ಶಿರಸಿ, ಏಪ್ರಿಲ್ 25: ಹಸೆಮಣೆ ಏರಲು ಕೇವಲ ಕೆಲವೇ ಗಂಟೆಗಳ ಕಾಲಾವಕಾಶ ಇರುವಾಗ ವಧುವೊಬ್ಬಳು ನಾಪತ್ತೆಯಾಗಿರುವ ಆಘಾತಕಾರಿ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದಲ್ಲಿ ಇಂದು ನಡೆದಿದೆ.

ಸೀಫಾ ಖಾನ್ ನಾಪತ್ತೆಯಾದ ಯುವತಿ. ಇಲ್ಲಿನ ಉಸರಿ ರಸ್ತೆಯ ಕಲ್ಯಾಣ ಮಂಟಪದಲ್ಲಿ ಇಂದು ಮಧ್ಯಾಹ್ನ ಈಕೆಯ ವಿವಾಹ ಮಹೋತ್ಸವ ನೆರವೇರಬೇಕಿತ್ತು. ಮದುವೆಯ ಕಾರ್ಯಗಳಲ್ಲಿ ಕುಟುಂಬಸ್ಥರು ಹಾಗೂ ಬಂಧು-ಮಿತ್ರರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ವೇಳೆ ಈ ಅನಿರೀಕ್ಷಿತ ಬೆಳವಣಿಗೆ ಸಂಭವಿಸಿದೆ. ಮದುವೆಯ ಮುಹೂರ್ತಕ್ಕೆ ಮುನ್ನ ವಧುವನ್ನು ಸಜ್ಜುಗೊಳಿಸಲು ಕುಟುಂಬದ ಸದಸ್ಯರು ಆಕೆಯ ಕೋಣೆಗೆ ತೆರಳಿದಾಗ ಯುವತಿ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ತಕ್ಷಣವೇ ಎಚ್ಚೆತ್ತ ಮನೆಯವರು ಕಲ್ಯಾಣ ಮಂಟಪದ ಆವರಣ, ಸಂಬಂಧಿಕರ ಮನೆ ಹಾಗೂ ಪರಿಚಿತರ ಸ್ಥಳಗಳಲ್ಲಿ ತೀವ್ರ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಲಭ್ಯವಾಗಿಲ್ಲ. ಸಂಭ್ರಮದಲ್ಲಿದ್ದ ಕುಟುಂಬಕ್ಕೆ ಈ ಸುದ್ದಿ ಬರಸಿಡಿಲಿನಂತೆ ಎರಗಿದೆ.
ಮೂಲಗಳ ಮಾಹಿತಿಯ ಪ್ರಕಾರ, ಸೀಫಾ ಖಾನ್ ಈ ಹಿಂದೆ ಎಂಬಿಬಿಎಸ್ (MBBS) ವ್ಯಾಸಂಗ ಮಾಡುತ್ತಿದ್ದ ಯುವಕನೋರ್ವನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ. ಆದರೆ, ಈ ಪ್ರೇಮ ಸಂಬಂಧಕ್ಕೆ ಕುಟುಂಬಸ್ಥರಿಂದ ವಿರೋಧ ವ್ಯಕ್ತವಾಗಿತ್ತು. ಪೋಷಕರು ಇಂದು ಬೇರೊಬ್ಬ ಯುವಕನೊಂದಿಗೆ ವಿವಾಹ ಮಾಡಲು ನಿಶ್ಚಯಿಸಿದ್ದರು. ಇದೇ ಕಾರಣಕ್ಕೆ ಯುವತಿಯು ಮದುವೆಯ ಕೆಲ ಕ್ಷಣಗಳ ಮುನ್ನ ತನ್ನ ಪ್ರಿಯಕರನೊಂದಿಗೆ ತೆರಳಿರಬಹುದು ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ.
ಈ ಕುರಿತು ಯುವತಿಯ ತಂದೆ ಝಹೀರ್ ಖಾನ್ ಅವರು ಶಿರಸಿಯ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮಗಳನ್ನು ಪತ್ತೆಹಚ್ಚಿಕೊಡುವಂತೆ ಪೋಷಕರು ಪೊಲೀಸರಲ್ಲಿ ಮನವಿ ಮಾಡಿದ್ದು, ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.