ಚೆನ್ನೈ, ಸೆಪ್ಟೆಂಬರ್ 25: ತಮಿಳುನಾಡಿನ ಗುಡಿಯಾಥಮ್‌ನಲ್ಲಿ ಮಂಗಳವಾರ ಹಾಡಹಗಲೇ ವ್ಯಕ್ತಿಯೊಬ್ಬ 3 ವರ್ಷದ ಮಗುವನ್ನು ಅಪಹರಿಸುತ್ತಿರುವ ಆಘಾತಕಾರಿ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಮಗುವನ್ನು ಎತ್ತಿಕೊಂಡು ಕಾರಿನಲ್ಲಿ ಕೂರುವಾಗ ಆ ಮಗುವಿನ ಅಪ್ಪ ಕಾರಿನ ಗ್ಲಾಸ್ ಒಳಗೆ ಕೈಹಾಕಿ ಮಗುವನ್ನು ಎಳೆದುಕೊಳ್ಳಲು ಪ್ರಯತ್ನಿಸಿದ್ದಾರೆ. ಆಗ ಆತನ ಕಣ್ಣಿಗೆ ಮೆಣಸಿನ ಪುಡಿಯನ್ನು ಎರಚಲಾಗಿದೆ. ವಿಷಯ ತಿಳಿದ ಪೊಲೀಸರು ಆ ಬಾಲಕನನ್ನು ವೆಲ್ಲೂರು ಜಿಲ್ಲೆಯಲ್ಲಿ ಕಾಪಾಡಿದ್ದಾರೆ.
ಕರ್ನಾಟಕದ ನಂಬರ್ ಹೊಂದಿರುವ ಕಾರಿನಿಂದ ಹೆಲ್ಮೆಟ್ ಧರಿಸಿದ ವ್ಯಕ್ತಿಯೊಬ್ಬರು ಇಳಿದು ಮನೆಯ ಹೊರಗೆ ಕಾಯುತ್ತಿರುವುದನ್ನು ಸಿಸಿಟಿವಿ ದೃಶ್ಯಾವಳಿಗಳಲ್ಲಿ ನೋಡಬಹುದು. ತನ್ನ ಮಗನೊಂದಿಗೆ ಮನೆಗೆ ಹಿಂದಿರುಗಿದ್ದ ತಂದೆ ತನ್ನ ಸ್ಕೂಟರ್ ಅನ್ನು ಒಳಗೆ ನಿಲ್ಲಿಸುತ್ತಿದ್ದರು, ಅಷ್ಟರಲ್ಲಿ ಮಗುವನ್ನು ಎತ್ತಿಕೊಂಡು ಆರೋಪಿ ಓಡಿದ್ದಾನೆ.



