ಮುಂಬೈ ಮೇ 24: ಬಾಲಿವುಡ್ನ ಜನಪ್ರಿಯ ನಟಿ ಕರಿಷ್ಮಾ ಕೆ. ತನ್ನಾ ಅವರು ತುಳು ಸಂಪ್ರದಾಯದಂತೆ ಸೀಮಂತ ಶಾಸ್ತ್ರ ಮಾಡಿಸಿಕೊಳ್ಳುವ ಮೂಲಕ ಕರಾವಳಿಯ ಆಚಾರ-ವಿಚಾರಗಳಿಗೆ ಮನಸೋತಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನಟಿ, ತಮ್ಮ ಪತಿಯ ಮನೆಯವರ ತುಳವ ಸಂಪ್ರದಾಯದಂತೆ ನಡೆದ ಪೂಜಾ ವಿಧಿವಿಧಾನಗಳ ಸುಂದರ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಕರಿಷ್ಮಾ ತನ್ನಾ ಅವರು ಮಂಗಳೂರು ಮೂಲದ ಉದ್ಯಮಿ ವರುಣ್ ಬಂಗೇರಾ ಅವರ ಜೊತೆ 2022 ರಲ್ಲಿ ಮುಂಬೈನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಗರ್ಭಿಣಿಯಾಗಿರುವ ನಟಿಗೆ ಪತಿ ವರುಣ್ ಅವರ ಕುಟುಂಬಸ್ಥರು ದಕ್ಷಿಣ ಭಾರತದ, ವಿಶೇಷವಾಗಿ ತುಳುನಾಡಿನ ಸಾಂಪ್ರದಾಯಿಕ ಶೈಲಿಯಲ್ಲಿ ಸೀಮಂತ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಈ ಸಂಭ್ರಮದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿರುವ ಕರಿಷ್ಮಾ, “ನಾವಿಬ್ಬರೂ ಜೊತೆಯಾಗಿ ದಕ್ಷಿಣ ಭಾರತದ ಶೈಲಿಯಲ್ಲಿ ಸೀಮಂತ ಶಾಸ್ತ್ರವನ್ನು ಆನಂದಿಸಿದ್ದೇವೆ. ತುಳುನಾಡಿನ ಈ ಸುಂದರ ಪೂಜೆ ವಿಧಿವಿಧಾನಗಳು, ಸಂಪ್ರದಾಯ, ಮಂತ್ರಗಳು, ಹೂವು ಹೀಗೆ ಪ್ರತಿಯೊಂದು ಸಣ್ಣ ಆಚರಣೆಯನ್ನು ಹತ್ತಿರದಿಂದ ನೋಡಿ ನಿಜಕ್ಕೂ ಅದ್ಭುತ ಎನಿಸಿತು. ಆ ಕ್ಷಣ ನಾವು ಕನಸಿನ ಲೋಕದಲ್ಲಿ ಇದ್ದೇವೆ ಅನಿಸಿತ್ತು” ಎಂದು ಕೊಂಡಾಡಿದ್ದಾರೆ.

ಸೀಮಂತ ಶಾಸ್ತ್ರದಲ್ಲಿ ಕುಟುಂಬದವರ ಆಶೀರ್ವಾದದಿಂದ ಹಿಡಿದು, ಪ್ರತಿಯೊಂದು ಕ್ಷಣದಲ್ಲೂ ಇದ್ದ ಮಮತೆ ಎಲ್ಲವೂ ಈ ಕಾರ್ಯಕ್ರಮಕ್ಕೆ ಹೆಚ್ಚು ಮೆರುಗು ನೀಡಿತ್ತು. ಈ ಸಂಭ್ರಮ ಇಡೀ ದಿನ ನಮ್ಮಿಬ್ಬರಿಗೂ, ನಮ್ಮ ಪುಟ್ಟ ಮಗುವಿಗೂ ವಿಶೇಷ ದಿನವಾಗಿತ್ತು. ಸಾಂಪ್ರದಾಯಿಕ ಶೈಲಿಯ ಸೀಮಂತ ಶಾಸ್ತ್ರದ ಮೂಲಕ ನಮ್ಮದೊಂದು ಪುಟ್ಟ ಕನಸು ನನಸಾಗಿದೆ. ಸುಂದರವಾದ ಹೊಸ ಅಧ್ಯಾಯಕ್ಕೆ ಹೆಜ್ಜೆ ಇಡುವ ವೇಳೆಯಲ್ಲಿ ನಮಗೆ ಸಿಗುತ್ತಿರುವ ಪ್ರೀತಿ-ಕಾಳಜಿ ಹಾಗೂ ಆಶೀರ್ವಾದಕ್ಕೆ ಕೃತಜ್ಞತೆ ತಿಳಿಸುತ್ತೇವೆ” ಎಂದು ಕರಿಷ್ಮಾ ತನ್ನಾ ಸಂತಸ ಹಂಚಿಕೊಂಡಿದ್ದಾರೆ.

ಬಾಲಿವುಡ್ ತಾರೆಯೊಬ್ಬರು ಕರಾವಳಿಯ ಸಂಸ್ಕೃತಿಯನ್ನು ಇಷ್ಟಪಟ್ಟು ಆಚರಿಸಿರುವುದಕ್ಕೆ ತುಳುನಾಡಿನ ನೆಟ್ಟಿಗರು ಹಾಗೂ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ನಟಿಗೆ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.