ಬೆಂಗಳೂರು, ಏಪ್ರಿಲ್ 25: ಬಿಎಂ ಟಿಸಿ ಬಸ್ ಮತ್ತು ಸ್ಕೂಟರ್ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಉತ್ತರಹಳ್ಳಿ ಮುಖ್ಯ ರಸ್ತೆಯಲ್ಲಿ ಶನಿವಾರ ಸಂಭವಿಸಿದೆ.

ಮೃತ ವಿದ್ಯಾರ್ಥಿನಿಯನ್ನು 21 ವರ್ಷದ ಸಿರಿಶಾ ಎಂದು ಗುರುತಿಸಲಾಗಿದೆ. ಸಿರಿಶಾ ಅವರು ತಮ್ಮ ಸ್ಕೂಟರ್ನಲ್ಲಿ ಉತ್ತರಹಳ್ಳಿ ಮುಖ್ಯ ರಸ್ತೆಯಲ್ಲಿ ಸಂಚರಿಸುತ್ತಿದ್ದಾಗ, ಪಕ್ಕದಲ್ಲೇ ಬಂದ ಬಿಎಂಟಿಸಿ ಬಸ್ ಅವರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸಿರಿಶಾ ಅವರು ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ಬಸ್ಸಿನ ಚಕ್ರ ವಿದ್ಯಾರ್ಥಿನಿಯ ತಲೆಯ ಮೇಲೆ ಹರಿದಿದ್ದರಿಂದ, ತೀವ್ರ ರಕ್ತಸ್ರಾವವಾಗಿ ಅವರು ಸ್ಥಳದಲ್ಲೇ ಸಾವನಪ್ಪಿದ್ದಾರೆ
ಅಪಘಾತದ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಕೆಂಗೇರಿ ಸಂಚಾರಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಬಿಎಂಟಿಸಿ ಬಸ್ ಚಾಲಕ ಚಂದ್ರು ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಕೆಂಗೇರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.