ಉಳ್ಳಾಲ ಡಿಸೆಂಬರ್ 16 : ತಲಪಾಡಿಯಲ್ಲಿ ಮಂಗಳವಾರ ಮುಂಜಾನೆ ಕಾರೊಂದು ಟ್ಯಾಂಕರ್‌ನ ಹಿಂಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಾಯಗೊಂಡಿದ್ದಾರೆ. ಕಾರಿನೊಳಗೆ ಹಲವಾರು ಲಕ್ಷ ರೂಪಾಯಿ ಮೌಲ್ಯದ ನಿಷೇಧಿತ ಎಂಡಿಎಂಎ ಪತ್ತೆಯಾಗಿದ್ದು, ಘಟನೆ ಗಂಭೀರ ಸ್ವರೂಪ ಪಡೆದುಕೊಂಡಿದೆ.


ಮಂಗಳವಾರ ಬೆಳಗ್ಗೆ 7.30ರ ವೇಳೆ ಮಂಗಳೂರಿನಿಂದ‌ ಉಪ್ಪಳದ ಕಡೆಗೆ ಧಾವಿಸುತ್ತಿದ್ದ ಕಾರು ತಲಪಾಡಿಯ ಆರ್ ಟಿಓ ಚೆಕ್ ಪೋಸ್ಟ್ ಬಳಿ ನಿಂತಿದ್ದ ಟ್ಯಾಂಕರ್ ಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಕಾರಿನ ಮುಂಭಾಗ ನಜ್ಜುಗುಜ್ಜಾಗಿದ್ದು ಕಾರಿನಲ್ಲಿದ್ದ ಸಹ ಸವಾರ ಆದಮ್‌ ಗಂಭೀರ ಗಾಯಗೊಂಡಿದ್ದಾನೆ. ಗಾಯಾಳು ಆದಮ್ ನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.

ಅಪಘಾತದ ಬಳಿಕ ಪೊಲೀಸರು ತನಿಖೆಗೆ ಕಾರನ್ನು ಪರಿಶೀಲನೆ ನಡೆಸಿದ ವೇಳೆ ಕಾರಿನಲ್ಲಿ ಸುಮಾರು 78 ಗ್ರಾಂ ಎಂಡಿಎಂಎ ಮಾದಕ ವಸ್ತು ಪತ್ತೆಯಾಗಿದೆ. ಕಾರು ಚಾಲಕ ಸಿದ್ಧೀಕ್ ಎಂಬಾತ ಪರಾರಿಯಾಗಿದ್ದು, ಅಪಘಾತದ ವೇಳೆ ಗಾಯಗೊಂಡಿದ್ದ ಚಾಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ವಿಚಾರಣೆ ನಡೆಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾರಿನಲ್ಲಿದ್ದ ಸಿದ್ಧೀಕ್ ಮತ್ತು ಆದಮ್ ಕಾಸರಗೋಡು ಜಿಲ್ಲೆಯ ಉಪ್ಪಳ ನಿವಾಸಿಗಳೆಂದು ತಿಳಿದುಬಂದಿದೆ. ಅಪಘಾತದ ಕುರಿತಂತೆ ಮಂಗಳೂರು ದಕ್ಷಿಣ ಸಂಚಾರಿ ಪೊಲೀಸರು ಪ್ರತ್ಯೇಕ ಪ್ರಕರಣ ದಾಖಲಿಸಿದ್ದಾರೆ.

Share Information