Home Blog Page 446

ಬೈಕ್ ರಾಲಿ ಬಿಜೆಪಿಗೆ ಸವಾಲು: ಸಂಜೀವ ಮಠಂದೂರು

ಮಂಗಳೂರು, ಸೆಪ್ಟೆಂಬರ್ 05 : ಬಿಜೆಪಿ ಸೆಪ್ಟಂಬರ್ 7 ರಂದು ನಡೆಯುವ ಮಂಗಳೂರು ಚಲೋ ಬೈಕ್ ರಾಲಿಯನ್ನು ಸವಾಲಾಗಿ ತೆಗೆದುಕೊಂಡಿದೆ. ಪಕ್ಷದ ಕಾರ್ಯಕರ್ತರು ಬಸ್, ರೈಲು ಹಾಗೂ ವಿಮಾನಗಳಲ್ಲಿ ಜಿಲ್ಲೆಯನ್ನು ತಲುಪಲಿದ್ದಾರೆ ಎಂದು  ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಹೇಳಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮಗೋಷ್ಟಿಯನ್ನು ಉದ್ಧೇಶಿಸಿ ಮಾತನಾಡಿದ ಅವರು ಬಿಜೆಪಿ ಯುವ ಮೋರ್ಚಾ ಹಮ್ಮಿಕೊಂಡಿರುವ ಬೈಕ್ ಚಲೋ ಕಾರ್ಯಕ್ರಮ ಜನರಿಗೆ ಮಾನಸಿಕ ಸ್ಥೈರ್ಯ ತುಂಬುವ ಕಾರ್ಯಕ್ರಮವಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಹಲವು ಬಿಜೆಪಿ ಮುಖಂಡರು ಭಾಗವಹಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದರು. ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರಕಾರ ಬಿಜೆಪಿ ನಾಯಕರನ್ನು ಬಂಧಿಸಿ ಗೂಂಡಾ ವರ್ತನೆಯನ್ನು ತೋರುತ್ತಿದೆ. ಸಿದ್ಧರಾಮಯ್ಯ ಸಿದ್ಧ ರಾವಣ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ ಎಂದರು. ರಾಜ್ಯದಲ್ಲಿ ಸಿದ್ಧರಾಮಯ್ಯ ಅಘೋಷಿತ ತುರ್ತು ಪರಿಸ್ಥಿತಿಯನ್ನು ನಿರ್ಮಿಸಿದೆ. ಯಾವುದೇ ಕಾರಣಕ್ಕೂ ಮಂಗಳೂರಿನಲ್ಲಿ ಬೈಕ್ ರಾಲಿ ನಡೆಸಿಯೇ ಸಿದ್ಧ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು. ರಾಲಿಗೆ ಕಾರ್ಯಕರ್ತರನ್ನು ಒಟ್ಟುಗೂಡಿಸಲು ಬಿಜೆಪಿ ನಾಯಕರು ಸಾಮಾಜಿಕ ಜಾಲತಾಣಗಳಲ್ಲೂ ಮನವಿ ಮಾಡುತ್ತಿದ್ದು, ಈ ವಿಡಿಯೋಗಳು ವೈರಲ್ ಆಗಿವೆ..

ವಿಡಿಯೋ..

ಯುವಮೋರ್ಚಾ ರಾಲಿಗೆ ತಡೆ, ಜಿಲ್ಲೆಗೆ ಹೆಚ್ಚುವರಿ ಪೋಲೀಸ್ ಪಡೆ,

ಮಂಗಳೂರು, ಸೆಪ್ಟಂಬರ್ 5: ಸೆಪ್ಟಂಬರ್ 7 ರಂದು ಮಂಗಳೂರಿನಲ್ಲಿ ಬಿಜೆಪಿ ಯುವಮೋರ್ಚಾ ನಡೆಸಲಿರುವ ಮಂಗಳೂರು ಚಲೋ ಬೈಕ್ ರಾಲಿಯನ್ನು ತಡೆಯಲು ಪೋಲೀಸ್ ಇಲಾಖೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ.

ಭದ್ರತೆಗಾಗಿ ಹೆಚ್ಚುವರಿ ಪೋಲೀಸರನ್ನು ಹಾಗೂ ಇತರ ಅರೆಸೇನಾ ಪಡೆಗಳನ್ನು ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ನಿಯೋಜಿಸಿದ್ದು, ಜಿಲ್ಲೆಯಾದ್ಯಂತ ಪೋಲೀಸ್ ಪಥಸಂಚಲವನ್ನೂ ನಡೆಸಿದೆ.

ಬಂದೋಬಸ್ತ್ ಹಿನ್ನಲೆಯಲ್ಲಿ ಜಿಲ್ಲೆಗೆ ಸಾವಿರಾರು ಪೋಲೀಸರು ಹೊರ ಜಿಲ್ಲೆಗಳಿಂದಲೂ ಬಂದಿದ್ದು, 1 ತುಕಡಿ RAF, 15 KSRP ಪ್ಲಟೂನ್, 12 CAR ತುಕಡಿಗಳನ್ನು ಈಗಾಗಲೇ ಕರೆಸಿಕೊಳ್ಳಲಾಗಿದೆ.

ಬೆಳಗಾವಿಯಿಂದ 100 ಮಿಕ್ಕಿದ ಪೋಲೀಸರು ಜಿಲ್ಲೆಗೆ ಆಗಮಿಸಿದ್ದು, 6 ಎಸ್ಪಿ ಶ್ರೇಣಿಯ ಅಧಿಕಾರಿಗಳು ಸೇರಿದಂತೆ ಹಿರಿಯ ಅಧಿಕಾರಿಗಳು ಬಂದೋಬಸ್ತ್ ನ ಉಸ್ತುವಾರಿಯನ್ನು ವಹಿಸಲಿದ್ದಾರೆ.

ಬೈಕ್ ರಾಲಿ ನಡೆಸಲು ಯಾವುದೇ ಅನುಮತಿ ಇಲ್ಲದ ಕಾರಣ ರಾಲಿಯನ್ನು ಜಿಲ್ಲೆಗೆ ಪ್ರವೇಶಿಸಲು ಬಿಡುವುದಿಲ್ಲ ಎಂದು ಮಂಗಳೂರು ಪೋಲೀಸ್ ಕಮಿಷನರ್ ಟಿ.ಆರ್. ಸುರೇಶ್ ಈಗಾಗಲೇ ಸ್ಪಷ್ಟಪಡಿಸಿದ್ದಾರೆ.

ಈ ನಡುವೆ ರಾಲಿ ಬದಲು ಮಂಗಳೂರಿನಲ್ಲಿ ಸಮಾವೇಶ ನಡೆಸಲು ಅನುಮತಿಯನ್ನು ನೀಡಿದ್ದು, ಈ ಬಗ್ಗೆ ಪರಿಶೀಲನೆಯನ್ನೂ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಮತಾಂತರಕ್ಕೆ ಯತ್ನ, ಇಬ್ಬರು ಪೋಲೀಸ್ ವಶಕ್ಕೆ ?

ಬಂಟ್ವಾಳ, ಸೆಪ್ಟಂಬರ್ 5: ಮತಾಂತರಕ್ಕೆ ಯತ್ನಿಸುತ್ತಿದ್ದಾರೆ ಎನ್ನುವ ಆರೋಪಗಳ ಹಿನ್ನಲೆಯಲ್ಲಿ ಗ್ರಾಮಸ್ಥರು ಇಬ್ಬರು ಯುವತಿಯರನ್ನು ಬಂಟ್ವಾಳ ಗ್ರಾಮಾಂತರ ಪೋಲೀಸರ ವಶಕ್ಕೆ ನೀಡಿರುವ ವಿಚಾರ ತಿಳಿದುಬಂದಿದೆ.

ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಾವಳಪಡ್ನೂರು ಗ್ರಾಮದ ಉಗ್ಗಬೆಟ್ಟು ಎನ್ನುವ ಗ್ರಾಮೀಣ ಭಾಗದಲ್ಲಿ ಇರುವ ಮನೆಗಳಿಗೆ ಧರ್ಮವೊಂದಕ್ಕೆ ಸಂಬಂಧಪಟ್ಟ ಪುಸ್ತಕವನ್ನು ಮನೆ ಮಂದಿಗೆ ನೀಡುತ್ತಿದ್ದಾರೆ ಮತ್ತು ಮನೆಮಂದಿಯನ್ನು ಮತಾಂತರಕ್ಕೆ ಯತ್ನಿಸುತ್ತಿದ್ದಾರೆ ಎನ್ನುವ ಆರೋಪದಡಿ ಸ್ಥಳೀಯ ಗ್ರಾಮಸ್ಥರು ಇಬ್ಬರು ಯುವತಿಯರನ್ನು ಸುತ್ತುವರಿದು ವಿಚಾರಿಸಿದ್ದಾರಲ್ಲದೆ, ಹೆಚ್ಚಿನ ತನಿಖೆಗಾಗಿ ಬಂಟ್ವಾಳ ಗ್ರಾಮಾಂತರ ಪೋಲೀಸರಿಗೆ ಒಪ್ಪಿಸಿದ್ದಾರೆ ಎನ್ನುವುದು ತಿಳಿದುಬಂದಿದೆ.

ಹೆಚ್ಚಾಗಿ ಅನಕ್ಷರಸ್ಥರೇ ಹಾಗೂ ಕೃಷಿ ಚಟುವಟಿಕೆಗಳಲ್ಲೇ ತೊಡಗಿಕೊಂಡಿರುವ ಕುಟುಂಬಗಳು ಇಲ್ಲಿದ್ದು, ಮನೆಯಲ್ಲಿ ಮಹಿಳೆಯರು ಇರುವ ಸಂದರ್ಭ ನೋಡಿ ಮನೆಗೆ ಪ್ರವೇಶಿಸುತ್ತಿದ್ದರೆಂದು ಗ್ರಾಮಸ್ಥರ ಆರೋಪವಾಗಿದೆ.

ಕ್ರೈಸ್ತ ಧರ್ಮಕ್ಕೆ ಸೇರಿದ ಪುಸ್ತಕಗಳನ್ನು ಮನೆ ಮಂದಿಗೆ ನೀಡಿ ಆ ಧರ್ಮದ ಬಗ್ಗೆ ಪ್ರಚಾರ ನಡೆಸುತ್ತಿದ್ದರೆಂದೂ ಗ್ರಾಮಸ್ಥರ ಆರೋಪವಾಗಿದೆ.

ಬಿಜೆಪಿಯವರಿಂದ ಹತ್ಯೆಗೀಡಾದವರ ಸಂಖ್ಯೆ ಹೆಚ್ಚಿದೆ – ರಮಾನಾಥ ರೈ

ಮಂಗಳೂರು,ಸೆಪ್ಟೆಂಬರ್ 05 : ಬಿಜೆಪಿ ಆಯೋಜಿಸಿರುವ ಮಂಗಳೂರು ಚಲೋ  ಬೈಕ್ ಜಾಥಾ ದಲ್ಲಿ  ಏನಾದರೂ ಅನಾಹುತಗಳು , ಅಹಿತಕರ ಘಟನೆಗಳು ಸಂಭವಿಸಿದರೆ ಯಾರು ಹೊಣೆ ಅದ್ದರಿಂದ ಈ ಬಗ್ಗೆ ಸರ್ಕಾರ ಗಂಭೀರವಾಗಿ ಯೋಚಿಸಬೇಕಾಗುತ್ತೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದ್ದಾರೆ.

ಬಿಜೆಪಿ ಯುವ ಮೋರ್ಚಾ ಆಯೋಜಿಸಿರುವ ಮಂಗಳೂರು ಚಲೋ ಪ್ರತಿಭಟನಾ ಬೈಕ್ ಜಾಥಾಕ್ಕೆ ನಿರ್ಬಂಧ ಹೇರಿರುವ ರಾಜ್ಯ ಸರಕಾರದ ಕ್ರಮವನ್ನು ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಸಮರ್ಥಿಸಿದ್ದಾರೆ.

ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಪ್ರತಿಭಟನಾ ಬೈಕ್ ಜಾಥಾ ದಕ್ಷಿಣಕನ್ನಡ ಜಿಲ್ಲೆ ಪ್ರವೇಶಿಸಿದರೆ, ಶಾಂತಿ ಕದಡುವ ಆತಂಕವಿದೆ. ಅದಲ್ಲದೇ ಇತರ ಜಿಲ್ಲೆಗಳಿಂದ ಬೈಕ್ ಗಳು ಬಂದಾಗ ರಸ್ತೆ ಸುಗಮ ಸಂಚಾರಕ್ಕೆ ತೊಂದರೆ ಆಗಲಿರುವ ಹಿನ್ನಲೆಯಲ್ಲಿ ಬೈಕ್ ಜಾಥಾವನ್ನು ನಿರ್ಬಂಧಿಸಲಾಗಿದೆ ಎಂದು ಅವರು ಹೇಳಿದರು.

ಪ್ರತಿಭಟನಾ ಪಾದಯಾತ್ರೆ ಮಾಡಿದರೆ ತೊಂದರೆ ಇಲ್ಲ ಎಂದು ಹೇಳಿದ ಅವರು ಪಾದಯಾತ್ರೆಗೆ ಮುಖ್ಯಮಂತ್ರಿ ಅವರೂ ಹೇಳಿದ್ದಾರೆ ಎಂದು ತಿಳಿಸಿದರು. ರಾಜ್ಯದಲ್ಲಿ ಸಂಘ ಪರಿವಾರದ ಕಾರ್ಯಕರ್ತರು ಮಾತ್ರ ಸತ್ತಿಲ್ಲ ಇತರರು ಸತ್ತಿದ್ದಾರೆ. ಬಿಜೆಪಿಯಿಂದ ಹತ್ಯೆಗೀಡಾದವರ ಸಂಖ್ಯೆ ಹೆಚ್ಚಿದೆ ಎಂದು ಅವರು ಕಿಡಿಕಾರಿದರು.

ಹತ್ಯೆಗಳಲ್ಲಿ ಭಾಗಿಯಾಗಿರುವ ಸಂಘಟನೆಗಳನ್ನು ಹೊರತು ಪಡಿಸಿ ಸೆಪ್ಟೆಂಬರ್ 12 ರಂದು ಸಾಮರಸ್ಯ ನಡಿಗೆ ಮಾಡುವುದಾಗಿ ಹೇಳಿದ ಅವರು ಸಾಮರಸ್ಯ ನಡಿಗೆಯಲ್ಲಿ ಇತರೇ ಜಿಲ್ಲೆಯವರನ್ನು ಕರೆಸುತ್ತಿಲ್ಲ, ಇದೇ ಜಿಲ್ಲೆಯ ಜನರೇ ಭಾಗವಹಿಸುತ್ತಾರೆ . ಜನರ ಬೇಡಿಕೆಗೆ ಅನುಗುಣವಾಗಿ ಸಾಮರಸ್ಯ ನಡಿಗೆ ಆಯೋಜಿಸಿರುವುದಾಗಿ ರೈ ತಿಳಿಸಿದರು.

Video

ನೀರಿನ ಸೆಳೆತಕ್ಕೆ ಇಬ್ಬರು ನದಿಪಾಲು, ಮುಂದುವರಿದಿದೆ ಈಜಾಟದ ಗೋಳು

ಪುತ್ತೂರು,ಸೆಪ್ಟಂಬರ್ 5: ಸ್ನಾನಕ್ಕಾಗಿ ನೀರಿಗೆ ಇಳಿದ ಇಬ್ಬರು ನದಿ ಪಾಲಾದ ಘಟನೆ ಪುತ್ತೂರು ತಾಲೂಕಿನ ಕುದ್ಮಾರು ಗ್ರಾಮದ ಶಾಂತಿಮೊಗೇರು ಸೇತುವೆಯ ಸಮೀಪ ನಡೆದಿದೆ.

ಕಡಬದ ಕುಟ್ರಿಪ್ಪಾಡಿ ನಿವಾಸಿಗಳಾದ ಹರಿ ಮತ್ತು ಸತ್ಯ ಕುಮಾರಧಾರಾ ನದಿಯಲ್ಲಿ ಸ್ನಾನಕ್ಕೆಂದು ಬಂದ ಸಂದರ್ಭದಲ್ಲಿ ನೀರಿನ ಸೆಳೆತಕ್ಕೆ ಸಿಲುಕಿದ್ದಾರೆ. ದುರ್ಘಟನಾ ಸ್ಥಳದಲ್ಲಿ ಸ್ಥಳೀಯರು ಜಮಾಯಿಸಿದ್ದು, ಅಗ್ನಿಶಾಮಕದಳದವರು ಇನ್ನಷ್ಟೇ ಸ್ಥಳಕ್ಕೆ ಭೇಟಿ ನೀಡಬೇಕಿದೆ.ಶನಿವಾರದಂದು ಇದೇ ಪರಿಸರದಲ್ಲಿ ಕುಮಾರಧಾರಾ ನದಿಗೆ ಸ್ಥಾನಕ್ಕೆಂದು ಬಂದ ಬಂಟ್ವಾಳದ ಪೊಳಲಿ ನಿವಾಸಿ ಹರಿ ಎಂಬವರು ಕೂಡಾ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಅವರ ಮೃತದೇಹಕ್ಕಾಗಿ ಶೋಧ ಕಾರ್ಯ ಮುಂದುವರಿಯುತ್ತಿದ್ದ ಸಮಯದಲ್ಲೇ ಇಂದು ಮತ್ತೆ ಇಬ್ಬರು ನದಿ ಪಾಲಾಗಿದ್ದಾರೆ. ಕುಮಾರಧಾರಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದರೂ, ನದಿಯಲ್ಲಿ ಈಜಲು ಹಾಗೂ ಸ್ಥಾನ ಮಾಡಲು ತೆರಳುವುದು ಅಪಾಯಕಾರಿ ಎಂದು ತಿಳಿದಿದ್ದರೂ, ಇಂಥಹ ಸಾಹಸಕ್ಕೆ ಕೈ ಹಾಕುವ ಮೂಲಕ ಜನ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುತ್ತಿರುವುದು ಏಕೆ ಎನ್ನುವ ಪ್ರಶ್ನೆಯೂ ಮೂಡಿ ಬರುತ್ತಿದೆ. ಸ್ಥಳಕ್ಕೆ ಕಡಬ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ದಕ್ಷಿಣಕನ್ನಡ ಜಿಲ್ಲೆಯ ಸಾಮರಸ್ಯಕ್ಕೆ ಯಾವುದೇ ತ್ಯಾಗಕ್ಕೆ ಸಿದ್ದ – ಖಾದರ್

ಮಂಗಳೂರು, ಸೆಪ್ಟೆಂಬರ್ 05 : ಬಿಜೆಪಿ ಯುವಮೋರ್ಚಾ  ಹಮ್ಮಿಕೊಂಡ ಬೈಕ್ ಜಾಥಾ ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾಡಿದ ಬಿಜೆಪಿ ಅಜೆಂಡಾ ಎಂದು ರಾಜ್ಯ ಆಹಾರ ಸಚಿವರಾದ ಯು.ಟಿ. ಖಾದರ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಈ ಬಗ್ಗೆ ಸುದ್ದಿಗಾರೊಂದಿಗೆ ಪ್ರತಿಕ್ರಿಯಿಸಿರುವ ಖಾದರ್ ಎಸ್ ಡಿಪಿಐ, ಪಿಎಫ್ಐ ನಿಷೇಧ ಮಾಡಬೇಕೆಂಬ ಆಗ್ರಹದ ವಿಚಾರವನ್ನಿಟ್ಟು ಬಿಜೆಪಿ ಮಂಗಳೂರು ಚಲೋ ಹಮ್ಮಿಕೊಂಡಿದೆ. ಅದರೆ ಹತ್ತು ವರ್ಷ ಬಿಜೆಪಿ ಅಧಿಕಾರದಲ್ಲಿರುವಾಗ ಇದನ್ನು ಯಾಕೆ ನಿಷೇಧ ಮಾಡಿಲ್ಲ ಎಂದು ಸವಾಲು ಹಾಕಿದ್ದಾರೆ. ಈಗಲೂ ಕಾಲ ಮಿಂಚಿಲ್ಲ, ಕೇಂದ್ರದಲ್ಲಿ ಬಿಜೆಪಿ ಸರಕಾರ ಇದೆಯಲ್ಲ ನಿಷೇಧ ಮಾಡಲಿ ಎಂದು ಸವಾಲು ಹಾಕಿದ್ದಾರೆ.

ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ವಿರುದ್ಧ ಅಭ್ಯರ್ಥಿ ನಿಲ್ಲಿಸಲು ಬಿಜೆಪಿಗೆ ಎಸ್ ಡಿಪಿ ಐ ಬೇಕು. ರಮಾನಾಥ ರೈ, ಪೂಜಾರಿ, ನನ್ನ ವಿರುದ್ಧ ಅಭ್ಯರ್ಥಿ ನಿಲ್ಲಿಸಲು ಎಸ್ ಡಿಪಿಐ ಬೇಕು. ಮೈಸೂರಿನಲ್ಲಿ ಪ್ರತಾಪಸಿಂಹ ಜಯಗಳಿಸಬೇಕಿದ್ದರೆ ಇದೇ ಎಸ್ ಡಿಪಿಐ ಅಭ್ಯರ್ಥಿಯೇ ಕಾರಣ. ಇವರ ರಾಜಕೀಯ ಲಾಭ ಪಡೆದು ಈಗ ನಮ್ಮನ್ನು ದೂಷಿಸುತ್ತಾರೆ. ಈಗ ಬೇರೆ ಬಂಡವಾಳ ಇಲ್ಲ, ಹಾಗಾಗಿ ಬೈಕ್ ಜಾಥಾ ನಡೆಸಿ ಮಂಗಳೂರಿನಲ್ಲಿ ಅಶಾಂತಿ ವಾತಾವರಣ ನಿರ್ಮಾಣ ಮಾಡಲು ಹೊರಟಿದ್ದಾರೆ ಎಂದು ಬಿಜೆಪಿ ವಿರುದ್ದ ತೀವೃ ವಾಗ್ದಾಳಿ ನಡೆಸಿದರು. ದಕ್ಷಿಣಕನ್ನಡ ಜಿಲ್ಲೆಯ ಸಾಮರಸ್ಯಕ್ಕೆ , ಸಹೋದರತೆಗೆ ಯಾವುದೇ ತ್ಯಾಗಕ್ಕೆ ಸಿದ್ದ ಎಂದು ಖಾದರ್ ಹೇಳಿದರು.

Video

ರಮಾನಾಥ ರೈ ಸಾಮರಸ್ಯ ಯಾತ್ರೆಗೆ ಹೇಗೆ ಅನುಮತಿ ನೀಡುತ್ತೀರಿ ನೋಡ್ತೀವಿ : ಸಂಸದ ನಳಿನ್ ಎಚ್ಚರಿಕೆ

ಪುತ್ತೂರು ಸೆಪ್ಟೆಂಬರ್ 05: ರಾಜ್ಯ ಸರಕಾರ ಬಿಜೆಪಿ ಯುವಮೋರ್ಚಾ ಹಮ್ಮಿಕೊಂಡಿರುವ ಬೈಕ್ Rally ಯನ್ನು ತಡೆಯಲು ಹಿಂಬಾಗಿಲ ಮೂಲಕ ತುರ್ತುಪರಿಸ್ಥಿತಿಯನ್ನು ಹೇರುತ್ತಿದೆ ಎಂದು ದಕ್ಷಿಣಕನ್ನಡ ಸಂಸದ ನಳಿನ ಕುಮಾರ್ ಕಟೀಲ್ ಹೇಳಿದರು.

ಪುತ್ತೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ರಾಜ್ಯದಲ್ಲಿ ನಡೆದಂತಹ 11 ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವಂತಹ ಪಿಎಫ್ಐ ಸಂಘಟನೆಯನ್ನು ನಿಶೇಧಿಸುವಂತೆ ಒತ್ತಾಯಿಸಿ ಬಿಜೆಪಿ ಯುವ ಮೋರ್ಚಾ ಸೆಪ್ಟಂಬರ್ 7 ರಂದು ಮಂಗಳೂರು ಚಲೋ ಬೈಕ್ ರಾಲಿಯನ್ನು ಹಮ್ಮಿಕೊಂಡಿದೆ.

ರಾಜ್ಯ ಸರಕಾರ ತುರ್ತು ಪರಿಸ್ಥಿತಿ ಹೇರಿಕೆ ಪ್ರಯತ್ನ

ಕಾಂಗ್ರೇಸ್ ಸೋಲಿನ ಭೀತಿಯಲ್ಲಿ ಇದನ್ನು ಹಿಂಬಾಗಿಲಿನಿಂದ ತುರ್ತುಪರಿಸ್ಥಿತಿಯನ್ನು ಹೇರುವ ಮೂಲಕ ತಡೆಯುತ್ತಿದೆ ಎಂದು ಆರೋಪಿಸಿದ ಅವರು ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಹೋರಾಟದ ಹಕ್ಕಿದ್ದು, ಬಿಜೆಪಿ ನಡೆಸುತ್ತಿರುವ ಹೋರಾಟವನ್ನು ದಮನಿಸಲು ನಡೆಸುವ ಸರಕಾರದ ಹುನ್ನಾರವನ್ನು ತಡೆಯುವ ಶಕ್ತಿ ಬಿಜೆಪಿ ಪಕ್ಷಕ್ಕಿದೆ ಎಂದ ಅವರು ಬೈಕ್ ರಾಲಿಯನ್ನು ನಡೆಸಿಯೇ ಸಿದ್ಧ ಎಂದು ಎಂದು ಅವರು ಇದೇ ಸಂದರ್ಭದಲ್ಲಿ ಎಚ್ಚರಿಸಿದರು.

ರಮಾನಾಥ ರೈ ಸಾಮರಸ್ಯ ಯಾತ್ರೆ

ಸೆಪ್ಟಂಬರ್ 12 ರಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ನಡೆಸಲು ಉದ್ಧೇಶಸಿರುವ ಸಾಮರಸ್ಯ ಯಾತ್ರೆಯೂ ಕೂಡಾ ಕೋಮುಸೂಕ್ಷ್ಮ ಪ್ರದೇಶದಲ್ಲೇ ಸಾಗಲಿಕ್ಕಿದ್ದು, ಅದಕ್ಕೆ ಪೋಲೀಸರು ಹೇಗೆ ಅನುಮತಿ ಕೊಡುತ್ತಾರೆ ಎನ್ನುವುದನ್ನೂ ನಾವು ನೋಡಿಕೊಳ್ಳುವುದಾಗಿಯೂ ಅವರು ಇದೇ ಸಂದರ್ಭದಲ್ಲಿ ಹೇಳಿದರು.

ಮಂಗಳೂರು ಚಲೋ – ಹಿಂದೂ ಸಂಘಟನೆಗಳ ಎಂಟ್ರಿ

ಮಂಗಳೂರು ಸೆಪ್ಟೆಂಬರ್ 5: ಬಿಜೆಪಿ ಯುವಮೋರ್ಚಾ ಸೆಪ್ಟೆಂಬರ್ 7 ರಂದು ಆಯೋಜಿಸಿರುವ ಮಂಗಳೂರು ಚಲೋ ಪ್ರತಿಭಟನಾ ಬೈಕ್ Rally ಗೆ ರಾಜ್ಯದೆಲ್ಲೆಡೆ ಪೊಲೀಸ್ ಇಲಾಖೆ ನಿರ್ಭಂದ ಹೇರಿದೆ. ಇದು ಸಂಘಪರಿವಾರದ ಸಂಘಟನೆಗಳನ್ನು ಕೆರಳಿಸಿದೆ.

ವಿಎಚ್ ಪಿ , ಬಜರಂಗದಳ ಎಂಟ್ರಿ

ರಾಜ್ಯ ಸರಕಾರ ಪ್ರತಿಭಟನಾ Rally ಗೆ ಅನುಮತಿ ನಿರಾಕರಿಸಿರುವುದನ್ನು ವಿರೋಧಿಸಿ ಬಜರಂಗದಳ ಹಾಗು ವಿಶ್ವ ಹಿಂದು ಪರಿಷತ್ ಫಿಲ್ಡಿಗಿಳಿಯಲು ತಿರ್ಮಾನಿಸಿವೆ. ಈ ನಿಟ್ಟಿನಲ್ಲಿ ಬಜರಂಗದಳ ಹಾಗು ವಿ ಎಚ್ ಪಿ ಮುಖಂಡರ ಬೈಟಕ್ ಇಂದು ಮಂಗಳೂರಿನಲ್ಲಿ ಕರೆಯಲಾಗಿದೆ. ಮಂಗಳೂರು ನಗರದಲ್ಲಿ ಶಾಂತಿ ಕದಡುವ ಆತಂಕದ ಹಿನ್ನೆಲೆಯಲ್ಲಿ ಬೈಕ್ Rally ನಗರ ಪ್ರವೇಶಕ್ಕೆ ಅನುಮತಿ ನಿರಾಕರಿಸಲಾಗಿದೆ ಎಂದು ಮಂಗಳೂರು ಪೋಲಿಸ್ ಆಯುಕ್ತರಾದ ಟಿ. ಆರ್. ಸುರೇಶ್ ತಿಳಿಸಿದ್ದಾರೆ.

ಮಂಗಳೂರು ಚಲೋ ಬೈಕ್ Rally

ಬಿಜೆಪಿ ಯುವ ಮೋರ್ಚಾ ದ ವತಿಯಿಂದ ರಾಜ್ಯದ 5 ಭಾಗಳಿಂದ ಮಂಗಳೂರು ಚಲೋ ಪ್ರತಿಭಟನಾ ಬೈಕ್ Rally ಇಂದಿನಿಂದ ಆರಂಭಗೊಳ್ಳಲಿದೆ. ಬೆಂಗಳೂರು, ಹುಬ್ಬಳ್ಳಿ, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಮೈಸೂರಿನಿಂದ ಬೈಕ್ Rally ಹೊರಡಲಿದ್ದು ಸೆಪ್ಟೆಂಬರ್ 6 ರಂದು ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶ ಮಾಡಲಿದೆ. ಆದರೆ ಬಿಜೆಪಿ ಯುವಮೋರ್ಚಾ ದ ಈ ಬೈಕ್ Rally ಗೆ ರಾಜ್ಯ ದೆಲ್ಲೆಡೆ ನಿರ್ಭಂಧ ಹೇರಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರದ ಮಂತ್ರಕ್ಕೆ ಬಿಜೆಪಿ ತಿರು ಮಂತ್ರ ರೂಪಿಸಿದೆ.

ಕಾರ್ಯಕರ್ತರಿಗೆ ಜಿಲ್ಲಾ ಬಿಜೆಪಿಯಿಂದ ವ್ಯವಸ್ಥೆ ಬಗ್ಗೆ ಮಾಹಿತಿ

ಮಂಗಳೂರಿಗೆ ಆಗಮಿಸುವ ಯುವ ಮೋರ್ಚಾದ ಕಾರ್ಯಕರ್ತರಿಗೆ ಎಲ್ಲಾ ವ್ಯವಸ್ಥೆ ಮಾಡಿರುವ ಬಗ್ಗೆ ಮಾಹಿತಿ ರವಾನಿಸಲಾಗಿದೆ. ಬಲ ಪ್ರಯೋಗದ ಮೂಲಕ ಬೈಕ್ Rallyಯನ್ನು ತಡೆಯಲು ಪ್ರಯತ್ನಿಸಿದರೆ ರಸ್ತೆಯಲ್ಲೆ ಪ್ರತಿಭಟನಾ ಧರಣಿ ನಡೆಸಲು ಸೂಚನೆ ನೀಡಲಾಗಿದ್ದು. ಯಾವುದೇ ಕಾರಣಕ್ಕೂ ಪ್ರತಿಭಟನಾ Rally ಮೊಟಕು ಗೊಳಿಸುವ ಪ್ರಶ್ನೆಯೇ ಇಲ್ಲ, ಎಲ್ಲಾ ಕಾರ್ಯಕರ್ತರು ಬೈಕ್  ಜಾಥಾದಲ್ಲಿ ಪಾಲ್ಗೊಳ್ಳಲು ಸಾಮಾಜಿಕ ಜಾಲತಾಣಗಳ ಮೂಲಕ ಕರೆ ನೀಡುತ್ತಿದ್ದಾರೆ.

ವಿಡಿಯೋಗಾಗಿ..

ಸಿಪಿಎಂ ಕಿರಿಕ್,ಪೋಲೀಸರಿಂದ ಲಾಠಿ ರುಚಿ

ಸುಳ್ಯ, ಸೆಪ್ಟೆಂಬರ್ 05 : ಮರಳು ನೀತಿಯನ್ನು ಶೀಘ್ರವೇ ಜಾರಿಗೊಳಿಸುವಂತೆ ಒತ್ತಾಯಿಸಿ ಸಿಪಿಎಂ ಪಕ್ಷದಿಂದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನಾ ಸಂದರ್ಭದಲ್ಲಿ ರಸ್ತೆ ತಡೆ ನಡೆಸಲು ಯತ್ನಿಸಿದ ಕಾರ್ಯಕರ್ತನ್ನು ಪೋಲೀಸರು ಬಲವಂತವಾಗಿ ಎಬ್ಬಿಸುವ ಪ್ರಯತ್ನವೂ ನಡೆಯಿತು.

ಈ ಸಂದರ್ಭದಲ್ಲಿ ಪೋಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿಯೂ ನಡೆದಿದೆ. ಒರ್ವ ಪ್ರತಿಭಟನಾ ನಿರತ ಕಾರ್ಯಕರ್ತನಿಗೆ ಲಾಠಿಯ ರುಚಿ ಯನ್ನೂ ಪೋಲಿಸರು ತೋರಿಸಿದರು.

ಸರಕಾರ ಕೂಡಲೇ ಜಿಲ್ಲೆಯಲ್ಲಿ ಮರಳು ನೀತಿಯನ್ನು ಜಾರಿಗೆ ತರಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

 

ಚರಂಡಿಗೆ ಜಾರಿದ ಏರ್‌ ಇಂಡಿಯಾ ವಿಮಾನ, ಪ್ರಯಾಣಿಕರು ಸೇಫ್

ಕೊಚ್ಚಿ,ಸೆಪ್ಟೆಂಬರ್ 05 : ಕೊಚ್ಚಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಭವಿಸಲಿದ್ದ ಭಾರೀ ವಿಮಾನ ಅವಘಡವೊಂದು ಅದೃಷ್ಟವಷಾತ್‌ ತಪ್ಪಿ ಹೋಗಿದೆ.ಏರ್‌ ಇಂಡಿಯಾ (Air India Express IX 452) ವಿಮಾನವೊಂದು ಲ್ಯಾಂಡ್‌ ಆಗಿ ಪಾರ್ಕ್‌ ಮಾಡಲು ತೆರಳುತ್ತಿದ್ದ ವೇಳೆ ಟ್ಯಾಕ್ಸಿ ವೇಯಿಂದ ಜಾರಿ ನೀರು ಹೋಗುವ ಚರಂಡಿಗೆ ಹೋಗಿ ಸಿಕ್ಕಿಹಾಕಿಕೊಂಡಿದೆ. ಈ ದುರ್ಘಟನೆ ಘಟನೆ ನಸುಕಿನ 2.39 ರ ವೇಳೆಗೆ ನಡೆದಿದೆ. ಗಲ್ಫ್ ರಾಷ್ಟ್ರ ಅಬುಧಾಬಿಯಿಂದ ಹೊರಟ 6 ಸಿಬಂದಿಗಳು ಹಾಗೂ 102 ಪ್ರಯಾಣಿಕರಿದ್ದ ಬೋಯಿಂಗ್‌ 737-800 ನಸುಕಿನ 2.39 ರ ಹೊತ್ತಗೆ ಕೊಚ್ಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದಿದೆ. ಇಳಿದ ವಿಮಾನವನ್ನು ಪೈಲಟ್ ಟ್ಯಾಕ್ಷಿ ವೇ ಕಡೆಗೆ ಚಲಾಯಿಸುತ್ತಿದ್ದಾಗ ಅಕಸ್ಮತ್ ಜಾರಿಹೋಗಿ ನೀರು ಹೋಗುವ ಚರಂಡಿಗೆ ಅದರ ಚಕ್ರಗಳು ಸಿಕ್ಕಿಹಾಕಿಕೊಂಡು ಈ ದುರ್ಘಟನೆ ಸಂಭವಿಸಿದೆ. ಅದೃಷ್ಟವಶಾತ್‌ ಯಾವುದೇ ಪ್ರಾಣಾಪಾಯಗಳಿಲ್ಲದೆ ಎಲ್ಲಾ ಪ್ರಯಾಣಿಕರು ಪಾರಾಗಿದ್ದಾರೆ. ಅವಘಡ ನಡೆದ ತಕ್ಷಣ ಎಲ್ಲಾ ಪ್ರಯಾಣಿಕರನ್ನು ಏಣಿಯ ಸಹಾಯದಿಂದ ಕೆಳಗಿಳಿಸಲಾಗಿದ್ದು ಎಲ್ಲರೂ ಸುರಕ್ಷಿತವಾಗಿದ್ದಾರೆ. ತೀವೃ ಮಳೆಯ ಕಾರಣ ಈ ಅವಘಡ ಸಂಭವಿಸಿದ್ದು, ವಿಮಾನದ ಚಕ್ರಗಳು ಜಖಂಗೊಂಡಿವೆ. ಘಟನೆಯ ಸಮಗ್ರ ತನಿಖೆಗೆ ಆದೇಶಿಸಲಾಗಿದೆ.