ಕಣ್ಣೂರು: ನಟಿ ಹನಿ ರೋಸ್ ವಿರುದ್ಧ ಅಶ್ಲೀಲ ಹಾಗೂ ಲೈಂಗಿಕ ಬಣ್ಣದ ಹೇಳಿಕೆಗಳನ್ನು ನೀಡಿದ ಗಂಭೀರ ಆರೋಪ ಎದುರಿಸುತ್ತಿದ್ದ ಕೇರಳದ ಪ್ರಖ್ಯಾತ ಉದ್ಯಮಿ ಬಾಬಿ ಚೆಮ್ಮನೂರು, ಇದೀಗ ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮದ ಪೋಸ್ಟ್ ಮೂಲಕ ನಟಿಯ ಬಳಿ ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ್ದಾರೆ. ತಮ್ಮ ಹೇಳಿಕೆಗಳು ನಟಿ ಹಾಗೂ ಅವರ ಕುಟುಂಬಕ್ಕೆ ತೀವ್ರ ನೋವುಂಟು ಮಾಡಿದ್ದು, ಈ ಹಿನ್ನೆಲೆಯಲ್ಲಿ ಹನಿ ರೋಸ್ ಅವರು ದಾಖಲಿಸಿರುವ ಲೈಂಗಿಕ ಕಿರುಕುಳದ ಪ್ರಕರಣವನ್ನು ಹಿಂತೆಗೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಕಳೆದ 2025 ರಲ್ಲಿ ಕಣ್ಣೂರಿನಲ್ಲಿ ನಡೆದ ಆಭರಣ ಪ್ರದರ್ಶನ ಮಳಿಗೆಯ ಉದ್ಘಾಟನಾ ಸಮಾರಂಭದಲ್ಲಿ ಬಾಬಿ ಚೆಮ್ಮನೂರು ಅವರು ಹನಿ ರೋಸ್ ವಿರುದ್ಧ ವಿವಾದಾತ್ಮಕ ಕಾಮೆಂಟ್ಗಳನ್ನು ಮಾಡಿದ್ದರು. ಈ ಬಗ್ಗೆ ನಟಿ ಕಾನೂನು ಹೋರಾಟಕ್ಕಿಳಿದು ದೂರು ದಾಖಲಿಸಿದ ತಿಂಗಳುಗಳ ಬಳಿಕ ಉದ್ಯಮಿಯ ಬಂಧನವಾಗಿತ್ತು. ಪ್ರಸ್ತುತ ಜಾಮೀನಿನ ಮೇಲೆ ಹೊರಬಂದಿರುವ ಬಾಬಿ, ಸೋಷಿಯಲ್ ಮೀಡಿಯಾದಲ್ಲಿ ಕ್ಷಮಾಪಣಾ ಪತ್ರ ಬರೆದಿದ್ದಾರೆ.

“ಶ್ರೀಮತಿ ಹನಿ ರೋಸ್ ಬಗ್ಗೆ ನಾನು ನೀಡಿದ ಹೇಳಿಕೆಗಳು ಅವರಿಗೆ ಮತ್ತು ಅವರ ಕುಟುಂಬಕ್ಕೆ ಗಣನೀಯ ದುಃಖ ಹಾಗೂ ನೋವನ್ನುಂಟುಮಾಡಿವೆ ಎಂದು ನಾನು ಈಗ ಅರಿತುಕೊಂಡಿದ್ದೇನೆ. ನಾನು ಉಂಟುಮಾಡಿದ ಹಾನಿಗೆ ತೀವ್ರವಾಗಿ ಕ್ಷಮೆಯಾಚಿಸುತ್ತೇನೆ. ನನ್ನ ಮಾತುಗಳು ಮತ್ತು ಅವು ಬೀರಿದ ಪ್ರಭಾವಕ್ಕೆ ನಾನು ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇನೆ” ಎಂದು ಬಾಬಿ ಚೆಮ್ಮನೂರು ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.

“ನಾನು ಎಲ್ಲರನ್ನೂ ಗೌರವ, ಪ್ರೀತಿಯಿಂದ ನಡೆಸಿಕೊಳ್ಳುವ ವ್ಯಕ್ತಿ. ಸೋಷಿಯಲ್ ಮೀಡಿಯಾದಲ್ಲಿ ಕೇವಲ ಹಾಸ್ಯ ಮತ್ತು ಹಗುರವಾದ ವಿಷಯ ಹಂಚಿಕೊಳ್ಳುತ್ತೇನೆಯೇ ಹೊರತು ಯಾರನ್ನೂ ನೋಯಿಸುವ ಉದ್ದೇಶ ನನಗಿಲ್ಲ. ನನಗೆ ಯಾವುದೇ ದುರುದ್ದೇಶವಿರಲಿಲ್ಲ. ನನ್ನ ಈ ಹೃತ್ಪೂರ್ವಕ ಕ್ಷಮೆಯಾಚನೆಯನ್ನು ಸ್ವೀಕರಿಸಿ, ಅವರು ನನ್ನ ಮೇಲಿರುವ ಕಾನೂನು ಪ್ರಕರಣವನ್ನು ಹಿಂತೆಗೆದುಕೊಳ್ಳುವುದನ್ನು ಪರಿಗಣಿಸುತ್ತಾರೆ ಎಂದು ಭಾವಿಸುತ್ತೇನೆ” ಎಂದು ಅವರು ವಿನಂತಿಸಿದ್ದಾರೆ. ಉದ್ಯಮಿಯ ಈ ಸಾರ್ವಜನಿಕ ಕ್ಷಮೆಯಾಚನೆಗೆ ನಟಿ ಹನಿ ರೋಸ್ ಇನ್ನು ಹೇಗೆ ಪ್ರತಿಕ್ರಿಯಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.