ಮಲ್ಪೆ ಬೋಟ್ ನಾಪತ್ತೆ ಪ್ರಕರಣ: ಆತ್ಮಹತ್ಯೆಗೆ ಯತ್ನಿಸಿದ್ದ ಮೀನುಗಾರನ ಸಹೋದರ ಸಾವು

ಉಡುಪಿ ಮೇ 16: ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಮಲ್ಪೆಯ ಸುವರ್ಣ ತ್ರಿಭುಜ ಬೋಟ್‌ ಅವಘಡದಲ್ಲಿ ನಾಪತ್ತೆಯಾದ ಸಹೋದರನ ಚಿಂತೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಭಟ್ಕಳ ನಿವಾಸಿ ಚಂದ್ರಶೇಖರ್ ಮೊಗೇರ (30) ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾರೆ.

ಡಿಸೆಂಬರ್ , 15, 2018 ರಿಂದ ಮಲ್ಪೆಯಿಂದ ಮೀನಗಾರಿಕೆಗೆ ತೆರಳಿ ನಾಪತ್ತೆಯಾದ ಮೀನುಗಾರರಲ್ಲಿ ಚಂದ್ರಶೇಖರ್ ಮೊಗೇರ ಅವರ ಸಹೋದರ ರಮೇಶ್ ಕೂಡ ಒಬ್ಬರು. ಸಹೋದರ ಮೀನುಗಾರಿಕೆ ತೆರಳಿ ನಾಪತ್ತೆಯಾದ ನಂತರ ಚಂದ್ರಶೇಖರ ಖಿನ್ನತೆಗೆ ಒಳಗಾಗಿದ್ದರು ಎಂದು ಹೇಳಲಾಗಿದ್ದು, ಒಂದು ವಾರದ ಹಿಂದೆ ಖಿನ್ನತೆಯಲ್ಲಿ ಇಲಿ ಪಾಷಾಣ ಸೇವಿಸಿದ್ದರು. ಆದರೆ ಇಲಿ ಪಾಷಾಣ ಸೇವಿಸಿದ್ದನ್ನು ಮನೆಯವರಿಗೆ ತಿಳಿಸಿರಲಿಲ್ಲ.

ಆರೋಗ್ಯ ತೀವ್ರ ಹದಗೆಟ್ಟ ಹಿನ್ನೆಲೆಯಲ್ಲಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಗುರುವಾರ ಬೆಳಗ್ಗೆ 10:30 ಕ್ಕೆ ಚಿಕಿತ್ಸೆ ಫಲಿಸದೆ ಚಂದ್ರಶೇಖರ್ ಮೃತಪಟ್ಟಿದ್ದಾರೆ‌. ಮೃತದೇಹವನ್ನು ಅಜ್ಜರಕಾಡು ಜಿಲ್ಲಾ ಆಸ್ಪತ್ರೆ ಶವಗಾರದಲ್ಲಿ ಇರಿಸಲಾಗಿದೆ.