ಚಿಕ್ಕಬಳ್ಳಾಪುರ ,ಮಾರ್ಚ್ 27: ತೀವ್ರತರದ ಮಾನಸಿಕ ಭೀತಿ ಹಾಗೂ ಮೂಢನಂಬಿಕೆಯಿಂದಾಗಿ ಮಹಿಳೆಯೊಬ್ಬರು ವಿಚಿತ್ರವಾಗಿ ವರ್ತಿಸಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ತೌಡನಹಳ್ಳಿ ಗ್ರಾಮದಲ್ಲಿ ಮಾರ್ಚ್ 26ರಂದು ನಡೆದಿದೆ.

ದೊಡ್ಡಬಳ್ಳಾಪುರ ತಾಲೂಕಿನ ಸೋತೇನಹಳ್ಳಿ ಮೂಲದ ಮಂಜುಳಾ (36) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಇವರು ಕಳೆದ 16 ವರ್ಷಗಳ ಹಿಂದೆ ತೌಡನಹಳ್ಳಿಯ ರಮೇಶ್ ಎಂಬುವವರನ್ನು ವಿವಾಹವಾಗಿದ್ದರು. ದಂಪತಿಗಳ ನಡುವೆ ಯಾವುದೇ ಕೌಟುಂಬಿಕ ಕಲಹಗಳಿರಲಿಲ್ಲ ಎಂದು ತಿಳಿದುಬಂದಿದೆ.
ಇತ್ತೀಚೆಗೆ ಮಂಜುಳಾ ಅವರು ತಮ್ಮ ತವರು ಮನೆಯಲ್ಲಿ ನಡೆದ ಮಾವನ ತಿಥಿ ಕಾರ್ಯದಲ್ಲಿ ಭಾಗವಹಿಸಿ ಬಂದಿದ್ದರು. ಅಲ್ಲಿಂದ ಬಂದ ನಂತರ ಅವರ ನಡವಳಿಕೆಯಲ್ಲಿ ತೀವ್ರ ಬದಲಾವಣೆ ಕಂಡುಬಂದಿತ್ತು. ಯಾರೋ ಒಬ್ಬರು ಸದಾ ತನ್ನ ಕಣ್ಣೆದುರೇ ಇದ್ದಾರೆ ಮತ್ತು ತನಗೆ ಕಾಟ ಕೊಡುತ್ತಿದ್ದಾರೆ ಎಂಬ ಭ್ರಮೆಗೆ (Hallucination) ಅವರು ಒಳಗಾಗಿದ್ದರು.”ಗಂಡು ದೆವ್ವವೊಂದು ನನಗೆ ಕಾಟ ಕೊಡುತ್ತಿದೆ, ದೊಡ್ಡಬಳ್ಳಾಪುರದ ಸುನಿಲ್ ಎಂಬುವವರ ದೃಶ್ಯ ಕಣ್ಣ ಮುಂದೆ ಬರುತ್ತಿದೆ” ಎಂದು ಮಂಜುಳಾ ಅತೀವವಾಗಿ ಚಡಪಡಿಸುತ್ತಿದ್ದರು. ಯಾರೋ ತನ್ನನ್ನು ನಿರಂತರವಾಗಿ ಹಿಂಬಾಲಿಸುತ್ತಿದ್ದಾರೆ ಎಂಬ ಅದೃಶ್ಯ ಭಯ ಅವರನ್ನು ಕಾಡುತ್ತಿತ್ತು.
ಪತ್ನಿಯ ಈ ಸ್ಥಿತಿಯನ್ನು ಕಂಡು ಆತಂಕಗೊಂಡ ಪತಿ ರಮೇಶ್, ಕಳೆದ ಒಂದು ವಾರದಿಂದ ಕೆಲಸಕ್ಕೆ ಹೋಗದೆ ದೇವಸ್ಥಾನ ಹಾಗೂ ಮಂತ್ರವಾದಿಗಳ ಬಳಿ ಅಲೆದಾಡಿದ್ದಾರೆ. ಮೇಲೂರಿನ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಕರೆದೊಯ್ದು ಮಂತ್ರವಾದಿಯೊಬ್ಬರಿಂದ ತಾಯತವನ್ನೂ ಕಟ್ಟಿಸಿದ್ದರು. ಆದರೆ, ಮಾನಸಿಕ ಅಸ್ವಸ್ಥತೆಯೋ ಅಥವಾ ಭೀತಿಯೋ ಎಂಬ ಗೊಂದಲದ ನಡುವೆ ವೈದ್ಯಕೀಯ ಚಿಕಿತ್ಸೆ ಕೊಡಿಸಿದರೂ ಯಾವುದೇ ಫಲ ನೀಡಿರಲಿಲ್ಲ.ಮನೆಯಲ್ಲೇ ಕುಸಿದು ಬಿದ್ದು ಅಸ್ವಸ್ಥಗೊಂಡಿದ್ದ ಮಂಜುಳಾ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ನಂದಿಗಿರಿಧಾಮ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.