ಚಿಕ್ಕಮಗಳೂರು, ಮಾರ್ಚ್ 27: ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದಲ್ಲಿ ಹಣ ದುರ್ಬಳಕೆ ಆರೋಪದ ಹಿನ್ನೆಲೆಯಲ್ಲಿ ಮಾನಸಿಕ ಒತ್ತಡಕ್ಕೆ ಒಳಗಾದ ಮಹಿಳಾ ಕಾರ್ಯದರ್ಶಿಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಹೆಚ್. ಮಲ್ಲೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಉಷಾ (45) ಎಂದು ಗುರುತಿಸಲಾಗಿದೆ. ಆತ್ಮಹತ್ಯೆಗೆ ಮುನ್ನ ಉಷಾ ಅವರು ವಿಡಿಯೋ ಸಂದೇಶವನ್ನು ದಾಖಲಿಸಿದ್ದು, “ಕಿರುಕುಳವನ್ನು ತಡೆಯಲು ನನಗೆ ಸಾಧ್ಯವಾಗುತ್ತಿಲ್ಲ” ಎಂದು ಅಳಲು ವ್ಯಕ್ತಪಡಿಸಿದ್ದಾರೆ. ಲೆಕ್ಕಪತ್ರ ಪುಸ್ತಕ ಕಳೆದುಹೋಗಿರುವುದು ತನ್ನ ತಪ್ಪು ಎಂದು ಅವರು ವಿಡಿಯೋದಲ್ಲಿ ಒಪ್ಪಿಕೊಂಡಿರುವುದಾಗಿ ತಿಳಿದುಬಂದಿದೆ.
ಮಾಹಿತಿಯ ಪ್ರಕಾರ, ಕಳೆದ ಹತ್ತು ವರ್ಷಗಳಿಂದ ಸಂಘದಲ್ಲಿ ಹಣ ದುರ್ಬಳಕೆ ನಡೆದಿದೆ ಎಂಬ ಆರೋಪಗಳು ಕೇಳಿಬರುತ್ತಿದ್ದವು. ಈ ಸಂಬಂಧ ನಡೆದ ಪಂಚಾಯತಿಯಲ್ಲಿ ಲೆಕ್ಕಪತ್ರಗಳು ಕಾಣೆಯಾಗಿರುವುದು ನಿಜ ಎಂದು ಉಷಾ ಒಪ್ಪಿಕೊಂಡಿದ್ದರು. 2010ರಲ್ಲಿ ಸ್ಥಾಪನೆಯಾದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದಲ್ಲಿ ಅವರು ಆರಂಭದಿಂದಲೂ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು. 2025ರಲ್ಲಿ ಹೊಸ ಸದಸ್ಯರು ಸೇರ್ಪಡೆಯಾದ ಬಳಿಕ ಲೆಕ್ಕಪತ್ರಗಳನ್ನು ಪರಿಶೀಲಿಸಲು ಒತ್ತಾಯ ಹೆಚ್ಚಾಗಿತ್ತು. ಇದೇ ಸಂದರ್ಭದಲ್ಲಿ ಉಷಾ ವಿರುದ್ಧ ಹಣ ದುರ್ಬಳಕೆ ಆರೋಪಗಳು ತೀವ್ರಗೊಂಡಿದ್ದವು ಎನ್ನಲಾಗಿದೆ.
ಈ ಕುರಿತು ಉಷಾ ಅವರ ಪತಿ ಪೊಲೀಸರಿಗೆ ದೂರು ನೀಡಿದ್ದು, “ಪತ್ನಿ ಎಲ್ಲಾ ಲೆಕ್ಕಪತ್ರಗಳನ್ನು ನೀಡಿದ್ದರೂ ಕೆಲವರು ನಿರಂತರವಾಗಿ ಕಿರುಕುಳ ನೀಡುತ್ತಿದ್ದರು. ನಮ್ಮ ಕುಟುಂಬಕ್ಕೆ ಜೀವ ಬೆದರಿಕೆ ಹಾಕಲಾಗಿತ್ತು. ಈ ಮಾನಸಿಕ ಒತ್ತಡವೇ ಸಾವಿಗೆ ಕಾರಣವಾಗಿದೆ” ಎಂದು ಆರೋಪಿಸಿದ್ದಾರೆ. ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.