ಕೋಝಿಕ್ಕೋಡ್ ಜನವರಿ 20: ರಶ್ ಇದ್ದ ಬಸ್ ನಲ್ಲಿ ಮೈಮುಟ್ಟಿ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ಅದರ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿ ವ್ಯಕ್ತಿಯೊಬ್ಬನ ಸಾವಿಗೆ ಕಾರಣಳಾಗಿದ್ದ ಯುವತಿಯ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

ವಡಕರದ ಶಿಮ್ಜಿತಾ ಮುಸ್ತಫಾ (35) ವಿರುದ್ಧ ಕೋಝಿಕೋಡ್ ವೈದ್ಯಕೀಯ ಕಾಲೇಜು ಪೊಲೀಸರು ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಾನುವಾರ, ಗೋವಿಂದಪುರಂನಲ್ಲಿ ವಾಸಿಸುತ್ತಿದ್ದ ಪುತಿಯಾರ ಮೂಲದ ದೀಪಕ್ ಯು , ತಮ್ಮ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಜವಳಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ದೀಪಕ್, ಕೆಲಸದ ನಿಮಿತ್ತ ಶುಕ್ರವಾರ ಕಣ್ಣೂರಿಗೆ ಸಾರಿಗೆ ಬಸ್ನಲ್ಲಿ ಪ್ರಯಾಣ ಬೆಳೆಸಿದ್ದರು. ಅದೇ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮುಸ್ತಫಾ, ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆಂದು ಆರೋಪಿಸಿ ವೀಡಿಯೊ ರೆಕಾರ್ಡ್ ಮಾಡಿದ್ದಾನೆ ಎನ್ನಲಾಗಿದೆ.

ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಪ್ರಸಾರವಾಗಿದ್ದು, ದೀಪಕ್ ಅವರ ಗಮನಕ್ಕೆ ಬಂದ ನಂತರ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ಸಂಬಂಧಿಕರು ತಿಳಿಸಿದ್ದಾರೆ. ಪೊಲೀಸರು ಆರಂಭದಲ್ಲಿ ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದರು.
ಆದರೆ, ಕುಟುಂಬ ಸದಸ್ಯರ ದೂರಿನ ಮೇರೆಗೆ, ಆತ್ಮಹತ್ಯೆಗೆ ಪ್ರಚೋದನೆಗಾಗಿ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 108 ರ ಅಡಿಯಲ್ಲಿ ಹೊಸ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೇರಳ ರಾಜ್ಯ ಮಾನವ ಹಕ್ಕುಗಳ ಆಯೋಗವು ಘಟನೆಯ ಬಗ್ಗೆ ಪೊಲೀಸ್ ತನಿಖೆಗೆ ಆದೇಶಿಸಿದೆ ಮತ್ತು ಒಂದು ವಾರದೊಳಗೆ ವರದಿ ಸಲ್ಲಿಸುವಂತೆ ಉತ್ತರ ವಲಯ ಪೊಲೀಸ್ ಉಪ ಮಹಾನಿರ್ದೇಶಕ (ಡಿಐಜಿ) ಅವರಿಗೆ ನಿರ್ದೇಶಿಸಿದೆ. ಫೆಬ್ರವರಿ 19 ರಂದು ಜಿಲ್ಲೆಯಲ್ಲಿ ನಡೆಯಲಿರುವ ಆಯೋಗದ ಸಭೆಯಲ್ಲಿ ಈ ಪ್ರಕರಣವನ್ನು ಪರಿಗಣಿಸಲಾಗುತ್ತದೆ.
ದೀಪಕ್ ಆತ್ಮಹತ್ಯೆ ಬೆನ್ನಲ್ಲೇ ಕೇರಳದ ಭಾರೀ ಆಕ್ರೋಶ ವ್ಯಕ್ತವಾಗಿತ್ತು, ಧರ್ಮ ಜಾತಿ ಲೆಕ್ಕಿಸದೇ ಸಾರ್ವಜನಿಕರು ಯುವತಿಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಯುವತಿ ಮಾತ್ರ ತಾನು ಮಾಡಿದ್ದು ಸರಿ ಎಂದು ಮಾಧ್ಯಮಗಳ ಮುಂದೆ ಹೇಳಿದ್ದಾಳೆ.