ಬೆಂಗಳೂರು,ಮಾರ್ಚ್ 28: ರಾಜಧಾನಿಯ ಹೊರವಲಯದಲ್ಲಿ ಸರಗಳ್ಳರ ಅಟ್ಟಹಾಸ ಮುಂದುವರಿದಿದ್ದು, ಹಾಡಹಗಲೇ ಜನಸಂಚಾರವಿರುವ ಪ್ರದೇಶದಲ್ಲೇ ಮಹಿಳೆಯೊಬ್ಬರ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾದ ಘಟನೆ ನೆಲಮಂಗಲ ತಾಲೂಕಿನ ಗುಡೇಮಾರನಹಳ್ಳಿ ಹ್ಯಾಂಡ್ ಪೋಸ್ಟ್ ಬಳಿ ನಡೆದಿದೆ.

ಸ್ಥಳೀಯ ನಿವಾಸಿ ಅಂಬಿಕಾ ಎಂಬವರು ತಮ್ಮ ಸ್ನೇಹಿತೆಯೊಂದಿಗೆ ರಸ್ತೆ ಬದಿಯ ಬೇಕರಿ ಮುಂಭಾಗ ನಿಂತು ಮಾತನಾಡುತ್ತಿದ್ದರು. ಈ ವೇಳೆ ಬೈಕ್ನಲ್ಲಿ ಬಂದ ಇಬ್ಬರು ಅಪರಿಚಿತರು, ಅಲ್ಲಿಯೇ ಜ್ಯೂಸ್ ಕುಡಿಯುವವರಂತೆ ನಟಿಸಿ ಸಮಯಕ್ಕಾಗಿ ಹೊಂಚು ಹಾಕಿದ್ದರು. ಅಂಬಿಕಾ ಅವರು ಮೈಮರೆತಿದ್ದ ಕ್ಷಣದಲ್ಲೇ ಕಿರಾತಕರು ಏಕಾಏಕಿ ಅವರ ಕೊರಳಿಗೆ ಕೈಹಾಕಿ ಚಿನ್ನದ ಸರವನ್ನು ಎಳೆದಿದ್ದಾರೆ.
ಸರವನ್ನು ಎಳೆದ ರಭಸಕ್ಕೆ ಅಂಬಿಕಾ ಅವರು ಸಮತೋಲನ ತಪ್ಪಿ ರಸ್ತೆಯಲ್ಲೇ ಬಿದ್ದಿದ್ದಾರೆ. ಸುಮಾರು 55 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಕಸಿದುಕೊಂಡ ಖದೀಮರು, ಕ್ಷಣಾರ್ಧದಲ್ಲಿ ಬೈಕ್ ಏರಿ ವೇಗವಾಗಿ ಪರಾರಿಯಾಗಿದ್ದಾರೆ. ಈ ಹಠಾತ್ ದಾಳಿಯಿಂದ ಆಘಾತಕ್ಕೊಳಗಾದ ಮಹಿಳೆ ಕಿರುಚಿಕೊಂಡರೂ, ಸಾರ್ವಜನಿಕರು ಬರುವಷ್ಟರಲ್ಲಿ ಕಳ್ಳರು ಅತೀ ವೇಗವಾಗಿ ತಪ್ಪಿಸಿಕೊಂಡಿದ್ದಾರೆ.
ಖದೀಮರ ಈ ಇಡೀ ಕೃತ್ಯವು ಹತ್ತಿರದ ಸಿಸಿಟಿವಿ (CCTV) ಕ್ಯಾಮರಾದಲ್ಲಿ ಸೆರೆಯಾಗಿದೆ. ಜ್ಯೂಸ್ ಕುಡಿಯುವ ನೆಪದಲ್ಲಿ ಬಂದು ನಂತರ ದಾಳಿ ಮಾಡಿದ ರೀತಿ ಕಂಡು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.