LATEST NEWS
ಕೇಬಲ್ ಮಾಫಿಯಾಗಳ ತುಘಲಕ್ ನೀತಿ, ಪ್ರತಿಭಟನೆ ಹೆಸರಿನಲ್ಲಿ ಜನಸಾಮಾನ್ಯನ ಮನೋರಂಜನೆಗೆ ಹೊಡೆತ
ಕೇಬಲ್ ಮಾಫಿಯಾಗಳ ತುಘಲಕ್ ನೀತಿ, ಪ್ರತಿಭಟನೆ ಹೆಸರಿನಲ್ಲಿ ಜನಸಾಮಾನ್ಯನ ಮನೋರಂಜನೆಗೆ ಹೊಡೆತ
ಮಂಗಳೂರು, ಜನವರಿ 23: ಕೇಂದ್ರ ದೂರ ಸಂಪರ್ಕ ಇಲಾಖೆ ಕೇಬಲ್ ನೀತಿಯಲ್ಲಿ ಹಲವಾರು ಬದಲಾವಣೆ ಮಾಡಿಕೊಂಡಿರುವುದನ್ನು ಖಂಡಿಸಿ ನಾಳೆ (ಜನವರಿ 24) ರಂದು ಕೇಬಲ್ ಅಪರೇಟರ್ ಗಳು ಪ್ರತಿಭಟನೆಗೆ ಸಿದ್ಧತೆ ನಡೆಸಿದ್ದಾರೆ. ಕೇಂದ್ರ ಸರಕಾರ ಕೇಬಲ್ ಅಪರೇಟರ್ ಗಳು ನೀಡುವ ಪ್ರತಿ ಚಾನಲ್ ಗಳಿಗೂ ಇಂತಿಷ್ಟು ದರ ನಿಗದಿ ಮಾಡಿದ ಹಿನ್ನಲೆ ಹಾಗೂ ಇತರ ಕೆಲವು ಮಾರ್ಪಾಡುಗಳನ್ನು ತಂದ ಹಿನ್ನಲೆಯಲ್ಲಿ ಈ ಪ್ರತಿಭಟನೆಯನ್ನು ನಡೆಸಲು ತೀರ್ಮಾನಿಸಲಾಗಿದೆ.
ದೇಶದ ಹಲವು ರಾಜ್ಯಗಳಲ್ಲಿ ಈ ಪ್ರತಿಭಟನೆಯನ್ನು ನಡೆಸಲು ಸಿದ್ಧತೆ ನಡೆದಿದ್ದು, ಕರ್ನಾಟಕ ಸೇರಿದಂತೆ ತಮಿಳುನಾಡು, ಕೇರಳ, ರಾಜಸ್ಥಾನ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ಈ ಎಲ್ಲಾ ರಾಜ್ಯಗಳಲ್ಲಿ ನಾಳೆ ಕೇಬಲ್ ಅಪರೇಟರ್ ಗಳು ಪ್ರತಿಭಟನೆ ನಡೆಸಲಿದ್ದಾರೆ.
ಆದರೆ ಈ ಕೇಬಲ್ ಅಪರೇಟರ್ ಗಳ ಪ್ರತಿಭಟನೆ ಸರಕಾರಕ್ಕೆ ಬಿಸಿ ಮುಟ್ಟಿಸುವುದರ ಬದಲು ಜನಸಾಮಾನ್ಯನ ಮನೋರಂಜನೆಗೆ ಏಟು ನೀಡುವುದಾಗಿದೆ. ನಾಳೆ ಎಲ್ಲಾ ಕೇಬಲ್ ಆಪರೇಟರ್ ಗಳು ಚಾನಲ್ ಗಳ ಪ್ರಸಾರವನ್ನು ಸ್ಥಗಿತಗೊಳಿಸುವ ಮೂಲಕ ಜನಸಾಮಾನ್ಯನ ಹಕ್ಕಿನ ಮೇಲೆ ಸವಾರಿ ಮಾಡಲು ತೀರ್ಮಾನಿಸಿದ್ದಾರೆ.
ಕೇಬಲ್ ಅಪರೇಟರ್ ಗಳಿಗೂ, ಕೇಂದ್ರ ಸರಕಾರಕ್ಕೂ ನಡುವೆ ಇರುವಂತಹ ಸಮಸ್ಯೆಯನ್ನು ಜನಸಾಮಾನ್ಯನ ಮೇಲೆ ಹೇರುವ ಕೇಬಲ್ ಅಪರೇಟರ್ ಗಳ ಮಾಫಿಯಾಕ್ಕೆ ಕಡಿವಾಣ ಹಾಕುವ ಕಾರ್ಯವನ್ನು ಸರಕಾರ ಮಾಡಬೇಕಿದೆ. ಜನಸಾಮಾನ್ಯನಿಂದ ತಮಗೆ ತೋಚಿದಂತೆ ದೋಚುತ್ತಿದ್ದ ಕೇಬಲ್ ಅಪರೇಟರ್ ಗಳ ಹಾರಾಟಕ್ಕೆ ಬ್ರೇಕ್ ಹಾಕಲು ಮುಂದಾದ ಟ್ರಾಯ್ ವಿರುದ್ಧ ಇದೀಗ ಕೇಬಲ್ ಮಾಫಿಯಾ ತಿರುಗಿ ಬಿದ್ದಿದೆ.
ಜನರ ಆಯ್ಕೆಗೆ ತಕ್ಕಂತೆ ಚಾನಲ್ ಗಳನ್ನು ಪಡೆಯುವ ಮಹತ್ತರವಾದ ತಿದ್ದುಪಡಿಯನ್ನು ಟ್ರಾಯ್ ತಂದಿದ್ದು, ಇದು ಕೇಬಲ್ ಮಾಫಿಯಾಕ್ಕೆ ನುಂಗಲಾರದ ತುತ್ತಾಗಿದೆ. ಅಗತ್ಯವಿಲ್ಲದ ಚಾನಲ್ ಗಳನ್ನು ಕೇಬಲ್ ಮೂಲಕ ಪೂರೈಸಿ ಪ್ರತಿ ಮನೆಯಿಂದ 300 ರೂಪಾಯಿಗೂ ಮಿಕ್ಕಿ ವಸೂಲಿ ಮಾಡುತ್ತಿದ್ದ ಕೇಬಲ್ ಮಾಫಿಯಾಕ್ಕೆ ಟ್ರಾಯ್ ಹೊರಡಿಸಿದ ಹೊಸ ನೀತಿ ಲಗಾಮು ಹಾಕಿದೆ. ಈ ನಡುವೆ ಗ್ರಾಹಕರನ್ನು ದಾರಿ ತಪ್ಪಿಸುವ ಕಾರ್ಯದಲ್ಲೂ ಕೇಬಲ್ ಮಾಫಿಯಾ ವ್ಯವಸ್ಥಿತ ಸಂಚನ್ನೂ ರೂಪಿಸುತ್ತಿರುವುದು ಬೆಳಕಿಗೆ ಬಂದಿದೆ. ಈ ನಡುವೆ ಲೋಕಲ್ ಚಾನಲ್ ಗಳನ್ನು ಗ್ರಾಹಕರಿಗೆ ನೀಡಬೇಕಾದರೂ ಪ್ರತಿ ಮನೆಗೆ 20 ರೂಪಾಯಿಗಳನ್ನು ಚಾರ್ಜ್ ಮಾಡುತ್ತಿರುವ ಕೇಬಲ್ ಅಪರೇಟರ್ ಗಳು ಮತ್ತೆ ಮತ್ತೆ ನಿಯಮಗಳನ್ನು ಮುರಿಯುತ್ತಿದ್ದರೂ, ಕಡಿವಾಣ ಹಾಕಲು ಮುಂದಾದ ಟ್ರಾಯ್ ವಿರುದ್ಧವೇ ಇದೀಗ ಪ್ರತಿಭಟನೆಗೆ ಇಳಿದಿರುವುದು ವಿಪರ್ಯಾಸವಾಗಿದೆ.
ಟ್ರಾಯ್ ನಿಯಮದಿಂದ ಕೇಬಲ್ ಅಪರೇಟರ್ ಗಳಿಗೆ ನಷ್ಟ ಉಂಟಾಗುತ್ತದೆ ಎನ್ನುವ ವಾದವಾದರೆ, ನಷ್ಟವಾಗುವ ಮಂದಿ ಪರ್ಯಾಯ ವ್ಯವಸ್ಥೆ ಹುಡುಕುವ ಅವಕಾಶವೂ ಇದೆ ಎನ್ನುವುದನ್ನು ಕೇಬಲ್ ಅಪರೇಟರ್ ಗಳು ತಿಳಿಯಬೇಕಿದೆ.