Connect with us

LATEST NEWS

ಬ್ಲೂ ಫ್ಲಾಗ್ ಮಾನ್ಯತೆ ಪಡೆದ ಪಡುಬಿದ್ರೆ ಬೀಚ್ ನಲ್ಲಿ ನಮಾಜ್ ನಡೆಸಲು ಮುಂದಾದ ಪ್ರವಾಸಿಗರು.. ಸಿಬ್ಬಂದಿಗಳಿಂದ ಆಕ್ಷೇಪ

ಉಡುಪಿ ಮಾರ್ಚ್ 15: ಪಡುಬಿದ್ರೆಯ ಬ್ಲೂ ಫ್ಲಾಗ್ ಮಾನ್ಯತೆ ಪಡೆದಿರುವ ಬೀಚ್ ನಲ್ಲಿ ನಮಾಜ್ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಬೀಚ್ ಸಿಬ್ಬಂದಿ ಹಾಗೂ ಪ್ರವಾಸಿಗರ ನಡುವೆ ಮಾತಿನ ಚಕಮಕಿ ನಡೆದಿರುವ ಘಟನೆ ನಡೆದಿದೆ.


ಪಡುಬಿದ್ರೆ ಬ್ಲೂ ಪ್ಲ್ಯಾಗ್ ಮಾನ್ಯತೆ ಪಡೆದಿರುವ ಈ ಸಮುದ್ರ ತೀರದಲ್ಲಿ ಅಂತರಾಷ್ಟ್ರೀಯ ಮಾನದಂಡಗಳ ಪ್ರಕಾರ ಯಾವುದೇ ಧಾರ್ಮಿಕ ಚಟುವಟಿಕೆ ನಡೆಸುವ ಹಾಗೆ ಇಲ್ಲ. ಪಡುಬಿದ್ರೆಯ ಈ ಬೀಚ್ ಗೆ ಬ್ಲೂ ಫ್ಲಾಗ್ ಅಂತಾರಾಷ್ಟ್ರೀಯ ಮಾನ್ಯತೆ ದೊರಕಿದೆ. ಪ್ರವಾಸೋದ್ಯಮದ ದೃಷ್ಟಿಯಿಂದ ಈ ಮಾನ್ಯತೆಯನ್ನು ನೀಡಲಾಗಿದ್ದು ಬೀಚ್ ಆವರಣದಲ್ಲಿ ಯಾವುದೇ ಧಾರ್ಮಿಕ ಚಟುವಟಿಕೆಗಳನ್ನು ನಡೆಸುವಂತಿಲ್ಲ ಎಂಬ ಫಲಕವನ್ನು ಕೂಡ ಹಾಕಲಾಗಿದೆ.


ಆದರೆ ಭಾನುವಾರ ಸಂಜೆ ಬೀಚ್ ನೋಡಲು ಮಂಗಳೂರಿನಿಂದ ಬಂದಿದ್ದ ಒಂದು ತಂಡ ಕಡಲತೀರದಲ್ಲಿ ನಮಾಜ್ ಮಾಡಲು ಮುಂದಾಯಿತು. ಇದಕ್ಕೆ ಬೀಚ್ ನ ಬ್ಲೂ ಫ್ಲಾಗ್ ಸಿಬ್ಬಂದಿಗಳು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಯಾವುದೇ ಧರ್ಮದ ಧಾರ್ಮಿಕ ಚಟುವಟಿಕೆಗಳನ್ನು ನಡೆಸಲು ಬೀಚ್ ಆವರಣದಲ್ಲಿ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು. ಇದರ ಹೊರತಾಗಿಯೂ ಓರ್ವ ಯುವಕ ನಮಾಜ್ ಕೈಗೊಂಡಿದ್ದಾನೆ. ಇದರಿಂದ ಸಿಬ್ಬಂದಿಗಳು ಮತ್ತು ಪ್ರವಾಸಿಗಳ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು.


ಬ್ಲೂ ಫ್ಲಾಗ್ ಬೀಚ್ ಆದಕಾರಣ ಕಟ್ಟುನಿಟ್ಟಿನ ನಿಯಮಾವಳಿಗಳನ್ನು ಪಾಲಿಸಲೇಬೇಕು ಎಂದು ಸಿಬ್ಬಂದಿಗಳು ಸ್ಪಷ್ಟಪಡಿಸಿದ ನಂತರ ಗಲಾಟೆಗೆ ಮುಂದಾಗಿದ್ದ ಪ್ರವಾಸಿಗರು ಕ್ಷಮೆಯಾಚಿಸಿ ವಾಪಸಾಗಿದ್ದಾರೆ ಎಂದು ತಿಳಿದುಬಂದಿದೆ.