ಹುಷಾರ್ ! ಸಾಮಾಜಿಕ ಜಾಲತಾಣದಲ್ಲಿ ನೋಟಾ ಪರ ಅಭಿಯಾನ ನಡೆಸಿದರೆ ಬೀಳುತ್ತೆ ಕೇಸ್

ಉಡುಪಿ ಎಪ್ರಿಲ್ 2: ಚುನಾವಣೆಯಲ್ಲಿ ನೋಟಾ ಪರ ಮತದಾನ ಮಾಡುವಂತೆ ಅಭಿಯಾನ ನಡೆಸಿದರೆ ಅವರ ಮೇಲೆ ಪ್ರಕರಣ ದಾಖಲಾಗುತ್ತದೆ ಎಂದು ಉಡುಪಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಾಪಾಟಿ ಎಚ್ಚರಿಕೆ ನೀಡಿದ್ದಾರೆ.

ಕರಾವಳಿ ಜಿಲ್ಲೆಗಳಾದ ಉಡುಪಿ ಮತ್ತು ದಕ್ಷಿಣಕನ್ನಡ ಜಿಲ್ಲೆಗಳಲ್ಲಿ ವಿವಿಧ ಪಕ್ಷಗಳಲ್ಲಿ ಟಿಕೆಟ್ ವಂಚಿತ ಅಭ್ಯರ್ಥಿಗಳ ಪರ ಬೆಂಬಲಿಗರು ನೋಟಾ ಪರ ಮತದಾನ ಮಾಡುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಪ್ರಾರಂಭಿಸಿದ್ದರು. ಈ ಹಿನ್ನಲೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಉಡುಪಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ನೋಟಾ ಬಗ್ಗೆ ಮಾಹಿತಿ ನೀಡುವುದು ತಪ್ಪಲ್ಲ. ಆದ್ರೆ ನೋಟಾ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡುವಂತಿಲ್ಲ. ನೋಟಾ ಕೇವಲ ಒಂದು ಆಯ್ಕೆ ಮಾತ್ರ. ಇದು ದೇಶದ ಮತದಾರರ ವೈಯಕ್ತಿಕ ಹಕ್ಕು. ಹೀಗಾಗಿ ನೋಟಾಕ್ಕೆ ಮತಹಾಕಿ ಎಂದು ಪ್ರಚಾರ ಮಾಡುವುದು ಕಾನೂನು ಬಾಹಿರ. ಸಾಮಾಜಿಕ ಜಾಲತಾಣದಲ್ಲಿ ನೋಟಾ ಅಭಿಯಾನ ಮಾಡುವಂತಿಲ್ಲ ಎಂದು ಎಚ್ಚರಿಕೆ ನೀಡಿದರು.

ನೋಟಾ ಬಗ್ಗೆ ಯಾರೂ ಎಲ್ಲೂ ಪ್ರಚಾರ ಕೊಡಬಾರದು. ನೋಟಾ ಬಗ್ಗೆ ಮಾಹಿತಿ ನೀಡುವ ಅವಕಾಶ ಇದೆ. ಆದ್ರೆ ಅದನ್ನೇ ರಾಜಕೀಯಕ್ಕೆ ಬಳಸುವಂತಿಲ್ಲ. ಹೀಗೆ ಮಾಡಿ ಕಾನೂನು ಉಲ್ಲಂಘಿಸಿದರೆ ಅವರ ಮೇಲೆ ಪ್ರಕರಣ ದಾಖಲಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.

ಈಗಾಗಲೇ ಎರಡು ಜಿಲ್ಲೆಗಳಲ್ಲಿ ಟಿಕೆಟ್ ವಂಚಿತ ವಿವಿಧ ಪಕ್ಷಗಳ ಅಭ್ಯರ್ಥಿಗಳ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ನೋಟಾ ಪರ ಮತ ಚಲಾಯಿಸುವಂತೆ ಅಭಿಯಾನ ಪ್ರಾರಂಭಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನೋಟಾದ ಬಗ್ಗೆ ಭಾರೀ ಚರ್ಚೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯವರು ಈ ಎಚ್ಚರಿಕೆ ನೀಡಿದ್ದಾರೆ.