ಧರ್ಮಸ್ಥಳ ಜೂನ್ 26: ವಿಧಾನಪರಿಷತ್ ಚುನಾವಣೆಯ ಅಡ್ಡ ಮತದಾನದ ಬೆನ್ನಲ್ಲೇ ಸೃಷ್ಟಿಯಾಗಿದ್ದ ‘ಆಣೆ-ಪ್ರಮಾಣ’ದ ರಾಜಕಾರಣ ಹಾಗೂ ಸ್ವಪಕ್ಷದವರ ಆಪಾದನೆಗಳ ಚರ್ಚೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಇತಿಶ್ರೀ ಹಾಡಿದ್ದಾರೆ. “ನಾನು ಭಾವನಾತ್ಮಕ ವ್ಯಕ್ತಿ, ಮನಸ್ಸಿಗೆ ತೋಚಿದ್ದನ್ನು ಹೇಳಿದ್ದೆ. ಆದರೆ ಪಕ್ಷದ ಹಿರಿಯರ ಸಲಹೆಯಂತೆ ಧರ್ಮಸ್ಥಳದಲ್ಲಿ ಶಾಸಕಾಂಗ ಸಭೆ ಹಾಗೂ ಆಣೆ-ಪ್ರಮಾಣದ ನಿರ್ಧಾರವನ್ನು ಕೈಬಿಟ್ಟಿದ್ದೇನೆ” ಎಂದು ಅವರು ಸ್ಪಷ್ಟಪಡಿಸಿದರು. ಮೂರು ದಿನಗಳ ದೆಹಲಿ ಪ್ರವಾಸ ಮುಗಿಸಿ ನೇರವಾಗಿ ಧರ್ಮಸ್ಥಳಕ್ಕೆ ಆಗಮಿಸಿ ಶ್ರೀ ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಅವರು ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ಡಿಕೆಶಿ-ನನ್ನ ನಡುವೆ ಯಾವುದೇ ವ್ಯವಹಾರವಿಲ್ಲ:
ಅಡ್ಡ ಮತದಾನದ ಹಿಂದೆ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ನಡುವಿನ ವ್ಯವಹಾರಿಕ ಸಂಬಂಧ ಹಾಗೂ ಆತ್ಮೀಯತೆ ಕಾರಣ ಎಂಬ ಸ್ವಪಕ್ಷೀಯರ ಆರೋಪಕ್ಕೆ ವಿಜಯೇಂದ್ರ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. “ನಮ್ಮವರೇ ಇಂತಹ ಕೀಳು ಮಟ್ಟದ ಚರ್ಚೆ ಮಾಡುತ್ತಿರುವುದು ಬೇಸರ ತಂದಿದೆ. ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಆಶೀರ್ವಾದದಿಂದ ನಾನು ಅಧ್ಯಕ್ಷನಾಗಿದ್ದೇನೆ. ಡಿಕೆಶಿ ಮತ್ತು ನನ್ನ ನಡುವೆ ಯಾವುದೇ ಆತ್ಮೀಯತೆ ಇಲ್ಲ, ವ್ಯವಹಾರಿಕ ಸಂಬಂಧವೂ ಇಲ್ಲ. ಇಂತಹ ಅಪಪ್ರಚಾರ ಮಾಡುವವರಿಗೆ ಭಗವಂತನೇ ಒಳ್ಳೆಯದು ಮಾಡಲಿ” ಎಂದರು.
ಸತ್ಯಶೋಧನಾ ಸಮಿತಿಯಿಂದ ಸತ್ಯ ಹೊರಬರಲಿದೆ:
“ಗೌಪ್ಯ ಮತದಾನವಾಗಿದ್ದರೂ ಅಡ್ಡ ಮತದಾನ ಮಾಡಿದವರು ಯಾರು ಎಂಬ ಸತ್ಯ ಇಂದಲ್ಲ ನಾಳೆ ಹೊರಬರಲಿದೆ. ಸಿ.ಟಿ. ರವಿ ನೇತೃತ್ವದ ಸತ್ಯಶೋಧನಾ ಸಮಿತಿಯ ವರದಿಯಿಂದ ಎಲ್ಲವೂ ಬಯಲಾಗಲಿದ್ದು, ಬೆಂಗಳೂರಿಗೆ ತೆರಳಿ ಅವರೊಂದಿಗೆ ಮಾತನಾಡುತ್ತೇನೆ. ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್ ನಮ್ಮ ಪಕ್ಷದ ಮೂರು ಶಾಸಕರ ಸಂಪರ್ಕದಲ್ಲಿದ್ದ ಮಾಹಿತಿ ಲಭ್ಯವಿದ್ದು, ಅವರನ್ನು ರಕ್ಷಿಸುವ ಸಲುವಾಗಿಯೇ ಬೇರೆ ಬೇರೆ ಹೇಳಿಕೆಗಳನ್ನು ತೇಲಿ ಬಿಡಲಾಗುತ್ತಿದೆ” ಎಂದು ಆರೋಪಿಸಿದರು. ಇದೇ ವೇಳೆ ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ ಅವರ ಫೋನ್ ಕಾಲ್ ಹಾಗೂ ಗೊಂದಲಗಳ ಕುರಿತು ಮಾತನಾಡಿದ ಅವರು, ಎಲ್ಲರನ್ನೂ ಅನುಮಾನದಿಂದ ನೋಡಲು ಸಾಧ್ಯವಿಲ್ಲ ಎಂದರು.
ಈಶ್ವರಪ್ಪಗೆ ಯಡಿಯೂರಪ್ಪ ನಾಯಕತ್ವ ಮರೆತುಹೋಗಿದೆ:
ಬಂಡಾಯ ನಾಯಕ ಕೆ.ಎಸ್. ಈಶ್ವರಪ್ಪ ಅವರ ವಿರುದ್ಧ ವಾಗ್ದಾಳಿ ನಡೆಸಿದ ವಿಜಯೇಂದ್ರ, “2018ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವಿದ್ದಾಗ 17 ಶಾಸಕರು ರಾಜೀನಾಮೆ ನೀಡಿ ಬಿ.ಎಸ್. ಯಡಿಯೂರಪ್ಪ ಅವರ ನಾಯಕತ್ವ ನಂಬಿ ಬಂದಿದ್ದರಿಂದಲೇ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಯಿತು. ಅಂದು ಸಿದ್ದರಾಮಯ್ಯ ಸರ್ಕಾರದಲ್ಲಿ 18 ಹಿಂದೂ ಕಾರ್ಯಕರ್ತರ ಹತ್ಯೆಯಾದಾಗ ಶಾಸಕರು ಕೈಜೋಡಿಸಿದ್ದರಿಂದಲೇ ಒಳ್ಳೆಯ ಸರ್ಕಾರ ನೀಡಲು ಸಾಧ್ಯವಾಯಿತು. ಈಶ್ವರಪ್ಪ ಕೂಡ ಗ್ರಾಮೀಣಾಭಿವೃದ್ಧಿ ಸಚಿವರಾಗಿ ಎಂಜಾಯ್ ಮಾಡಿದ್ದರು. ಆದರೆ ಇಂದು ಅವರಿಗೆ ಇದೆಲ್ಲವೂ ಮರೆತುಹೋಗಿದೆ. ಈಶ್ವರಪ್ಪ ಈಗ ನಮ್ಮ ಪಕ್ಷದವರೂ ಅಲ್ಲ, ನಮ್ಮ ಶಾಸಕರೂ ಅಲ್ಲ. ಅವರ ಬಗ್ಗೆ ಜಾಸ್ತಿ ಮಾತನಾಡುವುದಿಲ್ಲ” ಎಂದು ತಿರುಗೇಟು ನೀಡಿದರು.