ನವದೆಹಲಿ ಜೂನ್ 12 : ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಜಾಗತಿಕ ತೈಲ ಪೂರೈಕೆಯಲ್ಲಿ ಉಂಟಾಗಿರುವ ಅಡಚಣೆ ಹಾಗೂ ದೇಶೀಯ ಮಾರುಕಟ್ಟೆಯಲ್ಲಿನ ಕೊರತೆಯನ್ನು ನೀಗಿಸುವ ಸಲುವಾಗಿ ಕೇಂದ್ರ ಸರ್ಕಾರವು ಇಂಧನ ಮಾರಾಟದ ಮೇಲೆ ಹೊಸ ನಿಯಂತ್ರಣ ಹೇರಿದೆ. ಇನ್ನು ಮುಂದೆ ದೇಶದ ಯಾವುದೇ ಪೆಟ್ರೋಲ್ ಪಂಪ್ಗಳಲ್ಲಿ ಪ್ರತಿ ವಾಹನ ಅಥವಾ ಗ್ರಾಹಕನಿಗೆ ದಿನಕ್ಕೆ ಗರಿಷ್ಠ 200 ಲೀಟರ್ ಡೀಸೆಲ್ ಮಾರಾಟ ಮಾಡಲು ಮಾತ್ರ ಮಿತಿ ವಿಧಿಸಿ ಅಧಿಕೃತ ಆದೇಶ ಹೊರಡಿಸಲಾಗಿದೆ. ಈ ನಿಯಮವು ಮುಂದಿನ 90 ದಿನಗಳವರೆಗೆ (ಮೂರು ತಿಂಗಳು) ಚಾಲ್ತಿಯಲ್ಲಿರಲಿದೆ.

ಹೊಸ ಆದೇಶದ ಪ್ರಕಾರ, ವಾಹನಗಳ ಟ್ಯಾಂಕ್ ಅಥವಾ ಪಿಇಎಸ್ಒ (PESO) ಅನುಮೋದಿತ ಕಂಟೇನರ್ಗಳಿಗೆ ಮಾತ್ರ ಬಂಕ್ಗಳಲ್ಲಿ ಡೀಸೆಲ್ ಮಾರಾಟ ಮಾಡಬೇಕು. ಪ್ರಮುಖವಾಗಿ ಕೈಗಾರಿಕೆಗಳು, ವಾಣಿಜ್ಯ ಸಂಸ್ಥೆಗಳು ಮತ್ತು ಸಾಂಸ್ಥಿಕ ಬೃಹತ್ ಬಳಕೆದಾರರು ಪೆಟ್ರೋಲ್ ಬಂಕ್ಗಳಿಗೆ ಬಂದು ನೇರವಾಗಿ ಪೆಟ್ರೋಲ್ ಹಾಗೂ ಡೀಸೆಲ್ ಖರೀದಿಸುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಇಂತಹ ಬೃಹತ್ ಗ್ರಾಹಕರು ಇನ್ನು ಮುಂದೆ ತಮ್ಮದೇ ಆದ ಸ್ವಂತ ಗ್ರಾಹಕ ಪಂಪ್ಗಳ (Consumer Pumps) ಮೂಲಕವೇ ಇಂಧನ ಪಡೆಯಬೇಕಾಗುತ್ತದೆ.
ಬಂಕ್ಗಳಲ್ಲಿ ಮಾರಾಟವಾಗುವ ಚಿಲ್ಲರೆ ಇಂಧನ ದರ ಹಾಗೂ ಬೃಹತ್ ಬಳಕೆದಾರರಿಗೆ ಕಂಪನಿಗಳು ನೇರವಾಗಿ ನೀಡುವ ದರದ ನಡುವಿನ ಭಾರಿ ವ್ಯತ್ಯಾಸವೇ ಈ ಬಿಕ್ಕಟ್ಟಿಗೆ ಕಾರಣವಾಗಿದೆ. ಉದಾಹರಣೆಗೆ, ದೆಹಲಿಯ ಪೆಟ್ರೋಲ್ ಪಂಪ್ಗಳಲ್ಲಿ ಸಾಮಾನ್ಯ ಗ್ರಾಹಕರಿಗೆ ಡೀಸೆಲ್ ಬೆಲೆ ಲೀಟರ್ಗೆ ₹95.20 ಇದ್ದರೆ, ಬೃಹತ್ ಪ್ರಮಾಣದಲ್ಲಿ ಖರೀದಿಸುವ ಕೈಗಾರಿಕೆಗಳಿಗೆ ಮಾರುಕಟ್ಟೆ ದರ ಲೀಟರ್ಗೆ ₹134.50 ಆಗಿದೆ. ಈ ಲೀಟರ್ಗೆ ಸುಮಾರು ₹39 ರಷ್ಟು ಭಾರಿ ವ್ಯತ್ಯಾಸದಿಂದಾಗಿ ಕೈಗಾರಿಕೆಗಳು ಮತ್ತು ಟೆಲಿಕಾಂ ಟವರ್ ಆಪರೇಟರ್ಗಳು ಪೆಟ್ರೋಲ್ ಬಂಕ್ಗಳಿಗೆ ಮುಗಿಬಿದ್ದು ಇಂಧನ ಖರೀದಿಸಲು ಆರಂಭಿಸಿದ್ದರು. ಇದರಿಂದಾಗಿ ದೇಶದ ಹಲವೆಡೆ ಡೀಸೆಲ್ ಕೊರತೆ ಎದುರಾಗಿತ್ತು.
ಸಾಮಾನ್ಯ ಜನರನ್ನು ಬೆಲೆ ಏರಿಕೆಯಿಂದ ರಕ್ಷಿಸಲು ಸರ್ಕಾರಿ ಸ್ವಾಮ್ಯದ ಐಒಸಿ (IOC), ಬಿಪಿಸಿಎಲ್ (BPCL) ಮತ್ತು ಎಚ್ಪಿಸಿಎಲ್ (HPCL) ತೈಲ ಕಂಪನಿಗಳು ಚಿಲ್ಲರೆ ದರವನ್ನು ಸ್ಥಿರವಾಗಿಟ್ಟಿವೆ. ಆದರೆ ಮೇ ತಿಂಗಳಲ್ಲಿ ಪೆಟ್ರೋಲ್ ಬೇಡಿಕೆ ಶೇ 4.8ರಷ್ಟು ಮತ್ತು ಡೀಸೆಲ್ ಬೇಡಿಕೆ ಶೇ 6.4ರಷ್ಟು ಅಸಹಜವಾಗಿ ಏರಿಕೆಯಾಗಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಸರ್ಕಾರ ಈ ತುರ್ತು ನಿರ್ಬಂಧ ಜಾರಿಗೆ ತಂದಿದೆ.