ಮುಂಬೈ ಎಪ್ರಿಲ್ 28: ಭದ್ರತಾ ಸಿಬ್ಬಂದಿಯ ಹೆಸರು ಮತ್ತು ಧರ್ಮ ಕೇಳಿ ಇಸ್ಲಾಮಿಕ್ ಶ್ಲೋಕ ಪಠಿಸಲು ಹೇಳಿ ಚಾಕುವಿನಿಂದ ಇರಿದ ಘಟನೆ ಮುಂಬೈ ಸಮೀಪದ ಮೀರಾ ರೋಡ್ನಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 31 ವರ್ಷದ ಜೈಬ್ ಜುಬೈರ್ ಅನ್ಸಾರಿಯನ್ನು ಪೊಲೀಸರು ಬಂಧಿಸಿದ್ದಾರೆ.

ಭಾನುವಾರ ಮುಂಜಾನೆ ಮೀರಾ ರೋಡ್ನ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ರಾಜ್ಕುಮಾರ್ ಮಿಶ್ರಾ ಮತ್ತು ಸುಬ್ರೋಟೊ ಸೇನ್ ಎಂಬ ಇಬ್ಬರು ಸೆಕ್ಯುರಿಟಿ ಗಾರ್ಡ್ ಕರ್ತವ್ಯದಲ್ಲಿದ್ದರು. ಅಲ್ಲಿಗೆ ಬಂದ ಆರೋಪಿ ಅನ್ಸಾರಿ, ಅವರ ಹೆಸರು ಮತ್ತು ಧರ್ಮವನ್ನು ಕೇಳಿದ್ದಾನೆ. ಬಳಿಕ ‘ಕಲ್ಮಾ’ ಪಠಿಸುವಂತೆ ಒತ್ತಾಯಿಸಿದ್ದಾನೆ. ಕಾವಲುಗಾರರು ನಿರಾಕರಿಸಿದಾಗ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಮಿಶ್ರಾ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಂಧಿತ ಆರೋಪಿ ಅನ್ಸಾರಿ ಅಮೆರಿಕದಲ್ಲಿ ವ್ಯಾಸಂಗ ಮಾಡಿ ಭಾರತಕ್ಕೆ ಮರಳಿದ್ದನು. ಈತ ತನ್ನ ಮೊಬೈಲ್ನಲ್ಲಿ ನಿರಂತರವಾಗಿ ಐಸಿಸ್ (ISIS) ಉಗ್ರ ಸಂಘಟನೆಯ ಪ್ರಚಾರದ ವಿಡಿಯೋಗಳನ್ನು ವೀಕ್ಷಿಸುತ್ತಿದ್ದ ಎಂಬ ಆಘಾತಕಾರಿ ವಿಷಯ ತನಿಖೆಯಲ್ಲಿ ತಿಳಿದುಬಂದಿದೆ. ಪ್ರಕರಣದ ಗಾಂಭೀರ್ಯವನ್ನು ಪರಿಗಣಿಸಿ ತನಿಖೆಯನ್ನು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳಕ್ಕೆ (ATS) ವರ್ಗಾಯಿಸಲಾಗಿದೆ.