ಮುಂಬೈ ಜನವರಿ 20: ಯುದ್ದಗಳು ನಡೆಯುತ್ತಿದ್ದರೂ ತಲೆಕೆಡಿಸಿಕೊಳ್ಳದ ಭಾರತದ ಷೇರು ಮಾರುಕಟ್ಟೆ ಅಮೇರಿಕ ಅಧ್ಯಕ್ಷ ಟ್ರಂಪ್ ಬಂದ ಬಳಿಕ ಏರಳಿತದಲ್ಲೇ ಸಾಗುತ್ತಿದೆ. ಇತ್ತೀಚೆಗೆ ಟ್ರಂಪ್ ಸುಂಕಾಸ್ತ್ರ ಪ್ರಯೋಗ ಮಾಡುತ್ತಿರುವ ಹಿನ್ನಲೆ ಸತತ ಇಳಿಕೆಯತ್ತ ಭಾರತದ ಷೇರು ಮಾರುಕಟ್ಟೆ ಸಾಗಿದೆ.

ಸದ್ಯ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಠಿಣ ಆರ್ಥಿಕ ನಿಲುವುಗಳು ಭಾರತೀಯ ಷೇರು ಮಾರುಕಟ್ಟೆಯ ಮೇಲೆ ಸುನಾಮಿಯಂತೆ ಅಪ್ಪಳಿಸಿವೆ. ಮಂಗಳವಾರದ ವಹಿವಾಟಿನಲ್ಲಿ ಮುಂಬೈ ಷೇರು ಪೇಟೆಯಲ್ಲಿನ(Stock market) ಸೂಚ್ಯಂಕ ಸೆನ್ಸೆಕ್ಸ್ 1,000ಕ್ಕೂ ಹೆಚ್ಚು ಅಂಕಗಳ ಭಾರಿ ಕುಸಿತ ಕಾಣುವ ಮೂಲಕ ಹೂಡಿಕೆದಾರರನ್ನು ಕಂಗಾಲಾಗಿಸಿದೆ.
ಇಂದಿನ ವಹಿವಾಟಿನ ಅಂತ್ಯಕ್ಕೆ ಸೆನ್ಸೆಕ್ಸ್ 82,180.47 ಅಂಕಗಳಿಗೆ ಕುಸಿದರೆ, ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 350 ಅಂಕಗಳಿಗಿಂತಲೂ ಅಧಿಕ ಕುಸಿತ ಕಂಡು 25,232.50 ಅಂಕಗಳಲ್ಲಿ ಸ್ಥಿರವಾಯಿತು. ಅಲ್ಲದೆ, ಮಾರುಕಟ್ಟೆ ಆರಂಭವಾದ ಕೆಲವೇ ಗಂಟೆಗಳಲ್ಲಿ ಹೂಡಿಕೆದಾರರು ಭಾರಿ ಪ್ರಮಾಣದ ಷೇರುಗಳನ್ನು ಮಾರಾಟ ಮಾಡಿದ್ದರಿಂದ ಸೂಚ್ಯಂಕಗಳು ಪಾತಾಳಕ್ಕೆ ಇಳಿದವು.
ಷೇರು ಮಾರುಕಟ್ಟೆಯ ಈ ದಿಢೀರ್ ಕುಸಿತಕ್ಕೆ ಪ್ರಮುಖವಾಗಿ ಟ್ರಂಪ್ ಸುಂಕದ ಎಚ್ಚರಿಕೆ, ಹಾಗೂ ವಿದೇಶಿ ಹೂಡಿಕೆದಾರರು ಭಾರತದ ಷೇರು ಮಾರುಕಟ್ಟೆಯಿಂದ ಹಣವನ್ನು ಹಿಂದಕ್ಕೆ ತೆಗೆದುಕೊಳ್ಳುತ್ತಿರುವುದು. ಸದ್ಯ ಟ್ರಂಪ್ ದಿನ ಕೊಡುವ ಹೇಳಿಕೆಗಳ ಮೇಲೆ ವಿಶ್ವದ ಷೇರು ಮಾರಕಟ್ಟೆ ನಿಂತಿದೆ.



