ಕಾರ್ಕಳ,ಫೆಬ್ರವರಿ 05: ಕಾರು ಹಾಗೂ ಬೈಕ್ ಮಧ್ಯೆ ಅಪಘಾತ ಸಂಭವಿಸಿ ಸವಾರರು ಗಂಭೀರವಾಗಿ ಗಾಯಗೊಂಡ ಘಟನೆ ಕಾರ್ಕಳ ತಾಲೂಕಿನ ಅತ್ತೂರು ಚರ್ಚ್ ಬಳಿ ನಡೆದಿದೆ.
ಘಟನೆಯಲ್ಲಿ ಬೈಕ್ ಸವಾರರಾದ ನಿಟ್ಟೆ ಕಾಲೇಜಿನ ಇಂಜಿನೀಯರಿಂಗ್ ವಿದ್ಯಾರ್ಥಿಗಳಾದ ರುದ್ರೇಶ್ ಹಾಗೂ ಹರೀಶ್ ಎಂಬರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ನಿಟ್ಟೆ ಸಮೀಪದ ದೂಪದಕಟ್ಟೆಯಿಂದ ಕಾರ್ಕಳ ಬರುತ್ತಿದ್ದ ಕಾರಿಗೆ ಕಾರ್ಕಳದಿಂದ ದೂಪದಕಟ್ಟೆಯತ್ತ ಸಾಗುತ್ತಿದ್ದ ಬೈಕ್ ಡಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ. ಪರಿಣಾಮ ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಜಖಂಗೊಂಡಿದೆ. ಬೈಕ್ ರಸ್ತೆ ದಾಟಿ ಪೊದೆಗೆ ಉರುಳಿದೆ.

ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಸವಾರರನ್ನು ಕಾರ್ಕಳದ ಆಸ್ಪತ್ರೆಯೊಂದರಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.