ಕನ್ನಡ ಹಾಗೂ ತೆಲುಗು ಚಿತ್ರರಂಗದ ಜನಪ್ರಿಯ ಗಾಯಕಿ ಮಂಗ್ಲಿ ಅಲಿಯಾಸ್ ಸತ್ಯವತಿ ರಾಥೋಡ್ ಅವರಿಗೆ ಈಗ ಕಾನೂನು ಸಂಕಷ್ಟ ಎದುರಾಗಿದೆ. ಮೈಕ್ರೋ ಫೈನಾನ್ಸ್ ಹೆಸರಿನಲ್ಲಿ ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ಹಣ ಸಂಗ್ರಹಿಸಿ ವಂಚಿಸಿದ ಆರೋಪದ ಮೇಲೆ ಮಂಗ್ಲಿ ಹಾಗೂ ಅವರ ಸಹೋದರ ಸೇರಿದಂತೆ ಐವರ ವಿರುದ್ಧ ಹೈದರಾಬಾದ್ನ ಪಂಜಗುಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಾಯಕಿ ಮಂಗ್ಲಿ ಹಾಗೂ ಅವರ ಸಹೋದರ ಶಿವ ಪ್ರಮುಖ ಪಾತ್ರವಹಿಸಿರುವ ಮೈಕ್ರೋ ಫೈನಾನ್ಸ್ ಸಂಸ್ಥೆಯು, ಸಾರ್ವಜನಿಕರಿಗೆ ಹೆಚ್ಚಿನ ಲಾಭದ ಆಮಿಷವೊಡ್ಡಿ ಹಣ ಹೂಡಿಕೆ ಮಾಡುವಂತೆ ಪ್ರೇರೇಪಿಸಿತ್ತು ಎನ್ನಲಾಗಿದೆ. ಮಂಗ್ಲಿ ಅವರ ಜನಪ್ರಿಯತೆಯನ್ನು ನಂಬಿದ ಸುಮಾರು 100ಕ್ಕೂ ಹೆಚ್ಚು ಜನರು ಈ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿದ್ದರು. ಈ ಮೂಲಕ ಸುಮಾರು 9.5 ರಿಂದ 10 ಕೋಟಿ ರೂಪಾಯಿಗಳಷ್ಟು ಮೊತ್ತವನ್ನು ಸಂಗ್ರಹಿಸಿ, ಬಳಿಕ ನಿಗದಿತ ಅವಧಿ ಮುಗಿದರೂ ಅಸಲು ಮತ್ತು ಲಾಭಾಂಶ ನೀಡದೆ ಹೂಡಿಕೆದಾರರನ್ನು ಸತಾಯಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಈ ವಂಚನೆಯಿಂದ ಕಂಗಾಲಾದ ಸಂತ್ರಸ್ತರು ಕಾನೂನು ನೆರವಿಗಾಗಿ ವಕೀಲ ಸುಬ್ಬರಾವ್ ಅವರನ್ನು ಸಂಪರ್ಕಿಸಿದ್ದರು. ಸಂತ್ರಸ್ತರ ಪರವಾಗಿ ವಕೀಲರು ಹಣ ವಾಪಸ್ ನೀಡುವಂತೆ ಒತ್ತಾಯಿಸಿದಾಗ, ಮಂಗ್ಲಿ ಮತ್ತು ಅವರ ಸಹೋದರ ಶಿವ ಅವರು ತಮಗೆ ದೂರವಾಣಿ ಕರೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಸುಬ್ಬರಾವ್ ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ. ಈ ಪ್ರಕರಣದಲ್ಲಿ ಚಿತ್ರ ನಿರ್ದೇಶಕ ವೇಣು ಉಡುಗುಲ ಅವರು ಸಹ ಬೆದರಿಕೆ ಹಾಕುವಲ್ಲಿ ಭಾಗಿಯಾಗಿದ್ದಾರೆ ಎಂಬುದು ದೂರಿನಲ್ಲಿರುವ ಮತ್ತೊಂದು ಸ್ಫೋಟಕ ಅಂಶವಾಗಿದೆ.
ದೂರುದಾರರ ಹೇಳಿಕೆ ಮತ್ತು ಪ್ರಾಥಮಿಕ ಪುರಾವೆಗಳನ್ನು ಆಧರಿಸಿ ಪಂಜಗುಟ್ಟ ಪೊಲೀಸರು ಮಂಗ್ಲಿ, ಶಿವ, ರಾಮಾವತ್ ಮಧು, ಪಾಲ್ ದಿಯಾ ಭರತ್ ಚೌಹಾಣ್ ಮತ್ತು ಪಾಲ್ ದಿಯಾ ಶೈಲಜಾ ಚೌಹಾಣ್ ಅವರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 351 (2) (ಕ್ರಿಮಿನಲ್ ಬೆದರಿಕೆ) ಹಾಗೂ ಸೆಕ್ಷನ್ 352 (ಉದ್ದೇಶಪೂರ್ವಕ ಅವಮಾನ) ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.