Connect with us

    LATEST NEWS

    ಚಾರಿಟಿ ನೆಪದಲ್ಲಿ ವಿದ್ಯಾರ್ಥಿನಿಯರನ್ನು ಭಿಕ್ಷಾಟನೆಗೆ ದೂಡಿದ ಅಲೋಶಿಯಸ್ ಕಾಲೇಜು

    ಮಂಗಳೂರು, ಸೆಪ್ಟೆಂಬರ್ 02 : ಬಡ ಮಕ್ಕಳಿಗೆ ನೆರವು ನೀಡುವ ಕಾಸ್ ( CAUSE) ಎನ್ನುವ ಹೆಸರಿನ ವಿನೂತನ ಭಿಕ್ಷಾಟನೆಯನ್ನು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜು ನಗರದ ಕೆ. ಎಸ್ ರಾವ್ ರಸ್ತೆಯ ಸಿಟಿ ಸೆಂಟರ್ ಮಾಲ್ ನಲ್ಲಿ ಹಮ್ಮಿಕೊಂಡಿತ್ತು.

    ಅಲೋಶಿಯಸ್ ಪಿಯು ಕಾಲೇಜು ಕಳೆದ ನಾಲ್ಕು ವರ್ಷಗಳಿಂದ ಮಾಲ್ ಗಳಲ್ಲಿ ಹೆಚ್ಚಾಗಿ ಕಾಲೇಜಿನ ವಿದ್ಯಾರ್ಥಿನಿಯರನ್ನೇ ಬಳಸಿಕೊಂಡು ಭಿಕ್ಷಾಟನೆ ಹಾಗೂ ಮೋಜು ಮಸ್ತಿಯನ್ನು ಹಮ್ಮಿಕೊಂಡು ಬರುತ್ತಿದೆ. ಸಂತ ಅಲೋಶಿಯಸ್ ಕಾಲೇಜಿನ ಆಡಳಿತ ಮಂಡಳಿ ಪ್ರತಿಯೊಬ್ಬ ವಿದ್ಯಾರ್ಥಿನಿಯೂ ಈ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕೆಂಬ ಫರ್ಮಾನನ್ನೂ ಹೊರಡಿಸಿರುವ ಕಾರಣಕ್ಕಾಗಿ ವಿದ್ಯಾರ್ಥಿನಿಯರು ಮನಸ್ಸಿಲ್ಲದ ಮನಸ್ಸಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಈ ಭಿಕ್ಷಾಟನೆ ಹಾಗೂ ಮೈಕೈ ಕುಣಿಸುವ ಕುಣಿತಗಳಲ್ಲಿ ಪಾಲ್ಗೊಂಡಿದ್ದರು.

    ಮಾಲ್ ಗಳಿಗೆ ಬರುವ ಪ್ರತಿಯೊಬ್ಬ ಗ್ರಾಹಕನ ಮುಂದೆ ಭಿಕ್ಷಾಟನೆಯ ಪೆಟ್ಟಿಗೆಯನ್ನು ಹಿಡಿದು ಬರುವ ವಿದ್ಯಾರ್ಥಿನಿಯರು ಸಿಕ್ಕ ಸಿಕ್ಕವರಲ್ಲಿ ಕೈಯೊಡ್ಡುತ್ತಿರುವ ಅಸಹ್ಯ ದೃಶ್ಯ ಕಂಡುಬರುತ್ತಿತ್ತು. ಪೋಷಕರು ತಮ್ಮ ಮಕ್ಕಳನ್ನು ಕಾಲೇಜಿಗೆ ವಿದ್ಯಾಭ್ಯಾಸಕ್ಕೆಂದು ಕಳುಹಿಸುತ್ತಿದ್ದು, ತಮ್ಮ ಮಕ್ಕಳನ್ನು ಇಂಥ ಅಸಹ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ವಿಚಾರವನ್ನು ಕಾಲೇಜು ಆಡಳಿತ ಪೋಷಕರ ಗಮನಕ್ಕೆ ತರದೇ ಮಾಡುತ್ತಿದೆ. ಪ್ರಾಯಕ್ಕೆ ಬಂದ ಹೆಣ್ಣು ಮಕ್ಕಳನ್ನು ಲಕ್ಷಾಂತರ ರೂಪಾಯಿಗಳ ಡೊನೇಶನ್ ನೀಡಿ ಶಿಕ್ಷಣಕ್ಕಾಗಿ ಅಲೋಶಿಯಸ್ ಕಾಲೇಜಿಗೆ ಕಳುಹಿಸುತ್ತಿರುವ ಪೋಷಕರಿಗೆ ಎಷ್ಟರ ಮಟ್ಟಿಗೆ ಈ ವಿಚಾರ ತಿಳಿದಿದೆ ಹಾಗೂ ಆ ವಿಚಾರವನ್ನು ಕಾಲೇಜು ಆಡಳಿತ ಮಂಡಳಿ ಪೋಷಕರಿಗೆ ತಿಳಿಸುವ ಪ್ರಯತ್ನವನ್ನಾದರೂ ನಡೆಸಿದೆಯೇ ಎನ್ನುವ ಸಂಶಯಗಳೂ ಇದೀಗ ಹುಟ್ಟಿಕೊಂಡಿದೆ.

    ಮರ್ಯಾದಸ್ಥ ಯಾವ ಪೋಷಕನೂ ತನ್ನ ವಯಸ್ಸಿಗೆ ಬಂದ ಹೆಣ್ಣು ಮಗಳನ್ನು ಕಂಡ ಕಂಡವರ ಮುಂದೆ ಭಿಕ್ಷೆ ಎತ್ತುವುದನ್ನು ಸಹಿಸಲು ಸಾಧ್ಯವಿಲ್ಲ. ಚಾರಿಟಿ ಹೆಸರಿನಲ್ಲಿ ಶನಿವಾರ ಅಲೋಶಿಯಸ್ ಕಾಲೇಜು ಸಿಟಿ ಸೆಂಟರ್ ನಲ್ಲಿ ನಡೆಸಿರುವುದು ಮೋಜು ಮಸ್ತಿಯೂ ಆಗಿತ್ತು. ಸಿಟಿ ಸೆಂಟರ್ ನಲ್ಲಿ ಪ್ರತಿದಿನವೂ ಕಾಣಸಿಗುವ ಕೆಲವು ಚಾಲಿಪೋಲಿಲು ಹಾಗೂ ಕೆಲ ಕಾಲೇಜಿನ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಯಾವೊಬ್ಬ ಗ್ರಾಹಕನೂ ಈ ಕಡೆ ಗಮನವನ್ನೇ ಹರಿಸಿಲ್ಲ ಎನ್ನುವುದು ಕಾರ್ಯಕ್ರಮದ ಗ್ರೌಂಡ್ ರಿಪೋರ್ಟ್ ಮಾಡಿದ ದಿ ಮಂಗಳೂರು ಮಿರರ್ ಅವಗಾಹನೆಗೆ ಬಂದಿದೆ. ಕಾರ್ಯಕ್ರಮದ ಇಂಚು ಇಂಚನ್ನೂ ವೀಕ್ಷಿಸಿದ ಮಿರರ್ ವರದಿಗಾರರಿಗೆ ಇದು ಚಾರಿಟಿ ಕಾರ್ಯಕ್ರಮದ ಬದಲು ದಂಧೆಯೊಂದಿಗೆ ಮೋಜು ಮಸ್ತಿ ಕಾರ್ಯಕ್ರಮದಂತೆಯೇ ಕಂಡು ಬಂತು. ಅಲ್ಲದೆ ಪಿಯು ನಲ್ಲಿ ಕಲಿಯುತ್ತಿರುವ ಮಕ್ಕಳು ಇನ್ನೂ ಅಪ್ರಾಪ್ತರಾಗಿದ್ದು, ಅವರನ್ನು ಸಾರ್ವಜನಿಕ ಸ್ಥಳಗಳಲ್ಲಿ ಹಣ ಸಂಗ್ರಹಿಸುವ ಕಾರ್ಯಕ್ರಮಕ್ಕೆ ಬಳಸಿರುವುದೂ ಮಕ್ಕಳ ಹಕ್ಕುಗಳ ಕಾಯ್ದೆಯ ಉಲ್ಲಂಘನೆಯೂ ಆಗಿದೆ.
    ಕಾಲೇಜಿನ ಮೂಲಗಳ ಪ್ರಕಾರ ಡ್ಯಾನ್ಸ್ ನಲ್ಲಿ ಇಷ್ಟವಿರುವ ವಿದ್ಯಾರ್ಥಿಗಳನ್ನು ಕಾಲೇಜು ಆಡಳಿತ ಮಂಡಳಿ ಹೆಕ್ಕಿಕೊಂಡು ಬಳಿಕ ಅವರಲ್ಲಿ ಕಾಲೇಜಿನಲ್ಲೇ ಡ್ಯಾನ್ಸ್ ಕಾರ್ಯಕ್ರಮ ನೀಡುವುದಕ್ಕಾಗಿ ಈ ರೀತಿಯ ಆಯ್ಕೆ ಎನ್ನುವುದನ್ನು ವಿದ್ಯಾರ್ಥಿಗಳಿಗೆ ಆರಂಭದಲ್ಲಿ ತಿಳಿ ಹೇಳಲಾಗಿತ್ತು. ಆದರೆ ಕ್ರಮೇಣ ಡ್ಯಾನ್ಸ್ ಮಾಡುವ ವಿದ್ಯಾರ್ಥಿಗಳಿಗೆ ಚಾರಿಟಿ ಹೆಸರಿನಲ್ಲಿ ಮಾಲ್ ಗಳಲ್ಲಿ ಸಾರ್ವಜನಿಕರ ಮುಂದೆ ಮೈ ಕೈ ಕುಣಿಸಿ ಹಣ ಸಂಗ್ರಹಣೆ ಮಾಡುವ ಆದೇಶವನ್ನೂ ನೀಡಿದ್ದರು.

    ಆದರೆ ಈ ಡ್ಯಾನ್ಸ್ ಟೀಮ್ ನಲ್ಲಿದ್ದ ಕೆಲವು ಪದವಿ ತರಗತಿಯ ಮಕ್ಕಳು ಕಾಲೇಜಿನ ಈ ಕಾರ್ಯಕ್ರಮಕ್ಕೆ ತಮ್ಮ ವಿರೋಧವನ್ನು ವ್ಯಕ್ತಪಡಿಸಿ ಡ್ಯಾನ್ಸ್ ಟ್ರೂಪ್ ನಿಂದ ಹೊರ ನಡೆದಿದ್ದರು. ಆದರೆ ಪಿಯು ಶಿಕ್ಷಣ ಪಡೆಯುತ್ತಿದ್ದ ಮಕ್ಕಳನ್ನು ಗದರಿಸಿ ಕಡ್ಡಾಯವಾಗಿ ಡ್ಯಾನ್ಸ್ ಮಾಡುವಂತೆ ಎಚ್ಚರಿಕೆಯನ್ನೂ ನೀಡಲಾಗಿತ್ತು ಎನ್ನುವ ವಿಚಾರ ಬಯಲಾಗಿದೆ. ಈ ವಿಚಾರವನ್ನು ಮಕ್ಕಳು ಪೋಷಕರ ಗಮನಕ್ಕೂ ತಂದಿದ್ದರಲ್ಲದೆ, ಕೆಲವು ಮಕ್ಕಳು ಡ್ಯಾನ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎನ್ನುವ ರಂಪಾಟವನ್ನೂ ಮನೆಯಲ್ಲಿ ಮಾಡಿದ್ದಾರೆ ಎನ್ನುವ ವಿಚಾರ ಪೋಷಕರ ಮೂಲಕ ತಿಳಿದು ಬಂದಿದೆ.

    ಸಹಾಯ ಮಾಡುವ ಉದ್ಧೇಶದಿಂದಲೇ ಈ ಕಾರ್ಯಕ್ರಮವನ್ನು ಸಂತ ಅಲೋಶಿಯಸ್ ಕಾಲೇಜು ಹಮ್ಮಿಕೊಂಡಿದ್ದೇ ಆದಲ್ಲಿ ತನ್ನದೇ ಕಾಲೇಜಿನ ಆಡಳಿತದ ವ್ಯಾಪ್ತಿಗೆ ಬರುವ ಸಭಾಂಗಣದಲ್ಲಿ ಈ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಮಾಡಬಹುದಿತ್ತು. ಅಲ್ಲದೆ ಚಾರಿಟಿಗೋಸ್ಕರವೇ ಕೆಲಸ ಮಾಡುವ ಕೆಲ ಸೆಲೆಬ್ರಿಟಿಗಳನ್ನು ಕರೆಸಿ ಇನ್ನಷ್ಟು ಧನ ಸಹಾಯವನ್ನು ಸಮಾಜದಿಂದ ಪಡೆಯಬಹುದಿತ್ತು. ಅದನ್ನು ಬಿಟ್ಟು, ಹೆಣ್ಣು ಮಕ್ಕಳ ಕೈ ಮೈ ಮುಟ್ಟಿ ಯಾವಾಗಲೂ ಕೋಮು ಘರ್ಷಣೆಗಳಾಗುತ್ತಿರುವ ಸಿಟಿ ಸೆಂಟರ್ ನಂತಹ ಮಾಲ್ ಗಳಲ್ಲಿ ಹೆಣ್ಣು ಮಕ್ಕಳಿಗೆ ಅರ್ಧಂಬರ್ದ ಬಟ್ಟೆಗಳನ್ನು ಹಾಕಿಸಿ ಇಂಥಹ ಮೋಜು ಮಸ್ತಿಯನ್ನು ಮಾಡುವ ಆಗತ್ಯವೇನಿತ್ತು.

    ಅಲ್ಲದೆ ಸಂತ ಅಲೋಶಿಯಸ್ ಆಡಳಿತ ಮಂಡಳಿ ಲಕ್ಷಾಂತರ ರೂಪಾಯಿಗಳ ಡೊನೇಷನ್ ಪಡೆದು ಶಿಕ್ಷಣವನ್ನು ನೀಡುವ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದು, ಅಲ್ಲಿ ನೆನಪಿಗೆ ಬರದ ಬಡ ಮಕ್ಕಳು, ದಿಡೀರನೆ ಅಪ್ರಾಪ್ತ ಮಕ್ಕಳನ್ನು ಮಾಲ್ ಗಳಲ್ಲಿ ಭಿಕ್ಷಾಟನೆಗೆ ಮಾಡಿಸಲು ಹೊರಟಿರುವುದು ಚಾರಿಟಿ ಹೆಸರಿನಲ್ಲಿ ಹಣ ಮಾಡುವ ಇನ್ನೊಂದು ದಂಧೆಯೇ ಎನ್ನುವ ಸಂಶಯಗಳೂ ಮೂಡುತ್ತಿದೆ. ಈ ಕಾರ್ಯಕ್ರಮದಲ್ಲಿ ಅಲೋಶಿಯಸ್ ಕಾಲೇಜಿನ ಶಿಕ್ಷಕರ, ಪ್ರಾಧ್ಯಾಪಕರ ಎಷ್ಟು ಮಕ್ಕಳು ಭಾಗವಹಿಸಿದ್ದಾರೆ…! ? ಈ ಕಾರ್ಯಕ್ರಮ ಕೇವಲ ಸಿಟಿ ಸೆಂಟರ್ ಗೆ ಮಾತ್ರ ಸೀಮಿತವಾಗಿರದೆ, ಸೆಪ್ಟಂಬರ್ 3 ರ ಆದಿತ್ಯವಾರ ಸಂಜೆ 4 ಗಂಟೆಗೆ ನಗರದ ಪಾಂಡೇಶ್ವರದಲ್ಲಿರುವ ಇನ್ನೊಂದು ಮಾಲ್ ಆದ ಫೋರಂ ಫಿಜಾ ಮಾಲ್ ನಲ್ಲೂ ಆಯೋಜಿಸಲಾಗಿದೆ. ಈಗಲಾದರೂ ಪ್ರಜ್ಞಾವಂತ

    ಪೋಷಕರು, ಮಕ್ಕಳ ಪಾಲಕರು ಹಾಗೂ ವಿದ್ಯಾರ್ಥಿ ಸಂಘಟನೆಗಳು ಕಾಲೇಜಿನ ಈ ದಂಧೆಯನ್ನು ತಡೆಯುವ ಪ್ರಯತ್ನ ಮಾಡಬೇಕಿದೆ.

    ವಿಡಿಯೋ

    Share Information
    Advertisement
    Click to comment

    You must be logged in to post a comment Login

    Leave a Reply