ಯಾದಗಿರಿ ,ಏಪ್ರಿಲ್ 01: ಕೌಟುಂಬಿಕ ಜಮೀನು ವಿವಾದವೊಂದು ವಿಕೋಪಕ್ಕೆ ತಿರುಗಿ, ಯುವಕನೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಸುರಪುರ ತಾಲೂಕಿನ ಮಾವಿನಮಟ್ಟಿ ಗ್ರಾಮದಲ್ಲಿ ನಡೆದಿದೆ. ತಂದೆ ಕಳೆದುಕೊಂಡಿದ್ದರೂ ಛಲ ಬಿಡದೆ ಕಾನೂನು ಹೋರಾಟದ ಮೂಲಕ ತನ್ನ ಪಾಲಿನ ಜಮೀನನ್ನು ಮರಳಿ ಪಡೆದಿದ್ದೇ ಪರಮೇಶ್ವರ (27) ಎಂಬ ಯುವಕನ ಪಾಲಿಗೆ ಮೃತ್ಯುವಾಗಿ ಪರಿಣಮಿಸಿದೆ.

ಕೊಲೆಯಾದ ಪರಮೇಶ್ವರನ ತಂದೆ ಮಲ್ಲಪ್ಪ ಹಾಗೂ ಆರೋಪಿ ಹನುಮಂತರಾಯ ಅಣ್ಣ-ತಮ್ಮಂದಿರು. ಕುಟುಂಬದ ಆಸ್ತಿಯಲ್ಲಿ ತಲಾ 13 ಎಕರೆ ಹಂಚಿಕೆಯಾಗಿದ್ದರೂ, ಮಲ್ಲಪ್ಪನ ಹೆಸರಿಗಿದ್ದ ಹೆಚ್ಚುವರಿ 2 ಎಕರೆ ಜಮೀನನ್ನು ಹನುಮಂತರಾಯ ಕಳೆದ 20 ವರ್ಷಗಳಿಂದ ಬಲವಂತವಾಗಿ ಅತಿಕ್ರಮಿಸಿಕೊಂಡಿದ್ದ. ತಂದೆಯ ನಿಧನದ ನಂತರ ಜವಾಬ್ದಾರಿ ಹೊತ್ತ ಪರಮೇಶ್ವರ, ಪಂಚಾಯಿತಿ ಮತ್ತು ಕಾನೂನು ಸಮರ ನಡೆಸಿ ಇತ್ತೀಚೆಗಷ್ಟೇ ಆ ಜಮೀನನ್ನು ತನ್ನ ಸುಪರ್ದಿಗೆ ಪಡೆದಿದ್ದ. ಇದು ದೊಡ್ಡಪ್ಪನ ಕುಟುಂಬದ ಕೆಂಗಣ್ಣಿಗೆ ಕಾರಣವಾಗಿತ್ತು.
ಮಂಗಳವಾರ ರಾತ್ರಿ ಮನೆ ಬಳಿ ನಿಂತಿದ್ದ ಪರಮೇಶ್ವರನ ಮೇಲೆ ಹನುಮಂತರಾಯ ತನ್ನ ಮಕ್ಕಳು ಹಾಗೂ ಸಂಬಂಧಿಕರ ದೊಡ್ಡ ಪಡೆಯೊಂದಿಗೆ ದಾಳಿ ನಡೆಸಿದ್ದಾನೆ. ರೇವಣಸಿದ್ದೇಶ್ವರ ದೇವಸ್ಥಾನದ ಮುಂಭಾಗದಲ್ಲೇ ಪರಮೇಶ್ವರನನ್ನು ಎಳೆದಾಡಿ ತಲ್ವಾರ್, ಬರ್ಚಿ ಹಾಗೂ ಕಲ್ಲುಗಳಿಂದ ಮನಬಂದಂತೆ ಹಲ್ಲೆ ನಡೆಸಲಾಗಿದೆ. ರಕ್ಷಿಸಲು ಬಂದ ಸಹೋದರ ರೇವಣಸಿದ್ದನ ಮೇಲೆಯೂ ಮಾರಣಾಂತಿಕ ಹಲ್ಲೆ ನಡೆಸಲಾಗಿದ್ದು, ಆತ ತೀವ್ರ ಗಾಯಗೊಂಡಿದ್ದಾನೆ. ಮಾರಕಾಸ್ತ್ರಗಳ ಆರ್ಭಟಕ್ಕೆ ಹೆದರಿ ಗ್ರಾಮಸ್ಥರು ಹತ್ತಿರ ಸುಳಿಯದ ಸ್ಥಿತಿ ನಿರ್ಮಾಣವಾಗಿತ್ತು. ತೀವ್ರ ರಕ್ತಸ್ರಾವದಿಂದ ಪರಮೇಶ್ವರ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ.
ಘಟನಾ ಸ್ಥಳಕ್ಕೆ ಯಾದಗಿರಿ ಎಸ್ಪಿ ಪೃಥ್ವಿಕ್ ಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಒಟ್ಟು 21 ಜನರ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಈಗಾಗಲೇ ಮೂವರು ಪ್ರಮುಖ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉಳಿದ 18 ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.