ತಿರುವನಂತಪುರಂ ಡಿಸೆಂಬರ್ 26: ಕೇರಳದಲ್ಲಿ ಬಿಜೆಪಿ ಯುಗ ಪ್ರಾರಂಭವಾಗಿದೆ. ಇದೇ ಮೊದಲ ಬಾರಿ ಸ್ಥಳೀಯ ಚುನಾವಣೆಗಳಲ್ಲಿ ಉತ್ತಮ ಪ್ರದರ್ಶನವನ್ನು ಬಿಜೆಪಿ ನೀಡಿದೆ. ಇದೀಗ ಮೊದಲ ಬಾರಿಗೆ ತಿರುವನಂತಪುರಂ ನಗರ ಮೇಯರ್ ಆಗಿ ಆಯ್ಕೆಯಾಗುವ ಮೂಲಕ ವಿವಿ ರಾಜೇಶ್ ಇತಿಹಾಸ ನಿರ್ಮಿಸಿದ್ದಾರೆ.

49 ವರ್ಷದ ರಾಜೇಶ್ ತಿರುವನಂತಪುರ ಸಿಟಿ ಕಾರ್ಪೋರೇಷನ್ ನಲ್ಲಿ ನಾಲ್ಕು ದಶಕಗಳ ಎಡ ಪ್ರಜಾಸತ್ತಾತ್ಮಕ ರಂಗದ (ಎಲ್ಡಿಎಫ್) ಆಳ್ವಿಕೆಗೆ ಅಂತ್ಯ ಹಾಡಿದ್ದಾರೆ. ಇತ್ತೀಚಿನ ಚುನಾವಣೆಯಲ್ಲಿ ಒಟ್ಟು 101 ಸ್ಥಾನಗಳಲ್ಲಿ ಐವತ್ತು ಸ್ಥಾನಗಳನ್ನು ಪಡೆಯುವ ಮೂಲಕ ಬಿಜೆಪಿ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಇಬ್ಬರು ಸ್ವತಂತ್ರ ಅಭ್ಯರ್ಥಿಗಳಲ್ಲಿ ಒಬ್ಬರಾದ ಕಣ್ಣಮೂಲ ವಾರ್ಡ್ನಿಂದ ಗೆದ್ದ ಪಟ್ಟೂರ್ ರಾಧಾಕೃಷ್ಣನ್ ಅವರ ಬೆಂಬಲವನ್ನು ಪಡೆಯುವಲ್ಲಿ ಬಿಜೆಪಿ ಯಶಸ್ವಿಯಾಯಿತು , ಸರಳ ಬಹುಮತ ಪಡೆಯಿತು.
ಎಲ್ಡಿಎಫ್ ಮತ್ತು ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ ಕ್ರಮವಾಗಿ 29 ಮತ್ತು 19 ಸ್ಥಾನಗಳನ್ನು ಗೆದ್ದವು. ಹಿಂದಿನ ಕೌನ್ಸಿಲ್ನಲ್ಲಿ ಕಾಂಗ್ರೆಸ್ನಿಂದ ಆಯ್ಕೆಯಾಗಿದ್ದ ವಿಳಿಂಜಮ್ ವಾರ್ಡ್ನ ಸ್ವತಂತ್ರ ಅಭ್ಯರ್ಥಿಯ ಮರಣದ ಕಾರಣ ಚುನಾವಣೆಯನ್ನು ಮುಂದೂಡಲಾಗಿತ್ತು. ಎರಡನೇ ಅವಧಿಗೆ ನಿಗಮಕ್ಕೆ ಆಯ್ಕೆಯಾದ ರಾಜೇಶ್, ಕೊಡಂಗನೂರು ವಾರ್ಡ್ ಪ್ರತಿನಿಧಿಸುತ್ತಾರೆ.
ಪ್ರಮಾಣವಚನ ಸಮಾರಂಭದಲ್ಲಿ ಪಕ್ಷದ ವಿವಿಧ ನಾಯಕರು ,ಬಿಜೆಪಿಯ ರಾಜ್ಯ ಅಧ್ಯಕ್ಷ ರಾಜೀವ್ ಚಂದ್ರಶೇಖರ್, ಕೇಂದ್ರ ಸಚಿವ ಸುರೇಶ್ ಗೋಪಿ, ಮಾಜಿ ಅಧ್ಯಕ್ಷ ಕೆ. ಸುರೇಂದ್ರನ್, ಸಿಕೆ ಪದ್ಮನಾಭನ್ ಮತ್ತು ಸಿಪಿಎಂನ ಮಾಜಿ ಸಚಿವ ಮತ್ತು ಹಾಲಿ ಶಾಸಕ ಕಡಕಂಪಳ್ಳಿ ಸುರೇಂದ್ರನ್ ಭಾಗವಹಿಸಿದ್ದರು.