ಮಹಾರಾಷ್ಟ್ರ ಏಪ್ರಿಲ್ 15 : ಸುಮಾರು 180ಕ್ಕೂ ಹೆಚ್ಚು ಅಪ್ರಾಪ್ತ ಬಾಲಕಿಯರನ್ನು ಬ್ಲಾಕ್ಮೇಲ್ ಮಾಡಿ ಶೋಷಿಸುತ್ತಿದ್ದ ಆರೋಪದ ಮೇಲೆ ಬಂಧಿತನಾಗಿರುವ ಮೊಹಮ್ಮದ್ ಅಯಾಜ್ ಅಲಿಯಾಸ್ ತನ್ವೀರ್ನ ಅಕ್ರಮ ಮನೆಯನ್ನು ಅಧಿಕಾರಿಗಳು ಬುಲ್ಡೋಜರ್ ಮೂಲಕ ನೆಲಸಮಗೊಳಿಸಿದ್ದಾರೆ.

ಕೇವಲ 19 ವರ್ಷದ ಆರೋಪಿ ಅಯಾಜ್, ಸಾಮಾಜಿಕ ಜಾಲತಾಣಗಳ ಮೂಲಕ ಶಾಲಾ-ಕಾಲೇಜು ವಿದ್ಯಾರ್ಥಿನಿಯರೊಂದಿಗೆ ಸ್ನೇಹ ಬೆಳೆಸಿ, ಪ್ರೀತಿಯ ನಾಟಕವಾಡಿ ಅವರನ್ನು ಮುಂಬೈ ಮತ್ತು ಪುಣೆಗೆ ಕರೆದೊಯ್ಯುತ್ತಿದ್ದನು. ಅಲ್ಲಿ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುವುದಲ್ಲದೆ, ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಿಕೊಳ್ಳುತ್ತಿದ್ದನು. ನಂತರ ಈ ದೃಶ್ಯಗಳನ್ನು ಬಳಸಿ ಬಾಲಕಿಯರನ್ನು ಬೆದರಿಸುತ್ತಿದ್ದ ಆರೋಪಿಯು, ಅವರನ್ನು ವೇಶ್ಯಾವಾಟಿಕೆ ದಂಧೆಗೆ ತಳ್ಳುತ್ತಿದ್ದನೆಂಬ ಕರಾಳ ಸತ್ಯ ತನಿಖೆಯ ವೇಳೆ ಬಯಲಾಗಿದೆ. ಈ ದಂಧೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಪೊಲೀಸರು ಕಾರ್ಯಾಚರಣೆ ನಡೆಸಿ ಅಯಾಜ್ ಮತ್ತು ಆತನಿಗೆ ಸಹಕರಿಸುತ್ತಿದ್ದ ಉಜರ್ ಖಾನ್ ಸೇರಿದಂತೆ ನಾಲ್ವರನ್ನು ಬಂಧಿಸಿದ್ದರು.
ಪ್ರಕರಣದ ತೀವ್ರತೆಯನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಡಳಿತ ಮತ್ತು ಮುನ್ಸಿಪಲ್ ಕೌನ್ಸಿಲ್, ಆರೋಪಿಯು ಅಕ್ರಮವಾಗಿ ನಿರ್ಮಿಸಿದ್ದ ಒಂದು ಅಂತಸ್ತಿನ ಕಟ್ಟಡದ ಭಾಗಗಳನ್ನು ಬುಲ್ಡೋಜರ್ ಮೂಲಕ ಧ್ವಂಸಗೊಳಿಸಿದೆ. ಆರೋಪಿ ಅಯಾಜ್ ಈ ಹಿಂದೆ ಎಐಎಂಐಎಂ (AIMIM) ಪಕ್ಷದ ಸಾಮಾಜಿಕ ಮಾಧ್ಯಮ ವಿಭಾಗದಲ್ಲಿ ಸಕ್ರಿಯನಾಗಿದ್ದ ಎಂಬ ವಿಚಾರ ರಾಜಕೀಯ ವಲಯದಲ್ಲೂ ಭಾರಿ ಚರ್ಚೆಗೆ ಕಾರಣವಾಗಿದೆ. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಪಕ್ಷದ ಮುಖಂಡರು, ಆತ ಸರಿಯಾಗಿ ಕೆಲಸ ಮಾಡದ ಕಾರಣ ಈ ಹಿಂದೆಯೇ ಆತನನ್ನು ಪಕ್ಷದಿಂದ ದೂರ ಇಡಲಾಗಿತ್ತು ಮತ್ತು ಪ್ರಸ್ತುತ ಆತನಿಗೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ.