ಚಾಮರಾಜನಗರ ,ಏಪ್ರಿಲ್ 17 : ತಂದೆ ಬೈದರೆಂಬ ಕ್ಷುಲ್ಲಕ ಕಾರಣಕ್ಕೆ ಮನನೊಂದ ಬಾಲಕನೊಬ್ಬ ಸಾರ್ವಜನಿಕ ನೀರಿನ ಟ್ಯಾಂಕ್ ಏರಿ ಆತ್ಮಹತ್ಯೆ ಬೆದರಿಕೆ ಹಾಕಿದ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದ ನಾಗರತ್ಮಮ್ಮ ಬಡಾವಣೆಯಲ್ಲಿ ತಡರಾತ್ರಿ ನಡೆದಿದೆ.

ನಾಗರತ್ನಮ್ಮ ಬಡಾವಣೆಯ ನಿವಾಸಿ ಶ್ರೀನಿವಾಸ್ ಎಂಬ ಬಾಲಕನೇ ಈ ಕೃತ್ಯಕ್ಕೆ ಮುಂದಾದವನು. ಮನೆಯಲ್ಲಿ ತಂದೆ ಯಾವುದೋ ವಿಚಾರಕ್ಕೆ ಬೈದಿದ್ದರಿಂದ ತೀವ್ರವಾಗಿ ಕೋಪಗೊಂಡ ಬಾಲಕ, ತಡರಾತ್ರಿ ಯಾರಿಗೂ ತಿಳಿಯದಂತೆ ಬಡಾವಣೆಯಲ್ಲಿದ್ದ ಬೃಹತ್ ನೀರಿನ ಟ್ಯಾಂಕ್ ಏರಿದ್ದಾನೆ. ಮೇಲೇರಿದವನೇ ಅಲ್ಲಿಂದ ಕೆಳಗೆ ಜಿಗಿಯುವುದಾಗಿ ಬೆದರಿಕೆ ಹಾಕಲು ಶುರುಮಾಡಿದ್ದು, ಇದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಆತಂಕಕ್ಕೊಳಗಾದರು.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಪೊಲೀಸ್ ಅಧಿಕಾರಿಗಳು ರಕ್ಷಣಾ ಕಾರ್ಯ ಆರಂಭಿಸಿದರು. ಬಾಲಕ ಕೆಳಗೆ ಇಳಿಯಲು ನಿರಾಕರಿಸಿದ್ದರಿಂದ ಸ್ಥಳದಲ್ಲಿ ಸುಮಾರು ಒಂದೂವರೆ ಗಂಟೆಗಳ ಕಾಲ ತೀವ್ರ ಸಂಚಲನ ಮೂಡಿತು. ಸ್ಥಳೀಯರು ಹಾಗೂ ಸಿಬ್ಬಂದಿ ಬಾಲಕನಿಗೆ ಸಮಾಧಾನಪಡಿಸಿ, ಪ್ರೀತಿಯಿಂದ ಮಾತನಾಡಿಸಿ ಕೆಳಗೆ ಇಳಿಯುವಂತೆ ಮನವೊಲಿಸುವಲ್ಲಿ ಯಶಸ್ವಿಯಾದರು.
ಅಂತಿಮವಾಗಿ ಬಾಲಕನನ್ನು ಸುರಕ್ಷಿತವಾಗಿ ಕೆಳಗೆ ಇಳಿಸಿದ ನಂತರ ಬಡಾವಣೆಯ ಜನತೆ ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಬಳಿಕ ಪೋಷಕರು ಮತ್ತು ಸ್ಥಳೀಯ ಹಿರಿಯರು ಬಾಲಕನಿಗೆ ತಿಳುವಳಿಕೆ ಹೇಳಿ ಬುದ್ಧಿವಾದ ಹೇಳಿದ್ದಾರೆ. ಅಗ್ನಿಶಾಮಕ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಸಂಭವನೀಯ ಅನಾಹುತವೊಂದು ತಪ್ಪಿದಂತಾಗಿದೆ.