ಬೈಂದೂರು ಎಪ್ರಿಲ್ 04: ತಗ್ಗರ್ಸೆ ಗ್ರಾಮದ ಭೂಸಕ್ರಡಿ ಹಾಲಂಬೇರು ನಿವಾಸಿ ಭಾಗ್ಯಶ್ರೀ ಗಾಣಿಗ (23) ಎಂಬ ಯುವತಿ ಶುಕ್ರವಾರ ರಾತ್ರಿ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರ ಅಕ್ಕ ಜಯಶ್ರೀ ಅವರು ನೀಡಿದ ದೂರಿನ ಮೇರೆಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗುಡ್ಡೇಅಂಗಡಿಯ ಇಂಟರ್ಲಾಕ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಭಾಗ್ಯಶ್ರೀ, ಎಪ್ರಿಲ್ 3 ರಂದು ರಾತ್ರಿ 10 ಗಂಟೆಗೆ ಮನೆಯವರೊಂದಿಗೆ ಊಟ ಮುಗಿಸಿ ಮಹಡಿಯ ಮೇಲಿರುವ ತಮ್ಮ ಕೋಣೆಗೆ ಮಲಗಲು ಹೋಗಿದ್ದರು. ಸುಮಾರು 10:15 ಗಂಟೆಗೆ ಅಕ್ಕ ಜಯಶ್ರೀ ಅವರು ತಂಗಿಗೆ ಹಾಲು ಕೊಡಲು ಹೋದಾಗ ಘಟನೆ ಬೆಳಕಿಗೆ ಬಂದಿದೆ. ಕೋಣೆಯ ಫ್ಯಾನ್ಗೆ ಸೀರೆಯಿಂದ ಉರುಳು ಹಾಕಿಕೊಂಡಿದ್ದ ಭಾಗ್ಯಶ್ರೀ ಅವರನ್ನು ತಕ್ಷಣವೇ ಕೆಳಗಿಳಿಸಿ ಬೈಂದೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಬೈಂದೂರು ಪೊಲೀಸರು ಯುಡಿಆರ್ ಕ್ರಮಾಂಕ 16/2026, ಕಲಂ 194 BNSS ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.