ಉಡುಪಿ ಚಿಕ್ಕಮಗಳೂರು ಕಾಂಗ್ರೇಸ್ ಬಂಡಾಯ ಅಭ್ಯರ್ಥಿ ಅಮೃತ್ ಶೆಣೈ ಪಕ್ಷದಿಂದ ಅಮಾನತು

ಉಡುಪಿ ಎಪ್ರಿಲ್ 6 :ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೇಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಅಮೃತ್ ಶೆಣೈ ಅವರ ಎಐಸಿಸಿ ಸದಸ್ಯತ್ವವನ್ನು ಕೆಪಿಸಿಸಿ ಅಮಾನತು ಮಾಡಿದೆ.

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೇಸ್ ಮತ್ತು ಜೆಡಿಎಸ್ ಅಭ್ಯರ್ಥಿಯಾಗಿ ಪ್ರಮೋದ್ ಮಧ್ವರಾಜ್ ಕಣಕ್ಕಿಳಿದಿದ್ದಾರೆ.

ಆದರೆ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದ ಅಮೃತ್ ಶೆಣೈ ಬಂಡಾಯ ಹೂಡಿ ಪಕ್ಷೇತರರಾಗಿ ಸ್ಪರ್ಧೆಗೆ ನಿರ್ಧರಿಸಿದ್ದರು.

ಈ ಹಿನ್ನಲೆಯಲ್ಲಿ ಎಐಸಿಸಿ ಸದಸ್ಯರಾಗಿದ್ದ ಅಮೃತ್ ಶೆಣೈ ಅವರನ್ನು ಸದ್ಯ 6 ವರ್ಷಗಳ ಕಾಲ ಪಕ್ಷದಿಂದ ಅಮಾನತು ಮಾಡಿ ಆದೇಶಿಸಲಾಗಿದೆ.

ಮೈತ್ರಿ ಬೆಂಬಲಿತ ಅಭ್ಯರ್ಥಿ ವಿರುದ್ಧ ಸ್ಪರ್ಧೆ ನಡೆಸಿದ ಕಾರಣ ಶಿಸ್ತು ಕ್ರಮದ ಹೆಸರಿನಲ್ಲಿ ಕಾಂಗ್ರೆಸ್ ಕ್ರಮಕೈಗೊಂಡಿದೆ.

ಶೆಣೈ ಕಣಕ್ಕಿಳಿದಿರುವುದರಿಂದ ಕಾಂಗ್ರೆಸ್ ಕಾರ್ಯಕರ್ತರ ಮತಗಳು ವಿಭಜನೆಯಾಗುವುದು ಖಚಿತವಾಗಿದ್ದು, ಇದು ಮೈತ್ರಿ ಬೆಂಬಲಿತ ಅಭ್ಯರ್ಥಿಯ ಮೇಲೆ ಪ್ರಭಾವ ಬೀರಲಿದೆ. ಈ ಹಿನ್ನಲೆಯಲ್ಲಿ ಈ ರೀತಿಯ ಕ್ರಮಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.