Home Blog Page 2

ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಚಾನೆಲ್‍ಗಳ ನಿಗಾ ಇಡಲು ಜಿಲ್ಲಾಧಿಕಾರಿ ಸೂಚನೆ

ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಚಾನೆಲ್‍ಗಳ ನಿಗಾ ಇಡಲು ಜಿಲ್ಲಾಧಿಕಾರಿ ಸೂಚನೆ

ಮಂಗಳೂರು ಡಿಸೆಂಬರ್ 8: ಕೇಬಲ್ ಟಿವಿ ಆಪರೇಟರ್ ಗಳು ಗ್ರಾಹಕರಿಂದ ಆಯಾ ಚಾನೆಲ್‍ಗಳಿಗೆ ನಿಗದಿಪಡಿಸಿದ ದರವನ್ನೇ ಪಡೆಯಬೇಕು. ನಿಗದಿತ ದರಕ್ಕಿಂತ ಹೆಚ್ಚು ಮಾಸಿಕ ಶುಲ್ಕ ವಸೂಲಿ ಮಾಡಿದರೆ ಅಂತಹವರ ವಿರುದ್ಧ ಕ್ರಮ ಜರುಗಿಸುವುದಾಗಿ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಎಚ್ಚರಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕೇಬಲ್ ಟೆಲಿವಿಷನ್ ನೆಟ್‍ವರ್ಕ್ ಕಾಯಿದೆಯ ಜಿಲ್ಲಾ ಮಟ್ಟದ ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ರಾಹಕರಿಂದ ಪಡೆಯುವ ಮಾಸಿಕ ಶುಲ್ಕಕ್ಕೆ ರಶೀದಿ ನೀಡುವುದು ಕಡ್ಡಾಯವಾಗಿದೆ. ಅಲ್ಲದೇ, ಆರಂಭದಲ್ಲಿ ಪಡೆಯುವ ಠೇವಣಿ ಮೊತ್ತಕ್ಕೂ ಸೂಕ್ತ ರಶೀದಿ ನೀಡಬೇಕು. ಕೇಬಲ್ ಆಪರೇಟರ್‍ಗಳು ಆಯಾ ಪ್ರದೇಶದ ಪ್ರಧಾನ ಅಂಚೆ ಕಚೇರಿಯಲ್ಲಿ ನೋಂದಣಿ ಮಾಡುವುದು ಕಡ್ಡಾಯವಾಗಿದೆ. ನೋಂದಣಿ ಮಾಡದವರನ್ನು ಅನಧಿಕೃತರೆಂದು ಪರಿಗಣಿಸಿ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಟಿವಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳ ಮತ್ತು ಜಾಹೀರಾತುಗಳ ಬಗ್ಗೆ ಹಾಗೂ ಕೇಬಲ್ ಆಪರೇಟರ್‍ಗಳ ಸೇವೆಯ ನ್ಯೂನತೆಗಳ ಬಗ್ಗೆ ಸಾರ್ವನಿಕರಿಂದ ದೂರುಗಳನ್ನು ಸ್ವೀಕರಿಸಲು ಜಿಲ್ಲಾ ಮಟ್ಟದಲ್ಲಿ ದೂರು ಕೋಶಗಳನ್ನು ತೆರೆಯಲಾಗಿದೆ. ಆಯಾ ತಾಲೂಕು ಮಟ್ಟದಲ್ಲೂ ಸಾರ್ವಜನಿಕರು ತಾಲೂಕು ಕಚೇರಿಗಳಲ್ಲಿ ದೂರು ಸಲ್ಲಿಸಬಹುದಾಗಿದೆ. ಎಲ್ಲಾ ಸ್ಥಳೀಯ ಚಾನೆಲ್‍ಗಳು ಹಾಗೂ ಕೇಬಲ್ ಆಪರೇಟ್‍ಗಳು ಇನ್ನು ಮುಂದೆ ತಾವು ಪ್ರಸಾರ ಮಾಡುವ ಎಲ್ಲಾ ಕಾರ್ಯಕ್ರಮಗಳ ದಾಖಲೆಗಳನ್ನು ಇಟ್ಟುಕೊಳ್ಳಬೇಕು. ಕೇಳಿದ ತಕ್ಷಣ ದಾಖಲೆ ಹಾಗೂ ದೃಶ್ಯಗಳನ್ನು ಹಾಜರುಪಡಿಸಲು ಬದ್ಧರಾಗಿರಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಯಾವುದೇ ಟೆಲಿವಿಷನ್ ಕಾರ್ಯಕ್ರಮ ಸಾರ್ವಜನಿಕ ವ್ಯವಸ್ಥೆಗೆ ಭಂಗ ಉಂಟು ಮಾಡಿದರೆ ಅಥವಾ ಯಾವುದೇ ಸಮುದಾಯಗಳ ಮಧ್ಯೆ ದ್ವೇಷ ಅಥವಾ ನೋವುಂಟು ಮಾಡಿದರೆ ಈ ಬಗ್ಗೆ ಕ್ರಮ ಕೈಗೊಳ್ಳಲು ಸಮಿತಿ ಶಿಫಾರಸ್ಸು ಮಾಡಲಿದೆ. ಖಾಸಗಿ ಟಿವಿಗಳ ಕಾರ್ಯಕ್ರಮದ ಮೇಲ್ವಿಚಾರಣೆಗಾಗಿ ಸಮಿತಿ ಕಾರ್ಯ ನಿರ್ವಹಿಸಲಿದೆ. ಸಮಾಜದ ಹಿತಕ್ಕೆ ಭಂಗ ತರುವಂತಹ ಕಾರ್ಯಕ್ರಮ ಪ್ರಸಾರ ಮಾಡುವ ಯಾವುದೇ ಕೇಬಲ್ ಅಪರೇಟರ್ /ಚಾನೆಲ್ ವಿರುದ್ಧ ನಿಯಾಮಾನುಸಾರ ಕ್ರಮ ತೆಗೆದುಕೊಳ್ಳಲಾಗುವುದು. ಕೇಬಲ್ ಟೆಲಿವಿಷನ್ ನೆಟ್‍ವರ್ಕ್ ಕಾಯಿದೆಯನ್ನು ಉಲ್ಲಂಘಿಸಿದಲ್ಲಿ ಕೇಬಲ್ ಆಪರೇಟರ್‍ಗಳ ಉಪಕರಣವನ್ನು ವಶಪಡಿಸುವ ಮತ್ತು ಮುಟ್ಟುಗೋಲು ಹಾಕುವ ಅಧಿಕಾರವನ್ನು ಈ ಕಾಯಿದೆಯ ಅಧಿಕೃತ ಅಧಿಕಾರಿಗಳು ಹೊಂದಿರುತ್ತಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ನಕಲಿ ಟಿವಿ ಚಾನೆಲ್‍ಗಳ ಮೇಲೆ ನಿಗಾ ವಹಿಸಲು ಸೂಚಿಸಿದ ಜಿಲ್ಲಾಧಿಕಾರಿಗಳು, ಇತ್ತೀಚೆಗೆ ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಚಾನೆಲ್‍ಗಳ ಹೆಸರಿನಲ್ಲಿ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವವರ ವಿರುದ್ಧವೂ ನಿಗಾ ಇಡಲು ಜಿಲ್ಲಾಧಿಕಾರಿಗಳು ತಿಳಿಸಿದರು.

ಸಮಿತಿಯ ಕಾರ್ಯದರ್ಶಿ, ಜಿಲ್ಲಾ ವಾರ್ತಾಧಿಕಾರಿ ಬಿ.ಎ. ಖಾದರ್ ಶಾ ಮಾತನಾಡಿ, ಭಾರತ ಸರಕಾರದ ವಾರ್ತಾ ಸಚಿವಾಲಯವು ಸ್ಥಳೀಯ ಮಟ್ಟದಲ್ಲಿ ಕೇಬಲ್ ಟಿವಿ ಚಾನೆಲ್‍ಗಳ ಕಾರ್ಯಕ್ರಮದ ಮೇಲೆ ನಿಗಾ ಇಡಲು, ಅನಪೇಕ್ಷಿತ ಕಾರ್ಯಕ್ರಮಗಳನ್ನು ಪ್ರಸಾರ ಮಾಡದಂತೆ ಹಾಗೂ ಕೇಬಲ್ ಆಪರೇಟರ್‍ಗಳ ಸೇವೆಯ ಬಗ್ಗೆ ಸಾರ್ವಜನಿಕರಿಂದ ದೂರು ಸ್ವೀಕರಿಸಲು ಈ ಕಾಯಿದೆ ಜಾರಿಗೆ ತಂದಿದೆ. ದ.ಕ. ಜಿಲ್ಲೆಯಲ್ಲಿ 127 ನೋಂದಾಯಿತ ಕೇಬಲ್ ಆಪರೇಟರ್‍ಗಳಿದ್ದಾರೆ. ಈ ಬಗ್ಗೆ ಇನ್ನಷ್ಟು ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಾರ್ವಜನಿಕರಿಂದ ಕೇಬಲ್ ಟಿವಿ ಸೇವೆಗಳ ಬಗ್ಗೆ ಬಂದ ದೂರುಗಳನ್ನು ಪರಿಶೀಲಿಸಲಾಯಿತು.

ಬಂಟ್ವಾಳ : ಗುಡ್ಡ ಕುಸಿದು 3 ಜನ ಕಾರ್ಮಿಕರ ಸಾವು ಓರ್ವ ಗಂಭೀರ

ಬಂಟ್ವಾಳ : ಗುಡ್ಡ ಕುಸಿದು 3 ಜನ ಕಾರ್ಮಿಕರ ಸಾವು ಓರ್ವ ಗಂಭೀರ

ಬಂಟ್ವಾಳ ಡಿಸೆಂಬರ್ 7: ಗುಡ್ಡ ಕುಸಿದು ಮೂರು ಮಂದಿ ಸಾವನ್ನಪ್ಪಿ ,ಒರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಓಡಿಯೂರಿನಲ್ಲಿ ನಡೆದಿದೆ.

ಮೃತರನ್ನು ರಮೇಶ್, ಪ್ರಕಾಶ್, ಬಾಳಪ್ಪ ಎಂದು ಗುರುತಿಸಲಾಗಿದೆ. ಕಟ್ಟಡ ನಿರ್ಮಾಣ ಕಾಮಗಾರಿ ವೇಳೆ ಗುಡ್ಡ ಅಗೆಯಲಾಗುತ್ತಿತ್ತು. ಈ ವೇಳೆ ಗುಡ್ಡದ ಮೇಲ್ಭಾಗ ಏಕಾ ಏಕಿ ಕುಸಿದು ಬಿದ್ದಿದೆ. ಬೃಹತ್ ಗಾತ್ರದಲ್ಲಿ ಗುಡ್ಡ ಕುಸಿದ ಪರಿಣಾಮ ಮಣ್ಣಿನಡಿ ನಾಲ್ಕು ಮಂದಿ ಕಾರ್ಮಿಕರು ಸಿಲುಕಿದ್ದು, ಮೂರು ಮಂದಿಯ ಮೃತದೇಹವನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ಹೊರತೆಗೆದಿದ್ದಾರೆ.

ಘಟನೆಯಲ್ಲಿ ಒರ್ವ ಕಾರ್ಮಿಕನ ರಕ್ಷಣೆ ಮಾಡಲಾಗಿದ್ದು, ಗಂಭೀರ ಗಾಯಗೊಂಡ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವಿಟ್ಲ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.ಘಟನಾ ಸ್ಥಳಕ್ಕೆ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್ ಆರ್ ರವರು, ಕಂದಾಯ ನಿರೀಕ್ಷಕರು ವಿಟ್ಲ, ಗ್ರಾಮಕರಣಿಕರು ಕರೋಪಾಡಿ ಗ್ರಾಮ, ಬಂಟ್ವಾಳ ಪೋಲಿಸ್ ವೃತ್ತ ನಿರೀಕ್ಷಕರು, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಮತ್ತು ಇತರರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪದವು ಪೂರ್ವ ವಾರ್ಡಿನಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ 84.52 ಲಕ್ಷ ಅನುದಾನ ಬಿಡುಗಡೆ – ಶಾಸಕ ಕಾಮತ್

ಪದವು ಪೂರ್ವ ವಾರ್ಡಿನಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ 84.52 ಲಕ್ಷ ಅನುದಾನ ಬಿಡುಗಡೆ – ಶಾಸಕ ಕಾಮತ್

ಮಂಗಳೂರು ಡಿಸೆಂಬರ್ 6  : ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೇಸ್ ಆಡಳಿತಾವಧಿ ಕೊನೆಗೊಂಡ ನಂತರ ಸಾರ್ವಜನಿಕರ ಬೇಡಿಕೆಯ ಮೇರೆಗೆ ವಿವಿಧ ಅನುದಾನಗಳನ್ನು ಜೋಡಿಸಿ 13 ಕಾಮಗಾರಿಗಳಿಗೆ 84.52 ಲಕ್ಷ ಅನುದಾನ ಬಿಡುಗಡೆಗೊಳಿಸಿರುವುದಾಗಿ ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ್ ಕಾಮತ್ ಅವರು ತಿಳಿಸಿದ್ದಾರೆ.

ಲೋಕೋಪಯೋಗಿ ಇಲಾಖೆಯಿಂದ 5 ಲಕ್ಷ ಅನುದಾನ ಬಿಡುಗಡೆಗೊಳಿಸಿದ್ದು, ಅದರಲ್ಲಿ ಕುಲಶೇಖರ ಚೌಕಿ ಬೈತುರ್ಲಿ ಬಳಿ ಕಾಲು ಸಂಕ ನಿರ್ಮಾಣವಾಗಲಿದೆ. ಮಳೆಹಾನಿ ಅನುದಾನದಡಿ 15 ಲಕ್ಷ ಬಿಡುಗಡೆಯಾಗಿದ್ದು, ಬೈತುರ್ಲಿ ಚೌಕಿ ಬಳಿ ಚರಂಡಿ ದುರಸ್ತಿ ಕಾಮಗಾರಿಗೆ 5 ಲಕ್ಷ, ಕುಲಶೇಖರ ಡೈರಿ ಪಕ್ಕದ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ 5 ಲಕ್ಷ, ಹಾಗೂ ಚೌಕಿ ಬಳಿ ರಸ್ತೆ ಅಭಿವೃದ್ಧಿ ಕಾಮಗಾರಿ 5 ಲಕ್ಷ ಬಿಡುಗಡೆಗೊಳಿಸಲಾಗಿದೆ.

ಮುಖ್ಯಮಂತ್ರಿ ವಿಶೇಷ ಅನುದಾನದಲ್ಲಿ 20 ಲಕ್ಷ ಬಿಡುಗಡೆಗೊಳಿಸಲಾಗಿದೆ. ಆ ಅನುದಾನದಲ್ಲಿ ಕೆ.ಎಂ.ಎಫ್ ಡೈರಿಯ ಬಳಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ 5 ಲಕ್ಷ, ಕುಡುಪು ದೇವಸ್ಥಾನದ ಬಳಿ ಚರಂಡಿ ತಡೆಗೋಡೆ ನಿರ್ಮಾಣ 7.50 ಲಕ್ಷ, ಜ್ಯೋತಿನಗರ ಕಂಚಲಗುರಿ ಬಳಿ ತಡೆಗೋಡೆ ನಿರ್ಮಾಣ 7.50 ಲಕ್ಷದ ಕಾಮಗಾರಿಗಳು ಮುಂದಿನ ದಿನಗಳಲ್ಲಿ ನಡೆಯಲಿದೆ ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.

ಮಹಾನಗರ ಪಾಲಿಕೆ ಸಾಮಾನ್ಯ ನಿಧಿ ಅನುದಾನದಲ್ಲಿ ಪದವುಪೂರ್ವ ವಾರ್ಡಿಗೆ 13.52 ಲಕ್ಷ ಅನುದಾನ ಬಿಡುಗಡೆಗೊಳಿಸಲಾಗಿದೆ. ಅದರಲ್ಲಿ ಕುಲಶೇಖರ – ಕನ್ನಗುಡ್ಡೆ ರಸ್ತೆಯ ಚರಂಡಿ ಅಭಿವೃದ್ಧಿಗೆ 7.70 ಲಕ್ಷ, ಜ್ಯೋತಿನಗರ ಜಿಲ್ಲಾ ತರಬೇತಿ ಕೇಂದ್ರ ಬಳಿ ಚರಂಡಿ ಹಾಗೂ ಕಾಲುದಾರಿಯ ಕಾಮಗಾರಿಗಳಿಗೆ 5.82 ಲಕ್ಷ ಅನುದಾನ ಒದಗಿಸಲಾಗಿದೆ.

ಮಂಗಳೂರು ಮಹಾನಗರ ಪಾಲಿಕೆಯ ಮೂಲಕ ಅನುಷ್ಠಾನಗೊಳ್ಳುವ ಕೇಂದ್ರ ಸರಕಾರದ 14ನೇ ಹಣಕಾಸು ವ್ಯವಸ್ಥೆ ಅನುದಾನದದಲ್ಲಿ 20 ಲಕ್ಷ ಬಿಡುಗಡೆಯಾಗಿದ್ದು ಮೇಲ್ತೋಟ ಬಳಿ ಚರಂಡಿ ರಚನೆಗೆ ಆ ಅನುದಾನ ವಿನಿಯೇಗಿಸಲಾಗುವುದು ಎಂದು ಶಾಸಕರು ತಿಳಿಸಿದ್ದಾರೆ.

ಪರಿಶಿಷ್ಟ ಜಾತಿ/ಪಂಗಡ ಅನುದಾನದಲ್ಲಿ ಕೋಟಿಮುರ ಪರಿಶಿಷ್ಟ ಜಾತಿ ಕಾಲೋನಿ ರಸ್ತೆ ಅಭಿವೃದ್ಧಿಗೆ 4 ಲಕ್ಷ, ಕುಡಿಯುವ ನೀರಿನ ಪರಿಹಾರ ಯೋಜನೆಯಲ್ಲಿ ಕುಡುಪು ದೇವಸ್ಥಾನದ ಬಳಿ ಇರುವ ಕೊಳವೆ ಬಾವಿಗೆ ಹೊಸ ಮೋಟರ್ ಪಂಪ್ ಸೆಟ್, ಸಬ್ ಮರ್ಸಿಬಲ್ ಕೇಬಲ್, ಹೊಸ ಕೊಳವೆ, ಪ್ಯಾನಲ್ ಬೋರ್ಡ್, ಯುಜಿ ಕೇಬಲ್ ಅಳವಡಿಸಿ ವಿದ್ಯುತೀಕರಣ ಹಾಗೂ ಲಿಂಕಿಂಗ್ ಕಾಮಗಾರಿಗಳಿಗೆ 3.5 ಲಕ್ಷ, ಕೋಟಿಮುರ ಬಳಿ ಹೊಸದಾಗಿ ಕೊರೆದ ಕೊಳವೆ ಬಾವಿಯಿಂದ ಕುಡಿಯುವ ನೀರು ಪೂರೈಸಲು ಎಚ್.ಡಿಸಪಿ.ಇ ಕೊಳವೆ ವಾಲ್ಟ್ ಅಳವಡಿಸಲು 3.5 ಲಕ್ಷ ಹಣ ಮೀಸಲಿಡಲಾಗಿದೆ ಎಂದು ಶಾಸಕ ಕಾಮತ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಏಷ್ಯನ್ ಪವರ್ ಲಿಪ್ಟಿಂಗ್ ಮಂಗಳೂರಿನ ದೀಪಾ ಕೆ.ಎಸ್.ಗೆ 4 ಬೆಳ್ಳಿ

ಏಷ್ಯನ್ ಪವರ್ ಲಿಪ್ಟಿಂಗ್ ಮಂಗಳೂರಿನ ದೀಪಾ ಕೆ.ಎಸ್.ಗೆ 4 ಬೆಳ್ಳಿ

ಮಂಗಳೂರು ಡಿಸೆಂಬರ್ 6: ಕಜಕಿಸ್ತಾನದ ಆಲ್ಮಾಟಿಯಲ್ಲಿ ನಡೆದ ಏಷ್ಯನ್ ಪವರ್ ಲಿಪ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಕದ್ರಿಯ ದೀಪಾ ಕೆ.ಎಸ್. ಮಹಿಳೆಯರ 72 ಕಿಲೋ ವಿಭಾಗದಲ್ಲಿ ನಾಲ್ಕು ಬೆಳ್ಳಿ ಪದಕ‌ ಪಡೆದಿದ್ದಾರೆ. ಬೆಂಚ್ ಪ್ರೆಸ್, ಸ್ಕಾಟ್, ಡೆಡ್ ಲಿಪ್ಟ್ ಮತ್ತು ಓವರ್ ಆಲ್ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿದ ದೀಪಾ ಬೆಳ್ಳಿ ಪದಕ ಗೆದ್ದುಕೊಂಡರು.

ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಪವರ್ ಲಿಪ್ಟಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕದೊಂದಿಗೆ ಬಲಿಷ್ಟ ಮಹಿಳೆ ಪ್ರಶಸ್ತಿ ಗೆ ಪಾತ್ರರಾಗಿದ್ದರು. ಕಾಮನ್ ವೆಲ್ತ್ ಪವರ್ ಲಿಪ್ಟಿಂಗ್ ಜೂನಿಯರ್ ವಿಭಾಗದಲ್ಲಿ ಎರಡು ಚಿನ್ನದ ಪದಕ ಪಡೆದ ಋತ್ವಿಕ್ ಅಲೆವೂರಾಯ ಅವರ ತಾಯಿ ಆಗಿರುವ ದೀಪಾ ಕೆ.ಎಸ್., ಕುಂಜತ್ತೋಡಿ ವಾಸುದೇವ ಭಟ್ ಕದ್ರಿ ಅವರ ಪತ್ನಿ.

ದೇಶ ಕಂಡ ಅಪರೂಪದ ಧೀಮಂತ ನಾಯಕ…ಕಾಂಗ್ರೇಸ್ ನ ಬೆಂಕಿ ಚೆಂಡು .. ಜನಾರ್ಧನ ಪೂಜಾರಿ ಅವರ Exclusive Interview

ದೇಶ ಕಂಡ ಅಪರೂಪದ ಧೀಮಂತ ನಾಯಕ..ನೇರ ನುಡಿಯ ರಾಜಕೀಯ ನೇತಾರ.. ಜನಾರ್ಧನ ಪೂಜಾರಿ ಅವರ Exclusive ಸಂದರ್ಶನ

ಮೂಡುಬಿದಿರೆ ಬಳಿ ಬಸ್ ಪಲ್ಟಿ 18 ಮಂದಿಗೆ ಗಂಭೀರ ಗಾಯ

ಮೂಡುಬಿದಿರೆ ಬಳಿ ಬಸ್ ಪಲ್ಟಿ 18 ಮಂದಿಗೆ ಗಂಭೀರ ಗಾಯ

ಮೂಡುಬಿದಿರೆ ಡಿಸೆಂಬರ್ 5: ಅತೀ ವೇಗದಿಂದ ಬರುತ್ತಿದ್ದ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಉರುಳಿಬಿದ್ದ 18 ಮಂದಿ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಕೊಲ್ಲೂರಿನಿಂದ ಮಂಗಳೂರು ಕಡೆಗೆ ಅತೀ ವೇಗದಿಂದ ಬರುತ್ತಿದ್ದ ಬಸ್ಸು ಆಲಂಗಾರು ಬಳಿ ಚಾಲಕನ ನಿಯಂತ್ರಣ ರಸ್ತೆ ಬದಿಗೆ ಪಲ್ಟಿಯಾಗಿದೆ. ಈ ಘಟನೆಯಲ್ಲಿ ಬಸ್ಸಿನಲ್ಲಿದ್ದ 18 ಮಂದಿ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದು, ಮೂಡುಬಿದಿರೆ ಗಾಂಧಿನಗರದ ಸುಮಾ ಎಂಬವರಿಗೆ ತೀವ್ರ ತರಹದ ಗಾಯಗಳಾಗಿದ್ದು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೆಲ್ಪಿ ಕ್ರೆಜ್ ಹಿನ್ನಲೆ ಶಬರಿಮಲೆಯಲ್ಲಿ ಮೊಬೈಲ್ ನಿಷೇಧ

ಸೆಲ್ಪಿ ಕ್ರೆಜ್ ಹಿನ್ನಲೆ ಶಬರಿಮಲೆಯಲ್ಲಿ ಮೊಬೈಲ್ ನಿಷೇಧ

ಕೇರಳ ಡಿಸೆಂಬರ್ 5: ಅಯ್ಯಪ್ಪ ಸ್ವಾಮಿಯ ಪವಿತ್ರ ಯಾತ್ರಾ ಸ್ಥಳ ಶಬರಿಮಲೆ ದೇವಸ್ಥಾನದ ಆವರಣದಲ್ಲಿ ಮೊಬೈಲ್ ನಿಷೇಧ ಹೇರಿ ತಿರುವಾಂಕೂರು ದೇವಸ್ವಂ ಮಂಡಳಿ ಆದೇಶಿಸಿದೆ.

ಈಗಾಗಲೇ ಶಬರಿಮಲೆ ದೇವಸ್ಥಾನದ ಆವರಣದಲ್ಲಿ ಮೊಬೈಲ್ ಬಳಕೆ ಮೇಲೆ ನಿಷೇಧ ಇತ್ತು. ಆದರೆ ಪರಿಣಾಮಕಾರಿ ಜಾರಿ ಮಾಡಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ದೇಗುಲದ ಆವರಣದಲ್ಲಿ ಮೊಬೈಲ್ ಬಳಕೆ ಹೆಚ್ಚಾಗಿದ್ದು, ಎಷ್ಟೇ ನಿಯಂತ್ರಿಸಿದರೂ ಭಕ್ತರು ಅಯ್ಯಪ್ಪ ಸ್ವಾಮಿ ವಿಗ್ರಹದ ಮುಂದೆ ನಿಂತು ಫೋಟೋ ಮತ್ತು ಸೆಲ್ಫಿಕ್ಲಿಕ್ಕಿಸಿಕೊಳ್ಳುತ್ತಿರುತ್ತಾರೆ.

ಇದರಿಂದ ಇತರೆ ಭಕ್ತರಿಗೆ ತೊಂದರೆಯಾಗುತ್ತಿದ್ದು, ಈ ಹಿನ್ನಲೆಯಲ್ಲಿ ಮೊಬೈಲ್ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಆದೇಶಿಸಲಾಗಿದೆ.

ಪ್ಲಾಟ್ ನಿಂದ ಚಿನ್ನಾಭರಣ ಕಳವು ಪ್ರಕರಣ 7 ಮಂದಿ ಅಂತರ್ ರಾಜ್ಯ ಆರೋಪಿಗಳ ಬಂಧನ

ಪ್ಲಾಟ್ ನಿಂದ ಚಿನ್ನಾಭರಣ ಕಳವು ಪ್ರಕರಣ 7 ಮಂದಿ ಅಂತರ್ ರಾಜ್ಯ ಆರೋಪಿಗಳ ಬಂಧನ

ಮಂಗಳೂರು ಡಿಸೆಂಬರ್ 5: ಮಂಗಳೂರಿನಲ್ಲಿ ಆಪಾರ್ಟ್ ಮೆಂಟ್ ಒಂದರಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ 7 ಜನ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ರಾಕೇಶ್ ಬೋನಿಪಾಸ್ ಡಿ” ಸೋಜಾ, ಅಶೋಕ್ ಬಂಡ್ರಗಾರ್, ಗಣೇಶ್ ಬಾಪು ಪರಾಬ್, ಶಾಹೀರ್ ಮೊಹಮ್ಮದ್, ಜನಾರ್ಧನ ಆಚಾರ್ಯ, ಚಂದನ್ ಆಚಾರ್ಯ, ಪುರುಷೊತ್ತಮ್ ಆಚಾರ್ಯ ಎಂದು ಗುರುತಿಸಲಾಗಿದೆ.

ಮಂಗಳೂರಿನ ಬಲ್ಮಠ ಸಮೀಪದ ಅಪಾರ್ಟ್ ಮೆಂಟ್ ಒಂದರಲ್ಲಿ ಸೆಪ್ಟೆಂಬರ್ 9 ರಂದು ಈ ಕಳ್ಳತನ ನಡೆದಿತ್ತು. ಕಳ್ಳರು ಅಪಾರ್ಟ್ ಮೆಂಟ್ ನ ಡಕ್ಟ್ ವೆಂಟಿಲೇಟರ್ ಮೂಲಕ 6 ನೇ ಮಹಡಿಯಲ್ಲಿರುವ ಪ್ಲಾಟ್ ಗೆ ನುಗ್ಗಿ ಅಲ್ಲಿಂದ ಸುಮಾರು 65ಸಾವಿರ ರೂಪಾಯಿ ನಗದು ಹಾಗೂ 35 ಲಕ್ಷ ರೂಪಾಯಿ ಬೆಲೆ ಬಾಳುವ ಚಿನ್ನದ ಕಿವಿಯೋಲೆ, ಚಿನ್ನದ ಬಳೆಗಳು, ಚಿನ್ನದ ಬ್ರಾಸ್ ಲೈಟ್ , ಚಿನ್ನದ ನೆಕ್ಲೇಸ್, ಡೈಮಂಡ್ ನೆಕ್ಲೇಸ್, ಡೈಮಂಡ್ ರಿಂಗ್, ಚಿನ್ನದ ವಾಚ್, ಚಿನ್ನದ ನಾಣ್ಯಗಳನ್ನು ಕಳವು ಮಾಡಿದ್ದರು.

ಈ ಕಳ್ಳತನ ಕುರಿತಂತೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳಿಂದ 34 ಲಕ್ಷ ರೂ ಗಳು ಮೊತ್ತದ ಬಂಗಾರದ ಮತ್ತು ವಜ್ರದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ ಕೃತ್ಯ ಕ್ಕೆ ಬಳಸಿದ ಚಿನ್ನ ಕರಗಿಸುವ ಯಂತ್ರ ಕೃತ್ಯಕ್ಕೆ ಉಪಯೋಗಿಸಿದ ಒಂದು ಆಲ್ಟೊ ಕಾರ್, 1 ಹುಂಡೈ ಕಾರ್, ಬುಲೆಟ್ ಮೋಟಾರ್ ಸೈಕಲ್ ಸ್ವತ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ಏಪ್ರಿಲ್ 26 ರಂದು ಸಾಮೂಹಿಕ ವಿವಾಹ- ಸಚಿವ ಕೋಟಾ ಶ್ರೀನಿವಾಸ ಪೂಜಾರಿ

ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ಏಪ್ರಿಲ್ 26 ರಂದು ಸಾಮೂಹಿಕ ವಿವಾಹ- ಸಚಿವ ಕೋಟಾ ಶ್ರೀನಿವಾಸ ಪೂಜಾರಿ

ಉಡುಪಿ ಡಿಸೆಂಬರ್ 05: ಧಾರ್ಮಿಕ ಧತ್ತಿ ಇಲಾಖೆ ವ್ಯಾಪ್ತಿಗೊಳಪಡುವ ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ಏಪ್ರಿಲ್ 26 ರಂದು ಸಾಮೂಹಿಕ ವಿವಾಹಗಳನ್ನು ನಡೆಸಲಾಗುವುದು ಎಂದು ರಾಜ್ಯದ ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ, ಉಡುಪಿ ಜಿಲ್ಲೆಯ ಎ ವರ್ಗದ ದೇವಾಲಯಗಳಲ್ಲಿ ಸಾಮೂಹಿಕ ವಿವಾಹ ನಡೆಸುವ ಕುರಿತಂತೆ ವಿವಿಧ ದೇವಾಲಯಗಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಹಾಗೂ ಕಾರ್ಯನಿರ್ವಹಣಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಧಾರ್ಮಿಕ ಧತ್ತಿ ಇಲಾಖೆ ವ್ಯಾಪ್ತಿಗೆ ಒಳಪಡುವ, ಉತ್ತಮ ಆದಾಯವಿರುವ ರಾಜ್ಯದ 110 ದೇವಾಲಯಗಳಲ್ಲಿ 2020 ರ ಏಪ್ರಿಲ್ 26 ರಂದು ಸಾಮೂಹಿಕ ವಿವಾಹ ನಡೆಸಲು ದಿನಾಂಕ ನಿಗಧಿಪಡಿಸಿದ್ದು, ವಿವಾಹವಾಗುವ ದಂಪತಿಗಳಿಗೆ ಎಪಿಎಲ್, ಬಿಪಿಎಲ್ ಎಂಬ ಮಾನದಂಡ ಇಲ್ಲ, ವಿವಾಹವಾಗುವ ವರನಿಗೆ ಪೋತ್ಸಾಹಧನವಾಗಿ (ಹೂವಿನ ಹಾರ, ಪಂಚೆ, ಶರ್ಟ್ ಮತ್ತು ಶಲ್ಯಕ್ಕಾಗಿ) ರೂ.5000.00 ಮತ್ತು ವಧುವಿಗೆ (ಹೂವಿನ ಹಾರ, ಧಾರೆ ಸೀರೆ, ರವಿಕೆ ಕಣಕ್ಕಾಗಿ) 10000.00 ಹಾಗೂ ವಧುವಿಗೆ ಚಿನ್ನದ ತಾಳಿ, ಚಿನ್ನದ ಗುಂಡು (ಅಂದಾಜು 8 ಗ್ರಾಂ ತೂಕ) ಗಾಗಿ 40000.00 ಗಳನ್ನು ನೀಡಲಾಗುವುದು, ಈ ಮೊತ್ತವನ್ನು ವಿವಾಹವಾದ ದಿನವೇ ಸಂಬಂದಪಟ್ಟ ವಧು ವರರ ಖಾತೆಗೆ ಆರ್.ಟಿ.ಜಿ.ಎಸ್ ಮೂಲಕ ಜಮೆ ಮಾಡಲಾಗುವುದು ಹಾಗೂ ವಿವಾಹಕ್ಕೆ ಆಗಮಿಸುವ ವಧು ವರರ ಬಂಧುಗಳಿಗೆ/ಸಾರ್ವಜನಿಕರಿಗೆ ಊಟೋಪಚಾರ ವ್ಯವಸ್ಥೆಯನ್ನು ಹಾಗೂ ಇತರೆ ವ್ಯವಸ್ಥೆಗೆ ತಗಲುವ ವೆಚ್ಚವನ್ನು ದೇವಾಲಯಗಳ ನಿಧಿಯಿಂದ ಭರಿಸಲಾಗುವುದು ಎಂದು ಹೇಳಿದರು.

ಸಾಮೂಹಿಕ ವಿವಾಹ ನಡೆಯುವ ಕುರಿತಂತೆ ಸಂಬಂದಪಟ್ಟ ಎಲ್ಲಾ ದೇವಾಲಯಗಳ ಆವರಣದಲ್ಲಿ ಮಾಹಿತಿಯನ್ನು ಪ್ರಚುರಪಡಿಸುವಂತೆ ತಿಳಿಸಿದ ಮುಜರಾಯಿ ಸಚಿವರು, 27-3-2020 ವಧು ವರರ ವಿವರಗಳನ್ನು ನೊಂದಾಯಿಸಿಕೊಳ್ಳಲು ಕಡೆಯ ದಿನಾಂಕವಾಗಿದ್ದು, 1-4-2020 ರಂದು ನೊಂದಾಯಿಸಿಕೊಂಡ ವಧು ವರರ ವಿವರಗಳನ್ನು ದೇವಾಲಯಗಳಲ್ಲಿ ಪ್ರಕಟಪಡಿಸಲಾಗುವುದು, 6-4-2020 ವಧು ವರರ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು, 11-4-2020 ರಂದು ಅಂತಿಮ ವಧು ವರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ತಿಳಿಸಿದರು.

ಸಾಮೂಹಿಕ ವಿವಾಹದಲ್ಲಿ ಮೊದಲ ಬಾರಿಗೆ ವಿವಾಹವಾಗುವವರಿಗೆ ಮಾತ್ರ ಅವಕಾಶವಿದ್ದು, ಎರಡನೇ ಮದುವೆ ಆಗುವವರಿಗೆ ಅವಕಾಶವಿಲ್ಲ, ವಧು ವರರ ನಿಯಮಾನುಸಾರ ಪ್ರಾಪ್ತ ವಯಸ್ಕರಾಗಿದ್ದು, ಈ ಬಗ್ಗೆ ಸರ್ಕಾರದ ಅಧಿಕೃತ ದಾಖಲೆಗಳನ್ನು ನೀಡಬೇಕು. ವಿವಾಹ ನಡೆಯುವ ಸ್ಥಳದಲ್ಲೇ ವಿವಾಹ ನೊಂದಣಾಧಿಕಾರಿಗಳಿಂದ ವಿವಾಹ ನೊಂದಣಿ ನಡೆಯಲಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಿಂದ ಬಾಂಡ್ ವಿತರಣೆ ಸಹ ನೀಡಲಾಗುವುದು , ರಾಜ್ಯದ ಪ್ರಮುಖ ಖಾಸಗಿ ಸಂಸ್ಥೆಗಳು ತಮ್ಮ ನಿಧಿಯಿಂದ ವಧು ವರರಿಗೆ ಉಚಿತ ಉಡುಗೊರೆ ನೀಡುವುದಾದರೆ ಅದಕ್ಕೆ ಅವಕಾಶ ನೀಡಲಾಗುವುದು ಎಂದು ಸಚಿವರು ತಿಳಿಸಿದರು.

ಏಪ್ರಿಲ್ 26 ರಂದು ನಡೆಯುವ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ, ಪೇಜಾವರ ಶ್ರೀಗಳು, ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ, ರವಿಶಂಕರ್ ಗುರೂಜಿ, ಇನ್ಫೋಸಿಸ್‍ನ ಸುಧಾಮೂರ್ತಿ, ಪ್ರಮುಖ ವೀರಶೈವ ಮಠಾಧೀಶರು, ಒಕ್ಕಲಿಗ ಗುರುಗಳು ಸೇರಿದಂತೆ ಪ್ರಮುಖ ಧಾರ್ಮಿಕ ಗುರುಗಳು ಈ ವಿವಾಹ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ ಎಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು.
ಸಾಮಾಹಿಕ ವಿವಾಹ ಕಾರ್ಯಕ್ರಮದ ಬಗ್ಗೆ ಶೀಘ್ರದಲ್ಲಿಯೇ ಟೋಲ್ ಫ್ರೀ ಸಂಖ್ಯೆಯನ್ನು ನೀಡಲಿದ್ದು, ಬೆಳಗ್ಗೆ 10 ರಿಂದ 6 ಗಂಟೆಯವರೆಗೆ ಸಾರ್ವಜನಿಕರು ಕರೆ ಮಾಡಿ ವಿವಾಹಕ್ಕೆ ನಿಗಧಿಪಡಿಸಿರುವ ಅರ್ಹತೆಗಳು ಮತ್ತಿತರ ಅಗತ್ಯ ಮಾಹಿತಿಯನ್ನು ಪಡೆಯಬಹುದಾಗಿದೆ ಎಂದು ಸಚಿವರು ಹೇಳಿದರು.

ಸಾಮಾಹಿಕ ವಿವಾಹ ಕಾರ್ಯಕ್ರಮದ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡಿ, ಅಲ್ಲಿನ ದೇವಾಲಯಗಳಿಗೆ ಸಂಬಂದಪಟ್ಟ ಅಧಿಕಾರಿಗಳು ಮತ್ತು ಸ್ಥಳಿಯ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸುವುದಾಗಿ ಸಚಿವರು ತಿಳಿಸಿದರು.

ಸಾಮೂಹಿಕ ವಿವಾಹ ಕಾರ್ಯಕ್ರಮದ ಕುರಿತಂತೆ ರಾಜ್ಯಾದಂತ ಸರ್ಕಾರದ ವಿವಿಧ ಜಾಹೀರಾತು ಫಲಕಗಳಲ್ಲಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮೂಲಕ ಜಾಹೀರಾತು ಸಿದ್ದಪಡಿಸಿ, ಅಳವಡಿಸುವ ಮೂಲಕ, ಸಾರ್ವಜನಿಕರಿಗೆ ಹೆಚ್ಚಿನ ಅರಿವು ಮೂಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ಅನಿವಾರ್ಯ ಕಾರಣಗಳಿಂದ ಏಪ್ರಿಲ್ 26 ರಂದು ಸಾಮೂಹಿಕ ವಿವಾಹ ನಡೆಸಲು ಸಾಧ್ಯವಾಗದ ದೇವಾಲಯಗಳಲ್ಲಿ ಮೇ 24 ರಂದು ವಿವಾಹಗಳನ್ನು ನಡೆಸಲಾಗುವುದು ಎಂದು ತಿಳಿಸಿದರು. ಸಾಮೂಹಿಕ ವಿವಾಹ ಏರ್ಪಡಿಸುವ ಕುರಿತಂತೆ ಸಂಬಂದಪಟ್ಟ ದೇವಾಲಯಗಳು ತಮ್ಮ ವ್ಯಾಪ್ತಿಯ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು ಮತ್ತು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಅವರ ಸಲಹೆ, ಸೂಚನೆ, ಅಭಿಪ್ರಾಯಗಳನ್ನು ಪಡೆದು ಯಶಸ್ವಿಯಾಗಿ ಕಾರ್ಯಕ್ರಮ ಆಯೋಜಿಸುವಂತೆ ಸಚಿವ ಶ್ರೀನಿವಾಸ ಪೂಜಾರಿ ತಿಳಿಸಿದರು.

ನಾಳೆ ಬಾಬ್ರಿ ಮಸೀದಿ ಧ್ವಂಸ ದಿನ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ನಿರ್ಬಂಧಕಾಜ್ಞೆ ಜಾರಿ

ನಾಳೆ ಬಾಬ್ರಿ ಮಸೀದಿ ಧ್ವಂಸ ದಿನ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ನಿರ್ಬಂಧಕಾಜ್ಞೆ ಜಾರಿ

ಮಂಗಳೂರು ಡಿಸೆಂಬರ್ 5: ಬಾಬರಿ ಮಸೀದಿ ಕೆಡವಿದ ದಿನ ಹಿನ್ನಲೆ ನಾಳೆ ಡಿಸೆಂಬರ್ 6 ರಂದು ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ನಿರ್ಬಂಧಕಾಜ್ಞೆ ವಿಧಿಸಿ ಮಂಗಳೂರು ಪೊಲೀಸ್ ಆಯುಕ್ತ ಹರ್ಷ ಆದೇಶಿಸಿದ್ದಾರೆ.

ನಾಳೆ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಕರ್ನಾಟಕ ಪೊಲಿಸ್ ಕಾಯ್ದೆ 35 ರ ಅನ್ವಯ ನಿರ್ಬಂಧಕಾಜ್ಞೆ ವಿಧಿಸಲಾಗಿದೆ. ಈ ಸಂದರ್ಭದಲ್ಲಿ ವಿಜಯೋತ್ಸವ, ಕರಾಳ ದಿನ ಆಚರಿಸದಂತೆ ನಿರ್ಬಂಧ ಹೇರಲಾಗಿದೆ. ಅಲ್ಲದೆ ಮೆರವಣಿಗೆ, ಪ್ರತಿಭಟನೆ, ಜಾಥಾ, ಮುತ್ತಿಗೆಯನ್ನು ನಿರ್ಬಂಧಿಸಿ ಆದೇಶಿಸಿದ್ದಾರೆ. ಶಾಂತಿ ಸುವ್ಯವಸ್ಥೆಗೆ ದಕ್ಕೆಯಾಗದಂತೆ ಮುನ್ನೆಚ್ಚರಿಕೆ ವಹಿಸಲು ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ.