DAKSHINA KANNADA
ಕರಾವಳಿಯಲ್ಲಿ ವೃತ, ಧ್ಯಾನ -ಪ್ರಾರ್ಥನೆಗಳ ಮೂಲಕ ಶುಭ ಶುಕ್ರವಾರ ಆಚರಣೆ..!

ಮಂಗಳೂರು : ಮನುಕುಲದ ವಿಮೋಚನೆಗಾಗಿ ದೇವ ಪುತ್ರ ಯೇಸು ಕ್ರಿಸ್ತರು ತನ್ನ ಪ್ರಾಣವನ್ನು ಬಲಿದಾನ ಮಾಡುವ ಪವಿತ್ರ ದಿನವಾದ ಶುಭ ಶುಕ್ರವಾರ(ಗುಡ್ ಫ್ರೈಡೇ) ವನ್ನು ಸಮಸ್ತ ಕ್ರೈಸ್ತರಿಂದ ನಾಡಿನಾದ್ಯಂತ ಧ್ಯಾನ ಮತ್ತು ಪ್ರಾರ್ಥನೆಗಳ ಮೂಲಕ ಆಚರಿಸಲಾಗುತ್ತಿದೆ.
ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲೂ ಕ್ರೈಸ್ತ ಭಾಂದವರು ವೃತಾಚರಣೆ ಮಾಡುವ ಮೂಲಕ ಆರಂಭಿಸಿ ಬೆಳಗ್ಗಿನಿಂದ ಪ್ರಾರ್ಥನೆ, ಧ್ಯಾನ, ಯೇಸುವಿನ ಶಿಲುಬೆಯ ಹಾದಿಯಲ್ಲಿ ಪಾಲ್ಗೊಂಡರು. ಮಂಗಳೂರು ಬಿಷಪ್ ಅ.ವಂ. ಡಾ.ಪೀಟರ್ ಪಾವ್ಲ್ ಸಲ್ಡಾನ್ಹ ನಗರದ ಕೊಡಿಯಾಲ್ ಬೈಲ್ ನ ಚಾಪೆಲ್ ನಲ್ಲಿ ಜರುಗಿದ ವಿಶೇಷ ಪ್ರಾರ್ಥನಾ ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದರು. ಮಂಗಳೂರಿನ ಮಿಲಾಗ್ರಿಸ್ ಚರ್ಚ್ ಮೈದಾನಿನಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಶಿಲುಬೆ ಹಾದಿಯನ್ನು ಸಂಘಟಿಸಲಾಗಿತ್ತು. ಸಾವಿರಾರು ಭಕ್ತರು ಈ ಪವಿತ್ರ ಶಿಲುಬೆ ಹಾದಿಯಲ್ಲಿ ಪಾಲ್ಗೊಂಡು ಪುನೀತರಾದರು.

ಗುಡ್ ಫ್ರೈ ಡೇ ವಿಶೇಷ..
ಪಾಪಮಯ ಜೀವನಕ್ಕಾಗಿ ಇಡೀ ಜನಾಂಗವೇ ನಾಶಹೊಂದುವುದರ ಬದಲಾಗಿ, ಮಾನವಕುಲದ ರಕ್ಷಣೆಗಾಗಿ ದೇವಪುತ್ರ ಯೇಸುಕ್ರಿಸ್ತ ತನ್ನ ಪ್ರಾಣತ್ಯಾಗ ಮಾಡಿದ ಪವಿತ್ರದಿನವೇ ಶುಭ ಶುಕ್ರವಾರ. ಯೇಸುಸ್ವಾಮಿಯ ಯಾತನೆ, ಪಾಡು ಹಾಗೂ ಮರಣವನ್ನು ವಿಶ್ವವೇ ಸ್ಮರಿಸಿ ಧ್ಯಾನಿಸುವ ಈ ಶುಭದಿನವನ್ನು ‘ಗುಡ್ ಫೈ›ಡೆ’ ಎಂದು ಕರೆಯುತ್ತಾರೆ. ಏಕೆಂದರೆ ಕರುಣಾಮಯಿ ದೇವರು ಮನುಜಕುಲದ ಸಕಲ ಪಾಪಗಳನ್ನು ಕ್ಷಮಿಸಿ ಮನುಷ್ಯನನ್ನು ಪಾವನಗೊಳಿಸಿದ ದಿನವಿದು. ‘ಬೂದಿ ಬುಧವಾರ’ದಂದು ಆರಂಭವಾದ ‘ತಪಸ್ಸು ಕಾಲ’ವು ವಿಶ್ವದಾದ್ಯಂತ ಸಕಲ ಕ್ರೖೆಸ್ತರಿಗೆ ವರ್ಷದ ಪವಿತ್ರ ಕಾಲ. ಇದು ‘ಪವಿತ್ರ ವಾರ’ದ ಆಚರಣೆಯೊಂದಿಗೆ ಪುನರುತ್ಥಾನ ಅಥವಾ ಈಸ್ಟರ್ ಹಬ್ಬದಂದು ಸಂಪನ್ನಗೊಳ್ಳುತ್ತದೆ. ಈ ಕಾಲದಲ್ಲಿ ಸಂಭ್ರಮ, ಆಚರಣೆಗಳನ್ನು ಬದಿಗಿಟ್ಟು, ಪ್ರಾರ್ಥನೆ, ಉಪವಾಸ ಹಾಗೂ ದಾನ-ಧರ್ಮ ಎಂಬ ಮೂರು ಸಾಧನಗಳ ಮೂಲಕ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ತೊಡಗುತ್ತಾರೆ. ‘ಶುಭ ಶುಕ್ರವಾರ’ ಪವಿತ್ರ ವಾರದ ಪ್ರಮುಖ ಆಚರಣೆಯಾಗಿದೆ.
ಯೇಸು ಕ್ರಿಸ್ತರು ಮೂಲತಃ ಯೆಹೂದ್ಯ ಜನಾಂಗದವರು. ಆದರೆ, ಯೆಹೂದ್ಯ ಧರ್ಮದಲ್ಲಿದ್ದ ಮೂಢನಂಬಿಕೆ, ಧಾರ್ವಿುಕ ಆಷಾಢಭೂತಿತನ, ಅರ್ಥವಿಲ್ಲದ ಕಟ್ಟುಪಾಡುಗಳನ್ನು ಕಟುವಾಗಿ ಟೀಕಿಸಿ, ವಿರೋಧಿಸಿದರು. ‘ಪರಪ್ರೀತಿಯೇ ಸರ್ವಶ್ರೇಷ್ಠ ನಿಯಮ’ ಎಂದು ಬೋಧಿಸಿದರು. ಇದರಿಂದ ಸಿಟ್ಟಿಗೆದ್ದ ಪಟ್ಟಭದ್ರ ಹಿತಾಸಕ್ತಿಗಳು ಅವರನ್ನು ಬಂಧಿಸಿ, ಚಿತ್ರಹಿಂಸೆಗೆ ಒಳಪಡಿಸಿ ಅವರಿಗೆ ಶಿಲುಬೆಯ ಮರಣದ ಶಿಕ್ಷೆಯನ್ನು ನೀಡಿದರು. ಯೇಸುಸ್ವಾಮಿಯ ಕಾಲದಲ್ಲಿ ಶಿಲುಬೆ ಪವಿತ್ರ ಹಾಗೂ ಗೌರವಯುತ ಲಾಂಛನವಾಗಿರದೆ ನೇಣುಗಂಬದಂತೆ ಅಪಮಾನದ ಲಾಂಛನವಾಗಿತ್ತು. ಕುಖ್ಯಾತ ಪಾತಕಿಗಳನ್ನು ಗಲ್ಲಿಗೇರಿಸುವ ಶಿಲುಬೆ ಅಮಂಗಳದ ಸಂಕೇತವೆನಿಸಿತ್ತು. ಯೇಸುಸ್ವಾಮಿ ಮೃತಪಟ್ಟ ಶಿಲುಬೆ ಮನುಜಕುಲಕ್ಕೆ ವಿಮೋಚನೆ ನೀಡುವ ಹಾಗೂ ಶಾಂತಿಯ ಜೀವನಕ್ಕೆ ಆಹ್ವಾನವೀಯುವ ದಿವ್ಯಸಾಧನ. ಯೇಸುಕ್ರಿಸ್ತರು ಮನುಷ್ಯನ ರಕ್ಷಣೆಗಾಗಿ, ಸ್ವಂತ ಇಚ್ಛೆಯಿಂದ ಅದನ್ನು ಆಲಂಗಿಸಿದ ನಂತರ ಅದು ವಿಮೋಚನೆಯ ಹೆಗ್ಗುರುತಾಗಿ ಮಾರ್ಪಟ್ಟಿತು.
ಕ್ರೖೆಸ್ತರ ಜೀವನದಲ್ಲಿ ಶಿಲುಬೆಗೆ ವಿಶೇಷವಾದ ಸ್ಥಾನವಿದೆ. ಕ್ರೖೆಸ್ತರನ್ನು ಶಿಲುಬೆಯಿಂದ ಗುರುತಿಸಲಾಗುತ್ತದೆ. ಯಾವುದೇ ಕ್ರೖೆಸ್ತ ವಿಶ್ವಾಸಿಯ ದಿನವು ಶಿಲುಬೆಯ ಗುರುತಿಲ್ಲದೆ ಆರಂಭಗೊಳ್ಳುವುದಿಲ್ಲ, ಕೊನೆಗೊಳ್ಳುವುದೂ ಇಲ್ಲ. ತಪಸ್ಸುಕಾಲದ ಪ್ರಮುಖ ಭಕ್ತಿಕಾರ್ಯಗಳಲ್ಲಿ ಶಿಲುಬೆಯ ಹಾದಿ ಹಾಗೂ ಶಿಲುಬೆಯ ಆರಾಧನೆ ಬಹುಮುಖ್ಯವಾಗಿವೆೆ. ಕೆಳದರ್ಜೆಯ ಪಾತಕಿಗಳನ್ನು ಗಲ್ಲಿಗೇರಿಸುವುದಕ್ಕಾಗಿ ಬಳಕೆಯಾಗುತ್ತಿದ್ದ ಶಿಲುಬೆಯನ್ನು ಯೇಸುಕ್ರಿಸ್ತರು ಮನುಷ್ಯನ ರಕ್ಷಣೆಗಾಗಿ, ಸ್ವಂತ ಇಚ್ಛೆಯಿಂದ ಅದನ್ನು ಆಲಂಗಿಸಿ ಅದರಲ್ಲಿ ತೂಗಾಡಿ ಮೃತಪಟ್ಟ ನಂತರ ಅದು ವಿಮೋಚನೆಯ ಪವಿತ್ರ ಲಾಂಛನವಾಗಿ ಮಾರ್ಪಟ್ಟಿದೆ. ಲಂಬ ಭುಜವನ್ನು, ಸಮಾನಾಂತರ ಭುಜವು ತುಂಡರಿಸುವಂತಿರುವ ಶಿಲುಬೆ ಮಾನವನ ಅಹಂಕಾರ, ಸ್ವಾರ್ಥಗಳಿಗೊಂದು ಸವಾಲು. ಮನುಷ್ಯ ತನ್ನ ಸ್ವಾರ್ಥವನ್ನು ತ್ಯಜಿಸಿ ಪರಪ್ರೀತಿಯಲ್ಲಿ ಬಾಳಲು ದೇವರು ತೋರುವ ದಾರಿಯೇ ಶಿಲುಬೆಯ ಹಾದಿ.