ಹಾಸನ, ಮಾರ್ಚ್ 31 : ಡೀಸೆಲ್ ಟ್ಯಾಂಕರ್ ಹಾಗೂ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಭಾರೀ ದುರಂತವೊಂದು ತಪ್ಪಿದ ಘಟನೆ ಹಾಸನ ನಗರದ ಎಂ.ಜಿ ರಸ್ತೆಯಲ್ಲಿ ಇಂದು ಮುಂಜಾನೆಯ ವೇಳೆ ನಡೆದಿದೆ.

ಇನ್ನೂ ಟ್ಯಾಂಕರ್ ಡಿಕ್ಕಿಯಿಂದ ಕಾರಿನ ಒಂದು ಬದಿ ನಜ್ಜುಗುಜ್ಜಾಗಿದ್ದು, ರಸ್ತೆಯ ಇನ್ನೊಂದು ಬದಿಗೆ ಹಾರಿದೆ. ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಅಪಘಾತದ ಪರಿಣಾಮ ಟ್ಯಾಂಕರ್ನಲ್ಲಿ ಸಣ್ಣ ಪ್ರಮಾಣದಲ್ಲಿ ಡೀಸೆಲ್ ಸೋರಿಕೆಯಾಗಿರುವುದು ಕಂಡುಬಂದಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ನಗರ ಸಂಚಾರ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯ ನಡೆಸಿ ಮುಂದಾಗುವ ಅನಾಹುತ ತಪ್ಪಿಸಿದ್ದಾರೆ.