಸಮ್ಮುಖದಲ್ಲಿ ರಕ್ಷಿತಾಳನ್ನು ‘ತಂಗಿ’ ಎಂದೇ ಸಂಬೋಧಿಸುತ್ತಿದ್ದ ಇಂದ್ರ, ತನಗೆ ಅಕ್ಕ-ತಂಗಿಯರಿಲ್ಲದ ಕಾರಣ ಇವಳನ್ನೇ ತನ್ನ ಒಡಹುಟ್ಟಿದವಳೆಂದು ಭಾವಿಸುವುದಾಗಿ ನಂಬಿಸಿದ್ದನು. ಕಳೆದ ರಕ್ಷಾಬಂಧನದ ದಿನದಂದು ರಕ್ಷಿತಾಳಿಂದ ರಾಖಿ ಕಟ್ಟಿಸಿಕೊಂಡಿದ್ದ ಇಂದ್ರ, ಪವಿತ್ರವಾದ ಅಣ್ಣ-ತಂಗಿ ಸಂಬಂಧದ ನಾಟಕವಾಡುತ್ತಲೇ ಒಳಗೊಳಗೆ ಆಕೆಯೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದನು.
ಸಾಗರ್ ಕೆಲಸಕ್ಕೆ ಹೋದ ಸಮಯವನ್ನು ಹೊಂಚು ಹಾಕುತ್ತಿದ್ದ ಇಂದ್ರ, ರಕ್ಷಿತಾಳಿಗೆ ಮಾಯದ ಮಾತುಗಳನ್ನು ಹೇಳಿ ಪ್ರೀತಿಯ ಬಲೆಗೆ ಬೀಳಿಸಿಕೊಂಡಿದ್ದನು. ಕಳೆದ ಕೆಲವು ದಿನಗಳ ಹಿಂದೆ ಇಬ್ಬರೂ ಏಕಾಏಕಿ ನಾಪತ್ತೆಯಾಗಿದ್ದು, ಇತ್ತೀಚೆಗೆ ದೇವಸ್ಥಾನವೊಂದರಲ್ಲಿ ಇಂದ್ರ ಮತ್ತು ರಕ್ಷಿತಾ ಮದುವೆಯಾಗಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಾಗಿವೆ. ಈ ಫೋಟೋಗಳನ್ನು ಕಂಡು ದಿಗಿಲುಗೊಂಡ ಸಾಗರ್, ತನ್ನ ಹೆಂಡತಿ ಮನೆಯಿಂದ ಹೋಗುವಾಗ ಸುಮಾರು 22 ಗ್ರಾಂ ಚಿನ್ನದ ಒಡವೆ ಹಾಗೂ 1 ಲಕ್ಷ ರೂಪಾಯಿ ನಗದನ್ನು ಕದ್ದೊಯ್ದಿದ್ದಾಳೆ ಎಂದು ಆರೋಪಿಸಿದ್ದಾರೆ.
ಪ್ರಸ್ತುತ ನಂಬಿದ ಹೆಂಡತಿ ಮತ್ತು ಪ್ರಾಣ ಸ್ನೇಹಿತನಿಂದ ವಂಚನೆಗೊಳಗಾದ ಸಾಗರ್ ನ್ಯಾಯಕ್ಕಾಗಿ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ತನ್ನ ಮನೆಯಲ್ಲಿದ್ದ ಹಣ ಮತ್ತು ಒಡವೆಯನ್ನು ವಾಪಸ್ ಕೊಡಿಸಬೇಕು ಹಾಗೂ ವಂಚನೆ ಮಾಡಿರುವ ಪತ್ನಿಯಿಂದ ಕಾನೂನುಬದ್ಧವಾಗಿ ವಿಚ್ಛೇದನ ಕೊಡಿಸಬೇಕು ಎಂದು ಅವರು ದೂರಿನಲ್ಲಿ ಮನವಿ ಮಾಡಿದ್ದಾರೆ.