ಫೆಬ್ರವರಿ, 08 ಬೆಂಗಳೂರು: ಬಾಡಿ ಬಿಲ್ಡರ್ ವೊಬ್ಬರು ಪ್ರೀತಿ ಮಾಡಿದ ಯುವತಿ ಕೈ ಕೊಟ್ಟಳು ಅನ್ನುವ ಕಾರಣಕ್ಕೆ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬಾಡಿ ಬಿಲ್ಡರ್ ಕಿರಣ್ (26) ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟ ದುರ್ದೈವಿಯಾಗಿದ್ದಾನೆ. ಕಿರಣ್ ಕಳೆದ 3ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆದರೆ ಯುವತಿ ಬೇರೆ ಯುವಕನೊಂದಿಗೆ ತನ್ನ ಮದುವೆ ನಿಶ್ಚಯವಾಗಿದೆ ಎಂದು ಮದುವೆಯ ಆಮಂತ್ರಣ ಪತ್ರಿಕೆ ಹಾಗೂ ಹೊಸ ಸೀರೆಯನ್ನು ತೋರಿಸಿದ್ದಳು ಎನ್ನಲಾಗಿದೆ. ಇದರಿಂದ ಮನನೊಂದ ಕಿರಣ್ ಮನೆಗೆ ಬಂದು ರೂಂನ ಬಾಗಿಲು ಲಾಕ್ ಮಾಡಿಕೊಂಡು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮನೆಯ ಡೋರ್ ಓಪನ್ ಮಾಡಿದಾಗ ಆತ್ಮಹ್ಯೆಯ ಪ್ರಕರಣ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದಿರುವ ಕಿರಣ್, ಆತ್ಮಹತ್ಯೆಗೆ ಪ್ರೇಯಸಿ ಹಾಗೂ ಆಕೆಯ ತಾಯಿಯೇ ಕಾರಣ ಅಂತಾ ಬರೆದಿದ್ದು, ತನ್ನ ಮೊಬೈಲ್ ಪಾಸ್‌ವರ್ಡ್ ಅನ್ನು ಕೂಡ ಪತ್ರದಲ್ಲಿ ಉಲ್ಲೇಖಿಸಿ ಬಳಿಕ ನೇಣಿಗೆ ಶರಣಾಗಿದ್ದಾನೆ. ಈ ಬಗ್ಗೆ ಮಹಾಲಕ್ಷ್ಮಿ ಲೇಔಟ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.



