ಬೆಳ್ತಂಗಡಿ, ಮಾರ್ಚ್ 28: ಸ್ನಾನಕ್ಕಾಗಿ ನದಿಗೆ ತೆರಳಿದ್ದ ನಾಲ್ವರು ವಿದ್ಯಾರ್ಥಿಗಳ ಪೈಕಿ ಓರ್ವ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ದಾರುಣ ಘಟನೆ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಅಂತರಾಯ ಪಲ್ಕೆ ಪ್ರದೇಶದಲ್ಲಿ ಶನಿವಾರ ಮಧ್ಯಾಹ್ನ ಸಂಭವಿಸಿದೆ.

ಮೃತ ವಿದ್ಯಾರ್ಥಿಯನ್ನು ಉಜಿರೆಯ ನಿವಾಸಿ ಹಾಗೂ ಸ್ಥಳೀಯ ಶಾಲೆಯ ವಿದ್ಯಾರ್ಥಿ ಹಫೀಝ್ ಎಂದು ಗುರುತಿಸಲಾಗಿದೆ. ಮಾಹಿತಿಯ ಪ್ರಕಾರ, ಉಜಿರೆಯ ಕುಂಟಿನಿ ಪರಿಸರದ ನಾಲ್ವರು ಬಾಲಕರು ಮಧ್ಯಾಹ್ನ ವೇಳೆ ಅಂತರಾಯ ಗುಂಡಿಗೆ ಸ್ನಾನ ಮಾಡಲು ತೆರಳಿದ್ದರು. ಈ ವೇಳೆ ಈಜುತ್ತಿದ್ದಾಗ ಹಫೀಝ್ ಅಕಸ್ಮಾತ್ತಾಗಿ ನೀರಿನ ಸುಳಿಗೆ ಸಿಲುಕಿ ನಾಪತ್ತೆಯಾಗಿದ್ದಾನೆ.
ಘಟನೆ ಗಮನಿಸಿದ ಸ್ನೇಹಿತರು ಹಾಗೂ ಸ್ಥಳೀಯರು ತಕ್ಷಣವೇ ಹುಡುಕಾಟ ಆರಂಭಿಸಿದ್ದು, ಕೆಲವೇ ಹೊತ್ತಿನಲ್ಲೇ ಶವವನ್ನು ಪತ್ತೆಹಚ್ಚಿ ಮೇಲಕ್ಕೆತ್ತಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.