ಮಣಿಪಾಲ ಎಪ್ರಿಲ್ 22: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಬಸ್ ಸ್ಟಾಂಡ್ ಗೆ ಗುದ್ದಿದ ಪರಿಣಾಮ ಯುವಕನೊಬ್ಬ ಸಾವನಪ್ಪಿದ ಘಟನೆ ಟೈಗರ್ ಸರ್ಕಲ್ ಬಳಿ ಸೋಮವಾರ ತಡರಾತ್ರಿ ಸಂಭವಿಸಿದೆ.
ಈ ಭೀಕರ ರಸ್ತೆ ಅಪಘಾತದಲ್ಲಿ ಕಾರು ಚಾಲಕ ಕಾರ್ತಿಕೇಯ್ ಶರ್ಮಾ (21) ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಸಹಪ್ರಯಾಣಿಕ ಹರ್ಷ್ ಹಾರ್ಡಿಂಗ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

ಏಪ್ರಿಲ್ 20ರಂದು ರಾತ್ರಿ 11 ಗಂಟೆಯ ಸುಮಾರಿಗೆ ಈಶ್ವರ ನಗರದಿಂದ ಸಿಂಡಿಕೇಟ್ ಸರ್ಕಲ್ ಕಡೆಗೆ ರಾಷ್ಟ್ರೀಯ ಹೆದ್ದಾರಿ 169(ಎ) ನಲ್ಲಿ KA-20-MC-5684 ಸಂಖ್ಯೆಯ ಕಾರು ಚಲಿಸುತ್ತಿತ್ತು. ಚಾಲಕ ಕಾರ್ತಿಕೇಯ್ ಶರ್ಮಾ ಅತಿವೇಗ ಮತ್ತು ಅಜಾಗರೂಕತೆಯಿಂದ ಕಾರು ಚಲಾಯಿಸಿದ ಪರಿಣಾಮ, ಟೈಗರ್ ಸರ್ಕಲ್ ಬಳಿಯ ಬಸ್ ನಿಲ್ದಾಣಕ್ಕೆ ಕಾರು ಬಲವಾಗಿ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಕಾರು ನಜ್ಜುಗುಜ್ಜಾಗಿ ರಸ್ತೆಗೆ ಉರುಳಿ ಬಿದ್ದಿದೆ. ತೀವ್ರವಾಗಿ ಗಾಯಗೊಂಡಿದ್ದ ಕಾರ್ತಿಕೇಯ್ ಶರ್ಮಾ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಾಳು ಹರ್ಷ್ ಅವರನ್ನು ಕೂಡಲೇ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತಕ್ಕೆ ಚಾಲಕನ ಅತಿವೇಗವೇ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ (BNS) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.