ಮಂಗಳೂರು, ಜನವರಿ 31: ಸ್ವಂತ ಮನೆ ಅನ್ನೋದು ಎಲ್ಲರಲ್ಲೂ ಇರುವ ಕನಸು. ಪುಟ್ಟ ಮನೆಯಾಗಿರಲಿ, ದೊಡ್ಡ ಮನೆಯಾಗಿರಲಿ ಆ ಮನೆಯಲ್ಲಿ ತನ್ನ ಜೀವಮಾನದಲ್ಲಿ ಎದುರಿಸಿದ ಕಷ್ಟ-ಸುಖಗಳು ಪ್ರತಿಫಲಿಸಬೇಕು ಎನ್ನುವ ಇಚ್ಛೆ ಎಲ್ಲರಲ್ಲೂ ಇರೋದು ಸಹಜವೇ. ಇಂತಹುದೇ ಯೋಚನೆಯೊಂದಿಗೆ ಮಂಗಳೂರಿನಲ್ಲೊಬ್ಬ ಕಾರ್ಟೂನಿಸ್ಟ್ ಚಿಕ್ಕದಾದರೂ ಚೊಕ್ಕದಾದ ಹಂಚಿನ ಮನೆಯನ್ನು ಕಟ್ಟಿದ್ದು, ಮನೆಯ ಗೋಡೆಯ ತುಂಬಾ ಚಿತ್ತಾಕರ್ಷಕ ಕಾರ್ಟೂನ್ ಬಿಡಿಸಿ ಗಮನಸೆಳೆದಿದ್ದಾರೆ.
ನಗರದ ಶಕ್ತಿನಗರದಲ್ಲಿರುವ ಈ ಮನೆಯ ವರಾಂಡ ಹೊಕ್ಕುವಾಗಲೇ ನಮಗೆ ಸಣ್ಣದಾದ ಗೇಟ್ನಲ್ಲಿ ‘ಕಾರ್ಟೂನೆಸ್ಟ್’ ಎಂಬ ಸ್ವಾಗತ ಕಮಾನು ಗಮನ ಸೆಳೆಯುವಂತೆ ಮಾಡುತ್ತದೆ. ಜಗಲಿ ಹೊಂದಿರುವ ಮನೆಯ ಮುಂಭಾಗ ಎರಡು ಬೃಹತ್ ಕಂಬಗಳು, ಮುಂಭಾಗದ ಗೋಡೆಯಲ್ಲಿ ಬರೆದಿರುವ ನಾಯಿ, ಕಂಬಳ ಓಟ ಹಾಗೂ ಅಜ್ಜಿ-ಮೊಮ್ಮಗುವಿನ ಸಂಭಾಷಣೆಯ ಕಾರ್ಟೂನ್ ಕರಾವಳಿಯ ಪಕ್ಕಾ ಹಳ್ಳಿ ಸೊಗಡಿನ ಮನೆಯನ್ನು ನೆನಪಿಸುತ್ತದೆ.ಮನೆಯೊಳಗೆ ಹೊಕ್ಕುವಾಗಲೇ ಬೃಹತ್ ಡೈನೋಸಾರ್ ಕಾರ್ಟೂನ್ ನಮ್ಮನ್ನು ಸ್ವಾಗತಿಸುತ್ತದೆ. ಹಾಗೆಯೇ ಸ್ವಾಗತಕಾರಿಣಿಯರ ಕಾರ್ಟೂನ್, ಸ್ವಿಚ್ ಬೋರ್ಡ್ ಇರುವಲ್ಲೆಲ್ಲಾ ಬೆಕ್ಕುಗಳ ಕಾರ್ಟೂನ್, ಕನ್ನಡಿಗೆ ಪಲ್ಲಕ್ಕಿಯ ಕಾರ್ಟೂನ್, ಟಿವಿಗೆ ಸುತ್ತಿಗೆಯಿಂದ ಬಡಿಯುವ ವ್ಯಕ್ತಿಯ ಕಾರ್ಟೂನ್, ಅಡುಗೆಕೋಣೆಯಲ್ಲಿ ಮೀನು ಮಾರುವ ಮಹಿಳೆಯರು, ಬೆಕ್ಕು ಮೀನು ಕದಿಯುವ ಕಾರ್ಟೂನ್, ಬೆಡ್ರೂಮ್ನಲ್ಲಿ ಚಂದಿರನನ್ನೇರಿ ಕನಸು ಕಾಣುವ ಕಾರ್ಟೂನ್ ಹೀಗೆ ವೈವಿಧ್ಯಮಯ ಕಾರ್ಟೂನ್ಗಳು ಈ ಮನೆಯ ಗೋಡೆಗಳಲ್ಲಿ ರಾರಾಜಿಸುತ್ತಿದೆ.
ಅಂದ ಹಾಗೆ ಪ್ರಖ್ಯಾತ ಕಾರ್ಟೂನಿಸ್ಟ್ ಪ್ರಕಾಶ್ ಶೆಟ್ಟಿಯವರೇ ಈ ಚಿತ್ರ ಬಿಡಿಸಿದವರು. ನಿವೃತ್ತರಾದ ಬಳಿಕ ಬೆಂಗಳೂರಿನಿಂದ ತಮ್ಮ ಸ್ವಂತ ಊರಿಗೆ ಬಂದಿರುವ ಅವರು, ಶಕ್ತಿನಗರದಲ್ಲಿ ಈ ಮನೆಯನ್ನು ನಿರ್ಮಿಸಿದ್ದಾರೆ. ತಮ್ಮ ಮನೆ ವಿಭಿನ್ನ ಆಗಿರಬೇಕೆಂದು ಅವರು ಗೋಡೆಗಳ ಪೂರ್ತಿ ಕಾರ್ಟೂನ್ ಬಿಡಿಸಿದ್ದಾರೆ. ಇದು ಬರಿಯ ಕಾರ್ಟೂನ್ ಆಗದೆ ಪ್ರಕಾಶ್ ಶೆಟ್ಟಿಯವರು ತಮ್ಮ 50 ವರ್ಷದ ಕಾರ್ಟೂನ್ ಜೀವನದಲ್ಲಿನ ಇಷ್ಟ-ಕಷ್ಟ, ಪ್ರೀತಿಪಾತ್ರರು, ಜೀವನದ ಆಗುಹೋಗುಗಳು ಎಲ್ಲವನ್ನು ಗೋಡೆಯ ತುಂಬಾ ಕಾರ್ಟೂನ್ಗಳ ಮೂಲಕ ಕಲ್ಪನೆಗೆ ಇಳಿಸಿದ್ದಾರೆ. ಆದ್ದರಿಂದ ಒಂದೊಂದು ಕಾರ್ಟೂನ್ಗಳ ಬಗ್ಗೆ ಅವರು ಸಾಕಷ್ಟು ಹೊತ್ತು ಮಾತನಾಡುತ್ತಾರೆ. ಒಟ್ಟಿನಲ್ಲಿ ಈ ಮನೆ ರಸ್ತೆ ಬದಿಯಲ್ಲಿಯೇ ಇದ್ದು, ದಾರಿಹೋಕರು ಈ ಮನೆಯತ್ತ ಒಮ್ಮೆ ದೃಷ್ಟಿ ಹಾಯಿಸಿಯೇ ಹೋಗುವಷ್ಟು ಆಕರ್ಷಕವಾಗಿ ಈ ಮನೆಯಿದೆ.
ಈ ಮನೆಯಲ್ಲಿರುವ ಎಲ್ಲಾ ಕಾರ್ಣೂನ್ ಗಳೂ ಒಂದೊಂದು ಕಥೆಯನ್ನು ಹೇಳುತ್ತಿದ್ದು, ಸೂಕ್ಷ್ಮವಾಗಿ ಗಮನಿಸಿದಾಗ ಆ ಕಾರ್ಣೂನ್ ಗಳ ಒಳಾರ್ಥವೂ ತಿಳಿದುಬರುತ್ತದೆ. ದೇಶದ ವಿವಿಧ ಪತ್ರಿಕೆಗಳಲ್ಲಿ ಕೆಲಸ ನಿರ್ವಹಿಸಿ ಅನುಭವವಿರುವ ಪ್ರಕಾಶ್ ಶೆಟ್ಟಿ ತಮ್ಮ ವೃತ್ತಿ ಜೀವನದಲ್ಲಿ ಪಡೆದ ಅನುಭವಗಳನ್ನು ಕಾರ್ಣೂನ್ ಗಳ ಮೂಲಕ ಮೂರ್ತರೂಪಕ್ಕೆ ಇಳಿಸಿದ್ದಾರೆ. ಮನೆಯ ಹೊರಗೂ ವಿಶಿಷ್ಟವಾದ ಕೈತೋಟವನ್ನು ಸಿದ್ಧಪಡಿಸುತ್ತಿದ್ದು, ಕಡಿಮೆ ಹಣ ವಿನಿಯೋಗಿಸಿ ಸುಂದರ, ಆಕರ್ಷಣೀಯ ಮನೆ ನಿರ್ಮಿಸಬಹುದು ಅನ್ನೋದನ್ನೂ ಪ್ರಕಾಶ್ ಶೆಟ್ಟಿ ತೋರಿಸಿಕೊಟ್ಟಿದ್ದಾರೆ.