ಕೊಟ್ಟಾಯಂ ನವೆಂಬರ್ 18: ಕರ್ನಾಟಕದ ಶಬರಿಮಲೆ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಮಿನಿ ಪ್ಯಾಸೆಂಜರ್ ಬಸ್ ಮಂಗಳವಾರ ಮಧ್ಯಾಹ್ನ ಕೊಟ್ಟಾಯಂನ ಎರುಮೇಲಿ ಬಳಿಯ ಕನಮಲ ಜಂಕ್ಷನ್‌ನಲ್ಲಿ ಪಲ್ಟಿಯಾಗಿದೆ. ವಾಹನವು ಶಬರಿಮಲೆಗೆ ತೆರಳುತ್ತಿದ್ದಾಗ ಮಧ್ಯಾಹ್ನ 2.15 ರ ಸುಮಾರಿಗೆ ಅಪಘಾತ ಸಂಭವಿಸಿದೆ.


ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಯಾಲದಹಳ್ಳಿ ಕೊಪ್ಪಲು ಗ್ರಾಮದ 33 ಮಾಲಾಧಾರಿಗಳು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿರುವಂತಹ ಘಟನೆ ನಡೆದಿದೆ. ಜಂಕ್ಷನ್‌ನಲ್ಲಿ ತಿರುವು ಪಡೆಯುವಾಗ ಬಸ್ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿರುವ ಸಾಧ್ಯತೆ ಇದೆ. ಎರುಮೇಲಿ ಪೊಲೀಸ್ ಠಾಣೆ ಮತ್ತು ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳ ತಂಡಗಳು ತಕ್ಷಣ ಸ್ಥಳಕ್ಕೆ ತಲುಪಿ ಸ್ಥಳೀಯ ಜನರ ಸಹಾಯದಿಂದ ರಕ್ಷಣಾ ಕಾರ್ಯ ನಡೆಸಲಾಗಿದೆ. ಅದೃಷ್ಟವಶಾತ್‌ ಯಾವುದೇ ಅನಾಹುತವಿಲ್ಲದೇ ಬಸ್‌ನಲ್ಲಿದ್ದವರು ಪಾರಾಗಿದ್ದಾರೆ.


ಕೆಲ ಮಾಲಾಧಾರಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇನ್ನೂ ಘಟನಾ ಸ್ಥಳಕ್ಕೆ ಏರಿಮಲೈ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಳಿಕ ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

Share Information