ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಇಟ್ಟಿದ್ದ ಉಡುಪಿ ಮೂಲದ ಆದಿತ್ಯರಾವ್ ಪೊಲೀಸರಿಗೆ ಶರಣು

ಬೆಂಗಳೂರು ಜನವರಿ 22:ಇಡೀ ದೇಶವನ್ನೇ ಬೆಚ್ಚಿ ಬಿಳಿಸಿದ್ದ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣ ಶಂಕಿತ ಆರೋಪಿ ಇಂದು ಬೆಂಗಳೂರಿನಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ಐಜಿಪಿ ನೀಲಮಣಿರಾಜು ಅವರ ಎದುರು ಬೆಳಿಗ್ಗೆ ಶರಣಾಗಿದ್ದಾನೆ.

‘ಬಾಂಬ್ ಇಟ್ಟಿದ್ದು ನಾನೇ’ ಎಂದು ಹಿರಿಯ ಪೊಲೀಸ್ ಅಧಿಕಾರಿಗಳ ಬಳಿ ಈತ ತಪ್ಪೊಪ್ಪಿಕೊಂಡಿದ್ದಾನೆ ಎಂದು ಹೇಳಲಾಗಿದೆ. ಈಗ ಆರೋಪಿಯನ್ನು ಹಲಸೂರು ಗೇಟ್ ಪೊಲೀಸ್ ಠಾಣೆಗೆ ಕರೆತರಲಾಗಿದೆ. ಆರೋಪಿಯನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದು ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಇಟ್ಟಿದ್ದ ಸಂದರ್ಭ ಬಜ್ಪೆ ವಿಮಾನ ನಿಲ್ದಾಣದ ಸಿಸಿಟಿವಿಗಳನ್ನು ಪರಿಶೀಲಿಸಿದ ಮಂಗಳೂರು ಪೊಲೀಸರಿಗೆ ಆದಿತ್ಯ ರಾವ್ ಮೇಲೆ ಶಂಕೆ ವ್ಯಕ್ತವಾಗಿತ್ತು. ಈತನೇ ಕೃತ್ಯ ಎಸಗಿರಬಹುದು ಎನ್ನುವ ಅನುಮಾನದ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರಿಗೆ ಈತನ ಭಾವಚಿತ್ರವನ್ನು ಕಳುಹಿಸಿಕೊಟ್ಟಿದ್ದರು. ಶಂಕಿತ ಆರೋಪಿ ತುಳು ಮಾತನಾಡುತ್ತಿದ್ದ ಹಿನ್ನೆಲೆಯಲ್ಲಿ ಈತನೇ ಮತ್ತೊಮ್ಮೆ ಈ ಕೃತ್ಯ ಎಸಗಿರಬಹುದು ಎನ್ನುವುದಕ್ಕೆ ಪುಷ್ಠಿ ಸಿಕ್ಕಿತ್ತು.

2018ರಲ್ಲಿ ಆದಿತ್ಯ ರಾವ್ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಕರೆ ಮಾಡಿದ್ದ. ಈ ಪ್ರಕರಣದಲ್ಲಿ 9 ತಿಂಗಳು ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿದ್ದ.

ಉಡುಪಿ ಜಿಲ್ಲೆ ಮಣಿಪಾಲದ ಹುಡ್ಕೋ ಕಾಲೋನಿಯಲ್ಲಿ ವಾಸವಾಗಿದ್ದ ಆದಿತ್ಯ ರಾವ್ ಮೆಕ್ಯಾನಿಕಲ್ ಎಂಜಿನಿಯರಿಂಗ್ ಓದಿದ್ದ. ಉದ್ಯೋಗ ಸಂಬಂಧ ಬೆಂಗಳೂರಿಗೆ ತೆರಳಿದ್ದ ಆದಿತ್ಯ ರಾವ್ ವಿಮಾನ ನಿಲ್ದಾಣದಲ್ಲಿ ಕೆಲಸದ ಕನಸು ಹೊತ್ತಿದ್ದ. ಕೆಲಸ ಸಿಗದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಕೆಲಸ ಬಿಟ್ಟು ಮಂಗಳೂರಿನಲ್ಲಿ ತಂದೆ ಜೊತೆ ಕೆಲಕಾಲದಿಂದ ವಾಸವಾಗಿದ್ದ. ಈ ವೇಳೆ ಮದುವೆಯ ಸಮಯದಲ್ಲಿ ಊಟ ಬಡಿಸಲು ತೆರಳುತ್ತಿದ್ದ. ಇದರ ಜೊತೆಗೆ ಬಾಣಸಿಗನಾಗಿಯೂ ಕೆಲಸ ಮಾಡುತ್ತಿದ್ದ.

‘ಮಂಗಳೂರು ಬಾಂಬ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಮಂಗಳೂರು ನಗರ ಪೊಲೀಸರ ತಂಡ ವಿಮಾನದಲ್ಲಿ ಬೆಂಗಳೂರಿಗೆ ಹೊರಟಿದೆ. ಶಂಕಿತನ ವಿಚಾರಣೆ ನಡೆಸುವ ಜೊತೆಗೆ ಹೆಚ್ಚಿನ ಮಾಹಿತಿ ಕಲೆಹಾಕಲಿದೆ’ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಹರ್ಷ ಟ್ವೀಟ್ ಮಾಡಿದ್ದಾರೆ.

Facebook Comments

comments