ಶಿವಮೊಗ್ಗ ,ಏಪ್ರಿಲ್ 02: ಕ್ಷುಲ್ಲಕ ಕಾರಣಕ್ಕೆ ಹೋಟೆಲ್ ಮಾಲೀಕನೋರ್ವ ತನ್ನದೇ ಹೋಟೆಲ್ನ ಹೆಡ್ ಕುಕ್ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ನಡೆದಿದೆ.

ಬಿಹಾರ ಮೂಲದ ಟಿಂಕು ಶರ್ಮ (28) ಕೊಲೆಯಾದ ದುರ್ದೈವಿ. ಸಾಗರದ ‘ರೂಫ್ ಟಾಪ್ ಕೆಫೆ ಮತ್ತು ಗೇಮ್ ಜೋನ್’ ಹೋಟೆಲ್ ಮಾಲೀಕ ಇಮ್ರಾನ್ (34) ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಹೋಟೆಲ್ ಕೆಲಸದ ವಿಚಾರವಾಗಿ ಮಾಲೀಕ ಮತ್ತು ಕುಕ್ ನಡುವೆ ಕಿರಿಕಿರಿ ಉಂಟಾಗಿತ್ತು ಎನ್ನಲಾಗಿದೆ. ಈ ವೇಳೆ ಆಕ್ರೋಶಗೊಂಡ ಇಮ್ರಾನ್, ಟಿಂಕು ಶರ್ಮನ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾನೆ. ಹಲ್ಲೆಯ ಪರಿಣಾಮ ಟಿಂಕು ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಕೊಲೆ ಮಾಡಿದ ನಂತರ ಸಾಕ್ಷ್ಯ ನಾಶಪಡಿಸಲು ಸಂಚು ರೂಪಿಸಿದ್ದ ಆರೋಪಿ ಇಮ್ರಾನ್, ಮೃತದೇಹವನ್ನು ಕಾರಿನಲ್ಲಿ ತುಂಬಿಕೊಂಡು ಸಾಗಿಸುತ್ತಿದ್ದ. ಈ ವೇಳೆ ಗಸ್ತಿನಲ್ಲಿದ್ದ ಪೊಲೀಸರು ಅನುಮಾನಗೊಂಡು ಕಾರನ್ನು ತಪಾಸಣೆ ನಡೆಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ತಕ್ಷಣವೇ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಸಾಗರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.