Home Blog Page 3

ಬಂದೋಬಸ್ತ್ ನಲ್ಲಿದ್ದ ದಲಿತ ಪೊಲೀಸ್ ಸಿಬ್ಬಂದಿಯನ್ನು ದೇವಸ್ಥಾನದಿಂದ ಹೊರ ಹಾಕಿದ ಅರ್ಚಕ ವೃಂದ

ಬಂದೋಬಸ್ತ್ ನಲ್ಲಿದ್ದ ದಲಿತ ಪೊಲೀಸ್ ಸಿಬ್ಬಂದಿಯನ್ನು ದೇವಸ್ಥಾನದಿಂದ ಹೊರ ಹಾಕಿದ ಅರ್ಚಕ ವೃಂದ

ಮಂಗಳೂರು ಡಿಸೆಂಬರ್ 5: ದಲಿತ ಮಹಿಳೆ ಎನ್ನುವ ಕಾರಣಕ್ಕೆ ಕರ್ತವ್ಯನಿರತ ದಲಿತ ಮಹಿಳಾ ಪೊಲೀಸ್ ಪೇದೆಯನ್ನು ದೇವಸ್ಥಾನದಿಂದ ಹೊರಕ್ಕೆ ಕಳುಹಿಸಿರುವ ಘಟನೆ ಮಂಗಳೂರಿನ ಮೂಡಬಿದ್ರೆ ತಾಲೂಕಿನ ಕಡಂದಲೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆದಿದೆ.

ಮುಜರಾಯಿ ಇಲಾಖೆಯ ಅಧೀನದಲ್ಲಿರುವ ಈ ದೇವಸ್ಥಾನದಲ್ಲಿ ಕಳೆದ ಸೋಮವಾರ ಷಷ್ಠಿ ಮಹೋತ್ಸವ ಹಿನ್ನಲೆ ಮೂಡಬಿದ್ರೆ ಪೊಲೀಸರು ಬಂದೋಬಸ್ತ್ ನಡೆಸಿದ್ದರು. ದೇವಸ್ಥಾನದ ಒಳಾಂಗಣದಲ್ಲಿ ಭಕ್ತರ ಜನ ಸಂದಣಿಯನ್ನು ನಿಯಂತ್ರಿಸುತ್ತಿದ್ದ ಮಹಿಳಾ ಪೊಲೀಸ್ ಸಿಬ್ಬಂದಿ ದಲಿತ ಸಮುದಾಯದವರು ಎಂದು ಗೊತ್ತಾಗಿದ್ದೇ ತಡ, ಅಲ್ಲಿನ ಅರ್ಚಕ ವೃಂದದವರು ತಕ್ಷಣ ಆ ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ದೇವಸ್ಥಾನದಿಂದ ಹೊರಕ್ಕೆ ಕಳಿಸಿದ್ದಾರೆ.

ಅಲ್ಲದೆ ಪಾರ್ಕಿಂಗ್ ಸ್ಥಳದಲ್ಲಿ ಬಂದೋ ಬಸ್ತ್ ಮಾಡಿ, ದೇವಸ್ಥಾನದ ಒಳಗೆ ನಿಮ್ಮನ್ನು ಬಿಟ್ಟದ್ದು ಯಾರು? ಕ್ಷೇತ್ರಕ್ಕೆ ನಿಮ್ಮಿಂದ ಮೈಲಿಗೆಯಾಗಿದೆ ಎಂದು ಸಾವಿರಾರು ಭಕ್ತರ ಮುಂದೆಯೇ ಅವಮಾನಿಸಿ ಹೊರಗಡೆ ಕಳುಹಿಸಿದ್ದಾರೆ.

ಇದನ್ನು ಕೆಲವರು ವಿರೋಧಿಸಿದರೂ ಅರ್ಚಕ ವೃಂದ ಕ್ಯಾರೇ ಎನ್ನದೆ ದಲಿತ ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ದೇವಸ್ಥಾನದಿಂದ ಹೊರಕ್ಕೆ ಕಳುಹಿಸಿದ್ದಾರೆ. ಮಾತ್ರವಲ್ಲದೆ ಭೋಜನ ವ್ಯವಸ್ಥೆಯಲ್ಲೂ ತಾರತಮ್ಯ ನಡೆಸಿದ್ದು, ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಷಷ್ಠಿ ಮಹೋತ್ಸವದ ಸಂದರ್ಭ ಭದ್ರತೆಗೆ ನಿಯೋಜನೆಗೊಂಡ ತಮ್ಮ ಸಹದ್ಯೋಗಿಗೆ ಅವಮಾನ ಮಾಡಿದ ದೇವಸ್ಥಾನದ ಅರ್ಚಕ ವೃಂದದ ನಡೆಯಿಂದ ಹಾಗೂ ಭೋಜನದಲ್ಲೂ ಪಂಕ್ತಿ ಭೇದ ಮಾಡಿದ ಅರ್ಚಕರ ವರ್ತನೆಯಿಂದ ಕರ್ತವ್ಯನಿರತ ಎಲ್ಲ ಪೊಲೀಸರು ಸ್ಥಳೀಯ ಹೋಟೇಲ್‍ನಲ್ಲಿ ಮಧ್ಯಾಹ್ನದ ಊಟ ಮಾಡಿದ್ದರು.

ದೇವಸ್ಥಾನದ ಈ ರೀತಿಯ ವರ್ತನೆಗೆ ಈಗ ಭಾರಿ ಆಕ್ರೋಶ ವ್ಯಕ್ತವಾಗಿದ್ದು, ಘಟನೆ ಕುರಿತಂತೆ ಮುಖ್ಯಮಂತ್ರಿ ಕಚೇರಿಗೂ ದೂರು ನೀಡಲಾಗಿದೆ.

ಕಳ್ಳತನ ನಡೆಸಲು ಬಂದ ಕಳ್ಳರ ಬೆನ್ನಟ್ಟಿದ ಸ್ಥಳೀಯರು

ಕಳ್ಳತನ ನಡೆಸಲು ಬಂದ ಕಳ್ಳರ ಬೆನ್ನಟ್ಟಿದ ಸ್ಥಳೀಯರು

ಮಂಗಳೂರು ಡಿಸೆಂಬರ್ 5:ಉಳ್ಳಾಲದಲ್ಲಿ ತಡರಾತ್ರಿ ಕಳವು ನಡೆಸಲು ಯತ್ನಿಸುತ್ತಿದ್ದ ಕಳ್ಳರ ತಂಡವನ್ನು ಸ್ಥಳೀಯರು ಬೆನ್ನಟ್ಟಿರುವ ಘಟನೆ ಉಳ್ಳಾಲ ಕನೀರ್ ತೋಟ ಎಂಬಲ್ಲಿ ನಡೆದಿದೆ.

ಮದನಿ ನಗರದವರು ಎನ್ನಲಾದ ಮೂವರ ತಂಡ ನಿನ್ನೆ ತಡ ರಾತ್ರಿ ಕಳವಿಗೆ ಯತ್ನಿಸುತ್ತಿರುವುದು ಸ್ಥಳಿಯರ ಗಮನಕ್ಕೆ ಬಂದಿದ್ದು, ಕೂಡಲೇ ಕಾರ್ಯ ಪ್ರವರ್ತರಾದ ಸ್ಥಳೀಯ ಯುವಕರು ಕಳ್ಳರನ್ನು ಬೆನ್ನಟ್ಟಿದ್ದಾರೆ.

ಕೊನೆಗೂ ಮೂವರಲ್ಲಿ ಒಬ್ಬನನ್ನು ಹಿಡಿಯಲು ಯಶಸ್ವಿಯಾಗಿದ್ದು ಕಳ್ಳನನ್ನು ಉಳ್ಳಾಲ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ,ತೌಸಿಕ್ ಬಂಧಿತ ಆರೋಪಿಯಾಗಿದ್ದಾನೆ. ಉಳ್ಳಾಲ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರ ಕಳ್ಳತನ ವಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಸುರತ್ಕಲ್ ಬಾರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ 5 ಜನ ಆರೋಪಿಗಳ ಬಂಧನ

ಸುರತ್ಕಲ್ ಬಾರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ 5 ಜನ ಆರೋಪಿಗಳ ಬಂಧನ

ಮಂಗಳೂರು ಡಿಸೆಂಬರ್ 5: ಸುರತ್ಕಲ್‌ನಲ್ಲಿನ ಬಾರ್‌ವೊಂದರಲ್ಲಿ ಯುವಕನ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 5 ಜನ ಆರೋಪಿಗಳನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಸ್ಥಳೀಯ ನಿವಾಸಿಗಳಾದ ಮನೋಜ್ , ಶರತ್ , ಪ್ರವೀಣ್ ಕುಂದರ್ , ದೀಪಕ್ ರಾಜ್ , ಮಿಥುನ್ ಎಂದು ಗುರುತಿಸಲಾಗಿದೆ. ನವೆಂಬರ್ 29ರಂದು ರಾತ್ರಿ ಗುಡ್ಡೆಕೊಪ್ಲದ ಸಂದೇಶ್ ಎಂಬಾತನನ್ನು ಬಾರ್ ವೊಂದರಲ್ಲಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿತ್ತು.

ಮೀನುಗಾರಿಕೆ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದ ಸಂದೇಶ್, ಶಬರಿಮಲೆಗೆ ತೆರಳಿ ನವೆಂಬರ್ 28 ರಂದು ವಾಪಸಾಗಿದ್ದ. ಮರುದಿನ ರಾತ್ರಿ ಸುರತ್ಕಲ್ ಜಂಕ್ಷನ್ ಸಮೀಪದ ಖಾಸಗಿ ಬಾರ್ ಮುಂಭಾಗ ತನ್ನ ಸ್ನೇಹಿತರನ್ನು ಭೇಟಿಯಾಗಲು ತೆರಳಿದ್ದ. ನವರಾತ್ರಿ ಸಮಯದಲ್ಲಿ ಹುಲಿವೇಷ ಹಾಕುವ ತಂಡವನ್ನು ಮುನ್ನಡೆಸುವ ವಿಚಾರವಾಗಿ ಗೆಳೆಯರ ನಡುವೆ ಈ ಹಿಂದೆ ಆಗಿದ್ದ ಮನಸ್ತಾಪ ಮುನ್ನಲೆಗೆ ಬಂದು ಕುಡಿದ ಮತ್ತಿನಲ್ಲಿದ್ದ ಆರೋಪಿಗಳು, ಬಾರ್‌ನ ಬಾಗಿಲಿನ ಒಳ ಚಿಲಕ ಹಾಕಿ ಸಂದೇಶ್‌ನನ್ನು ಮಾರಕ ಆಯುಧಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿ ಬಳಿಕ ಪರಾರಿಯಾಗಿದ್ದರುಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪುತ್ತೂರು : ತಂದೆಯನ್ನು ಕಡಿದು ಕೊಲೆಗೈದ ಮಗ

ಪುತ್ತೂರು : ತಂದೆಯನ್ನು ಕಡಿದು ಕೊಲೆಗೈದ ಮಗ

ಪುತ್ತೂರು ಡಿಸೆಂಬರ್ 4: ಮಾನಸಿಕ ಅಸ್ವಸ್ಥ ಮಗ ತನ್ನ ತಂದೆಯನ್ನು ಕಡಿದು ಕೊಲೆಗೈದಿರುವ ಘಟನೆ ಪುತ್ತೂರಿನ ಪಾಣಾಜೆ ಗ್ರಾಮದ ಬೊಳ್ಳಂಬಳ್ಳ ಎಂಬಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ಕೃಷ್ಣ ನಾಯ್ಕ(65) ಎಂದು ಗುರುತಿಸಲಾಗಿದೆ. ಕೃಷ್ಣ ನಾಯ್ಕ್ ಅವರ ಮಗ ಉದಯ ನಾಯ್ಕ ಕೊಲೆ ಮಾಡಿರುವ ಆರೋಪಿ ಎಂದು ಹೇಳಲಾಗಿದೆ. ಕೊಲೆ ಆರೋಪಿ ಉದಯ ನಾಯ್ಕ ಮಾನಸಿಕ ಅಸ್ವಸ್ಥ ಎಂದು ತಿಳಿದು ಬಂದಿದೆ. ಪುತ್ತೂರು ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈಜಿಪ್ಟ್ ಆಯ್ತು ಈಗ ಮಂಗಳೂರಿಗೆ ಬಂದ ಟರ್ಕಿ ಈರುಳ್ಳಿ ಆದರೂ ಬೆಲೆ ಇಳಿದಿಲ್ಲ..!

ಈಜಿಪ್ಟ್ ಆಯ್ತು ಈಗ ಮಂಗಳೂರಿಗೆ ಬಂದ ಟರ್ಕಿ ಈರುಳ್ಳಿ ಆದರೂ ಬೆಲೆ ಇಳಿದಿಲ್ಲ..!

ಮಂಗಳೂರು ಡಿಸೆಂಬರ್ 4: ಮಂಗಳೂರು ಮಾರುಕಟ್ಟೆಗೆ ಈಜಿಪ್ಟ್ ಈರುಳ್ಳಿ ಬಂದ ನಂತರ ಈಗ ಮೊದಲ ಬಾರಿಗೆ ಟರ್ಕಿಯಿಂದ ಈರುಳ್ಳಿ ಆಮದಾಗಿದೆ. ಶತಕದ ಸುತ್ತ ಸುತ್ತುತ್ತಿರುವ ಈರುಳ್ಳಿ ಬೆಲೆ ಟರ್ಕಿಯಿಂದ ಈರುಳ್ಳಿ ಬಂದರೂ ಕೂಡ ಮತ್ತೆ ಬೆಲೆ ಮತ್ತೆ ಏರಿಕೆಯಾಗಿದೆ.

ಮಾರುಕಟ್ಟೆ ಮೂಲಗಳಪ್ರಕಾರ ಮಂಗಳೂರು ಬಂದರು ಮಾರುಕಟ್ಟೆ ಪ್ರದೇಶಕ್ಕೇ 50 ಟನ್‌ನಷ್ಟು ಟರ್ಕಿ ಈರುಳ್ಳಿ ತಲುಪಿದೆ. ಇದರ ದರ ಬೆಳಿಗ್ಗಿನ ಹೊತ್ತು ಕೆಜಿಗೆ 120 ರೂಪಾಯಿ ಇತ್ತು, ಆದರೆ ಮಧ್ಯಾಹ್ನದ ವೇಳೆಗೆ 130 ಆಗಿದ್ದು, 150 ರವರೆಗೂ ಏರಿಕೆಯಾಗುವ ಸಾಧ್ಯತೆ ಇದೆ ಎಂದು ವರ್ತಕರು ತಿಳಿಸಿದ್ದಾರೆ.

ಸಾಮಾನ್ಯವಾಗಿ ಮಂಗಳೂರು ಮಾರುಕಟ್ಟೆಗೆ ಹುಬ್ಬಳ್ಳಿ, ಪೂನಾ, ಇಂದೋರ್‌ನಿಂದ ಈರುಳ್ಳಿ ಪೂರೈಕೆಯಾಗುತ್ತಿದೆ. ಪೂರೈಕೆ ಕೊರತೆ, ಗುಣಮಟ್ಟ ಕುಸಿತ ಬಳಿಕ ಈಜಿಪ್ಟ್‌ನಿಂದ ಈರುಳ್ಳಿ ಮಂಗಳೂರು ಮಾರುಕಟ್ಟೆ ತಲುಪಿತ್ತು. ಈಜಿಪ್ಟ್ ಈರುಳ್ಳಿ ಗುಣಮಟ್ಟವೂ ತೃಪ್ತಿಕರ ಕಂಡುಬಂದಿರದ ಹಿನ್ನೆಲೆಯಲ್ಲಿ ಮಂಗಳೂರು ಮಾರುಕಟ್ಟೆ ಅಂತಿಮವಾಗಿ ಟರ್ಕಿ ಈರುಳ್ಳಿ ಬಂದಿದೆ.

ಟರ್ಕಿ ಇರುಳ್ಳಿ ಗಾತ್ರ ಸೇಬುವಿನ ಹಾಗೆ ಇದ್ದು 2 ರಿಂದ 3 ಈರುಳ್ಳಿ ಇಟ್ಟರೂ ಒಂದು ಕೆಜಿಯಾಗುತ್ತದೆ. ಒಂದು ಈರುಳ್ಳಿ 400 ರಿಂದ 600 ಗ್ರಾಮ ತೂಕವಿದೆ.

ಈ ನಡುವೆ ಕರಾವಳಿ ಹೊಟೇಲ್ ಗಳಲ್ಲಿ ಈರುಳ್ಳಿ ಬಳಕೆ ಕಡಿಮೆ ಮಾಡಿದ್ದಾರೆ. ಹೆಚ್ಚಿನ ಹೋಟೆಲ್‌ಗಳಲ್ಲಿ ಈರುಳ್ಳಿ ಬಜೆ, ಆನಿಯನ್ ಉತ್ತಪ್ಪದಂತಹ ತಿಂಡಿಗಳನ್ನು ತಯಾರಿಸುವುದನ್ನೇ ಬಿಟ್ಟಿದ್ದಾರೆ. ಕೆಲವು ಹೋಟೆಲ್‌ಗಳಲ್ಲಿ ತಿಂಡಿಯಲ್ಲಿ ಈರುಳ್ಳಿ ಬದಲು ಪರ್ಯಾಯವಾಗಿ ಕ್ಯಾಬೇಜ್ ಬಳಸುತ್ತಿದ್ದಾರೆ.

ಕರಾವಳಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ತಾಳ್ಮೆ ಕೆದಕುವ ಕೆಲಸ ನಡೆಯುತ್ತಿದೆ – ಯು.ಟಿ ಖಾದರ್

ಕರಾವಳಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ತಾಳ್ಮೆ ಕೆದಕುವ ಕೆಲಸ ನಡೆಯುತ್ತಿದೆ – ಯು.ಟಿ ಖಾದರ್

ಮಂಗಳೂರು ಡಿಸೆಂಬರ್ 4: ಕರಾವಳಿಯಲ್ಲಿ ಕಾಂಗ್ರೇಸ್ ಮುಖಂಡರ ಮೇಲೆ ನಿರಂತರ ಹಲ್ಲೆ ನಡೆಯುತ್ತಿದ್ದು, ದುಷ್ಕರ್ಮಿಗಳು ಕಾಂಗ್ರೆಸ್ ಕಾರ್ಯಕರ್ತರ ತಾಳ್ಮೆ ಕೆದಕುವ ಕೆಲಸ ಮಾಡುತ್ತಿದ್ದು ಹಲ್ಲೆ ಮಾಡಿದವರಿಗೆ ಮತ್ತೆ ಹಲ್ಲೆ ಮಾಡಬಹುದು ಮತ್ತೆ ಹಲ್ಲೆ ಮಾಡುವುದು ಕಷ್ಟದ ಕೆಲಸವಲ್ಲ ಎಂದು ಶಾಸಕ ಯು.ಟಿ ಖಾದರ್ ಹೇಳಿದ್ದಾರೆ.

ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೇಸ್ ಮುಖಂಡರ ಮೇಲೆ ನಿರಂತರವಾಗಿ ಹಲ್ಲೆ ನಡೆಯುತ್ತಿದ್ದು, ಕಾಂಗ್ರೇಸ್ ಕಾರ್ಯಕರ್ತರು ಈ ವಿಚಾರದಲ್ಲಿ ಗರಂ ಆಗಿದ್ದು, ಸಮಾಧಾನ ಮಾಡಿದರೂ ನನ್ನ ಮೇಲೆಯೇ ಕಾರ್ಯಕರ್ತರು ರೇಗಾಡ್ತಾ ಇದ್ದಾರೆ ಎಂದು ಹೇಳಿದರು. ಸಮಾಜದ ಶಾಂತಿ ಸುವ್ಯವಸ್ಥೆ ಗೆ ಕಾರಣದಿಂದಾಗಿ ಕಾಂಗ್ರೇಸ್ ಕಾರ್ಯಕರ್ತರು ಸುಮ್ಮನಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಸುವ್ಯವಸ್ಥೆ ಹಾಳು ಮಾಡೋದಿಲ್ಲ ಎಂದು ತಿಳಿಸಿದರು.

ಮೇರಮಜಲು ಕೊಲೆ ಯತ್ನ ಆರೋಪಿಗಳನ್ನು ಪೊಲೀಸರು ಒಂದು ಗಂಟೆಯಲ್ಲಿ ಅರೆಸ್ಟ್ ಮಾಡಿದ್ದಾರೆ. ಆದರೆ ಪೊಲೀಸರು ಆರೋಪಿಗಳನ್ನು ಕಸ್ಟಡಿಗೆ ತೆಗೆದುಕೊಂಡು, ಪ್ರಕರಣದ ಹಿಂದೆ ಯಾರು ಇದ್ದಾರೆ ಎಂದು ಬಾಯಿಬಿಡಿಸಬೇಕು. ಆದರೆ ಜಿಲ್ಲೆಯ ಪೊಲೀಸರು ಈ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿದರು.

ಕರಾವಳಿಯಲ್ಲಿ ಶಾಂತಿ ಸುವ್ಯವಸ್ಥೆ ಹಾಳಾಗಿರುವ ಬಗ್ಗೆ ಮುಖ್ಯಮಂತ್ರಿ ಗಳ ಗಮನಕ್ಕೆ ತರುತ್ತೇನೆ ಚುನಾವಣೆ ಬಳಿಕ ಗೃಹ ಸಚಿವರು ಮತ್ತು ಮುಖ್ಯಮಂತ್ರಿ ಗಳ ಜೊತೆ ಚರ್ಚೆ ಮಾಡುತ್ತೇನೆ ಎಂದು ಹೇಳಿದರು.

“ಆಟಿಡೊಂಜಿ ದಿನ” ಸಿನೆಮಾದ ವಿವಾದಾತ್ಮಕ ಸಂಭಾಷಣೆಯ ವಿರುದ್ದ ಆಕ್ರೋಶ

“ಆಟಿಡೊಂಜಿ ದಿನ” ಸಿನೆಮಾದ ವಿವಾದಾತ್ಮಕ ಸಂಭಾಷಣೆಯ ವಿರುದ್ದ ಆಕ್ರೋಶ

ಮಂಗಳೂರು ಡಿಸೆಂಬರ್ 3: ಡಿಸೆಂಬರ್ 6 ರಂದು ರಾಜ್ಯದಾದ್ಯಂತ ರಿಲೀಸ್ ಆಗಲಿರುವ ತುಳು ಚಿತ್ರವೊಂದರ ಟ್ರೈಲರ್ ಇದೀಗ ಭಾರೀ ವಿವಾದ ಸೃಷ್ಟಿಸಿದೆ. ಈ ಟ್ರೈಲರ್ ನಲ್ಲಿ ಯುವತಿಯೊಬ್ಬಳನ್ನು ತಂಡವೊಂದು ಹಿಂಬಾಲಿಸಿಕೊಂಡು ಹೋಗುವ ದೃಶ್ಯವಿದ್ದು, ಈ ದೃಶ್ಯಕ್ಕೆ ನೀಡಲಾಗಿರುವ ಹಿನ್ನಲೆ ಸಂಭಾಷಣೆಯಲ್ಲಿ ಬಯಲು ಸೀಮೆಯ ಜನರನ್ನು ಹೀಯಾಳಿಸುವ ವಿಚಾರ ಬಂದಿದೆ.

ತುಳು ಭಾಷೆಯಲ್ಲಿರುವ ಈ ಸಂಭಾಷಣೆಯಲ್ಲಿ ಹುಡುಗಿಯೋರ್ವಳನ್ನು ಅತ್ಯಾಚಾರ ನಡೆಸುವ ಯತ್ನಕ್ಕೆ ಕೈ ಹಾಕಿದಲ್ಲಿ ಸುಮ್ಮನೆ ಕುಳಿತುಕೊಳ್ಳಲು ತುಳುನಾಡಿನ ಜನ ಬಯಲು ಸೀಮೆಯ( ಗಟ್ಟದ) ಜನರಂತಲ್ಲ ಎಂದಿದೆ. ಈ ಸಂಭಾಷಣೆ ವಿರುದ್ದ ಭಾರಿ ಆಕ್ರೋಶ ವ್ಯಕ್ತವಾಗಿದ್ದು, ಬಯಲು ಸೀಮೆಯ ಜನರನ್ನು ಹೀಯಾಳಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭವಿಷ್. ಆರ್.ಕೆ ಕ್ರಿಯೇಷನ್ಸ್ ನ “ಆಟಿಡೊಂಜಿ ದಿನ” ಎನ್ನುವ ಚಿತ್ರದ ಟ್ರೈಲರ್ ಇದಾಗಿದ್ದು, ಪ್ರಥ್ವಿ ಅಂಬಾರ್ ಸೇರಿದಂತೆ ಹಲವು ತುಳು ಚಿತ್ರ ನಟರು ಈ ಚಿತ್ರದಲ್ಲಿ ನಟಿಸಿದ್ದಾರೆ. ಗಿರಿಗಿಟ್ ಎನ್ನುವ ತುಳು ಚಿತ್ರದಲ್ಲಿ ವಕೀಲರನ್ನು ಹೀಯಾಳಿಸಲಾಗಿದೆ ಎನ್ನುವ ಕಾರಣಕ್ಕೆ ಚಿತ್ರಕ್ಕೆ ತಡೆಯೊಡ್ಡಿದ್ದ ವಕೀಲರ ಸಂಘ ಬಳಿಕ ಮಾತುಕತೆಯ ಮೂಲಕ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡಿತ್ತು.

ಇದೀಗ ಡಿಸೆಂಬರ್ 6 ರಂದು ತೆರೆ ಕಾಣಲಿರುವ ಆಟಿಡೊಂಜಿ ದಿನ ಚಿತ್ರ ತೆರೆ ಕಾಣುವ ಮೊದಲೇ ಹೊಸತೊಂದು ಕಾಂಟ್ರಾವರ್ಸಿಯನ್ನು ಹೆಗಲ ಮೇಲೆ ಹಾಕಿಕೊಂಡಿದೆ.

ಅತ್ಯಾಚಾರಿಗಳ ವಿರುದ್ದ ಕಠಿಣ ಕ್ರಮಕ್ಕೆ ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ವಿದ್ಯಾರ್ಥಿನಿಯರಿಂದ ಪ್ರತಿಭಟನೆ

ಅತ್ಯಾಚಾರಿಗಳ ವಿರುದ್ದ ಕಠಿಣ ಕ್ರಮಕ್ಕೆ ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ವಿದ್ಯಾರ್ಥಿನಿಯರಿಂದ ಪ್ರತಿಭಟನೆ

ಮಂಗಳೂರು ಡಿಸೆಂಬರ್ 2: ಪ್ರಿಯಾಂಕ ರೆಡ್ಡಿ ಮೇಲಿನ ಅತ್ಯಾಚಾರವನ್ನು ಖಂಡಿಸಿ ಹಾಗೂ ಐಐಟಿ ಮದ್ರಾಸ್ ವಿದ್ಯಾರ್ಥಿನಿ ಫಾತಿಮಾ ಲತೀಫಾಳ ಮೇಲೆ ನಡೆದ ಸಾಂಸ್ಥಿಕ ಹತ್ಯೆಯ ವಿರುದ್ಧ ಕ್ಯಾಂಪಸ್ ಫ್ರಂಟ್ ನ ವಿಧ್ಯಾರ್ಥಿನಿಯರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಎರಡು ಘಟನೆ ಯನ್ನು ಖಂಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು ಅಲ್ಲದೆ ಭಿತ್ತಿಪತ್ರಗಳನ್ನು ಹಿಡಿದು ಆರೋಪಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ರಾಷ್ಟ್ರೀಯ ಸಮಿತಿ ಸದಸ್ಯೆ ಮಿಸ್ರಿಯಾ ಮಾತನಾಡಿ ಮಹಿಳೆಯರ ಮೇಲೆ ಮತ್ತು ವಿದ್ಯಾರ್ಥಿನಿಯರ ಮೇಲಿನ ದೌರ್ಜನ್ಯ ನಿರಂತರ ನಡೆಯುತ್ತಿರುವುದು ಖಂಡನೀಯ. ಸರಕಾರ ಮಹಿಳಾ ದೌರ್ಜನ್ಯ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಲ್ಲಿ ವಿಫಲವಾಗುತ್ತಿರುವುದು ವಿಪರ್ಯಾಸ.

ದೇಶದಲ್ಲಿ ಮಹಿಳೆಯರು ಸ್ವತಂತ್ರರಾಗಿ ಜೀವಿಸಲು ಹೆದರುವಂತಹ ಸಂದರ್ಭ ದೇಶದಲ್ಲಿ ನಿರ್ಮಾಣವಾಗುತ್ತಿದೆ. ಸರ್ಕಾರ ಅತ್ಯಾಚಾರದ ವಿರುದ್ಧ ಕಠಿಣ ಕಾನೂನು ರೂಪಿಸಬೇಕಾಗಿದೆ. ವಿದ್ಯಾರ್ಥಿನಿಯರು ದೇಶದಲ್ಲಿ ನಡೆಯುತ್ತಿರುವ ಇಂತಹ ದುರ್ಘಟನೆಗಳ ವಿರುದ್ಧ ಬೀದಿಗಿಳಿದು ಹೋರಾಟ ಮಾಡುವಂತಹ ಅನಿವಾರ್ಯತೆ ಬಂದೊದಗಿದೆ ಎಂದರು.

ಸರ್ವ ಕಾಲೇಜು ವಿದ್ಯಾರ್ಥಿ ಒಕ್ಕೂಟ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಮುರ್ಷಿದಾ ಮಾತನಾಡಿ ಐಐಟಿ ಮದ್ರಾಸ್ ಪ್ರಕರಣವು ಇಸ್ಲಾಮೊಫೋಬಿಯಾ ಸಾಂಸ್ಥಿಕ ಹತ್ಯೆಯ ಉದಾಹರಣೆಯಾಗಿದೆ. ಇಂತಹ ಮನೋಸ್ಥಿತಿಯು ಶಿಕ್ಷಣ ರಂಗಕ್ಕೆ ಬಹಳ ಅಪಾಯಕಾರಿಯಾಗಿದೆ. ವಿದ್ಯಾರ್ಥಿನಿ ಫಾತಿಮಾ ಲತೀಫಾಳಿಗೆ ನ್ಯಾಯ ಸಿಗಬೇಕು ಹಾಗೂ ಸಾಂಸ್ಥಿಕ ಹತ್ಯೆಯ ವಿರುದ್ಧ ವಿದ್ಯಾರ್ಥಿಗಳು ಧ್ವನಿ ಎತ್ತಬೇಕು ಎಂದು ಹೇಳಿದರು.

ವಾಯುಭಾರ ಕುಸಿತ ಡಿಸೆಂಬರ್ 6 ರವರೆಗೆ ಮೀನುಗಾರಿಕೆಗೆ ತೆರಳದಂತೆ ಸೂಚನೆ

ವಾಯುಭಾರ ಕುಸಿತ ಡಿಸೆಂಬರ್ 6 ರವರೆಗೆ ಮೀನುಗಾರಿಕೆಗೆ ತೆರಳದಂತೆ ಸೂಚನೆ

ಮಂಗಳೂರು ಡಿಸೆಂಬರ್ 2: ಅರಬೀ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಹಿನ್ನಲೆ ಕರಾವಳಿ ಜಿಲ್ಲೆಯಾದ್ಯಂತ ಮಳೆಯಾಗುತ್ತಿದ್ದು, ಇನ್ನು ಎರಡು ದಿನ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮಂಗಳೂರು ನಗರದಲ್ಲಿ ಇಂದು ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣ ಇತ್ತು. ಸಂಜೆ ವೇಳೆಗೆ ನಿರಂತರವಾಗಿ ಮಳೆ ಸುರಿದಿದ್ದು, ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಸಾರ್ವಜನಿಕರಿಗೆ ಮಳೆಯಿಂದಾಗಿ ಸಮಸ್ಯೆಯಾಯಿತು.

ಅರಬೀ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಬಲಗೊಳ್ಳುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಈ ಹಿನ್ನಲೆಯಲ್ಲಿ ಡಿಸೆಂಬರ್ 6 ರವರೆಗೆ ಮೀನುಗಾರಿಕೆಗೆ ತೆರಳದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದ್ದು, ಮೀನುಗಾರಿಕೆಗೆ ತೆರಳಿರುವ ಎಲ್ಲಾ ಬೋಟುಗಳ ತಕ್ಷಣ ದಡಕ್ಕೆ ವಾಪಾಸ್ ಬರುವಂತೆ ಸೂಚನೆ ನೀಡಿದೆ.

ಅಪಘಾತದಲ್ಲಿ ಶಿಕ್ಷಕಿ ಸಾವಿಗೆ ಕಾರಣನಾದ ಆರೋಪಿ ಲಾರಿ ಚಾಲಕನಿಗೆ 14 ದಿನ ನ್ಯಾಯಾಂಗ ಬಂಧನ

ಅಪಘಾತದಲ್ಲಿ ಶಿಕ್ಷಕಿ ಸಾವಿಗೆ ಕಾರಣನಾದ ಆರೋಪಿ ಲಾರಿ ಚಾಲಕನಿಗೆ 14 ದಿನ ನ್ಯಾಯಾಂಗ ಬಂಧನ

ಮಂಗಳೂರು ಡಿಸೆಂಬರ್ 2: ನಿನ್ನೆ ಮಂಗಳೂರು ನಗರದ ಕದ್ರಿ ಕಂಬಳದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಶಾಲಾ ಶಿಕ್ಷಕಿ ಶೈಲಾಜಾ ರಾವ್ ಸಾವಿಗೆ ಕಾರಣನಾದ ಲಾರಿ ಡ್ರೈವರ್ ಗೆ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಲಾರಿ ಚಾಲಕನ ಅತೀ ವೇಗ ಹಾಗೂ ಅಜಾಗರೂಕತೆಯ ಚಾಲನೆಯಿಂದಾಗಿ ಅಪಘಾತವಾಗಿದ್ದು, ಈ ಹಿನ್ನಲೆಯಲ್ಲಿ ಈ ಆದೇಶ ನೀಡಿದ್ದು, ಮೋಟಾರ ವಾಹನ ಕಾಯ್ದೆ ತಿದ್ದುಪಡಿ ನಂತರದ ಈ ರೀತಿಯ ಆದೇಶ ಬಂದಿರುವ ಮೊದಲ ಪ್ರಕರಣ ಇದಾಗಿದೆ.

ನಿನ್ನೆ ಕದ್ರಿ ಕಂಬಳ ರಸ್ತೆಯಲ್ಲಿ ನಡೆದ ಅಪಘಾತ ಇದಾಗಿದ್ದು, ಗೂಡ್ಸ್ ಲಾರಿ- ಆಟೋ ರಿಕ್ಷಾ ಭೀಕರ ಅಪಘಾತದಲ್ಲಿ ಶಾಲಾ ಶಿಕ್ಷಕಿ ಶೈಲಾಜಾ ರಾವ್ ಧಾರುಣವಾಗಿ ಮೃತಪಟ್ಟು, ಆಟೋ ಚಾಲಕ ಗಂಭೀರ ಗಾಯಗೊಂಡಿದ್ದರು. ಅಪಘಾತ ಸಿಸಿಟಿವಿ ವಿಡಿಯೋದಲ್ಲಿ ರೆಕಾರ್ಡ್ ಆಗಿದ್ದು, ಲಾರಿ ಚಾಲಕ ಅಜಾರಗರೂಕತೆ ಹಾಗೂ ಅತೀವೇಗ ಅಪಘಾತ ಕಾರಣವಾಗಿತ್ತು.

ಈ ಹಿನ್ನಲೆಯಲ್ಲಿ ಆರೋಪಿ ಲಾರಿ ಚಾಲಕ ಸಿದ್ದಲಿಂಗನ ಗೌಡ ವಿ. ಪೊಲೀಸ್ ಪಾಟೀಲನನ್ನು ಕದ್ರಿ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ನ್ಯಾಯಾಲಯ ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.