Connect with us

    BANTWAL

    ಬಹುಗ್ರಾಮ ಕುಡಿಯುವ ನೀರು ಘಟಕ ಪರಿಶೀಲನೆ ನೆಪದಲ್ಲಿ ಕಾಂಗ್ರೇಸ್ ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ

    ಬಂಟ್ವಾಳ ಜನವರಿ 30: ಬಹುಗ್ರಾಮ ಕುಡಿಯುವ ನೀರು ಯೋಜನೆಯ ಪರಿಶೀಲನೆ ನೆಪದಲ್ಲಿ ಬಿಜೆಪಿ ಹಾಗೂ ಕಾಂಗ್ರೇಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದ ಘಟನೆ ಬಂಟ್ವಾಳ ತಾಲೂಕಿನ ಸರಪಾಡಿಯಲ್ಲಿ ಇಂದು ನಡೆದಿದೆ.


    ನಾಳೆ ಉದ್ಘಾಟನೆಗೆ ಸಿದ್ದವಾಗಿರುವ ಬಹುಗ್ರಾಮ ಕುಡಿಯುವ ನೀರಿನ ಘಟಕಕ್ಕೆ ಮಾಜಿ ಸಚಿವ ರಮಾನಾಥ ರೈ ಭೇಟಿ ನೀಡುವ ವೇಳೆ ಬಿಜೆಪಿ ಕಾರ್ಯಕರ್ತರು ಆಗಮಿಸಿ ತಡೆಯೊಡ್ಡಿದ್ದಾರೆ. ಬಂಟ್ವಾಳ ತಾಲೂಕಿನ ಸರಪಾಡಿಯಲ್ಲಿರುವ ಬಹುಗ್ರಾಮ ಕುಡಿಯುವ ನೀರು ಯೋಜನಾ ಘಟಕಕ್ಕೆ ರಮಾನಾಥ ರೈ ತಾವು ಸಚಿವರಾಗಿದ್ದ ಅವಧಿಯಲ್ಲಿ ₹33ಕೋಟಿ 15 ಲಕ್ಷ ರೂಪಾಯಿ ಅನುದಾನ ಒದಗಿಸಿದ್ದರು.

    ಈ ಯೋಜನೆ 2017-18ರಲ್ಲಿ ಮಂಜೂರಾಗಿ ಜೂನ್‌ನಲ್ಲಿ ಕಾಮಗಾರಿ ಆರಂಭವಾಗಿತ್ತು. ಕಾಮಗಾರಿ ಪೂರ್ಣಗೊಂಡ ಹಿನ್ನೆಲೆ ಪರಿಶೀಲನೆಗಾಗಿ ತಾಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಆಲಿ ತಂಡದ ಭೇಟಿಗೆ ಸಮಯ ನಿಗದಿಯಾಗಿತ್ತು. ಈ ಸಂದರ್ಭ ಮಾಜಿ ಸಚಿವ ಬಿ.ರಮಾನಾಥ ರೈ ಆಗಮಿಸುವ ಸುಳಿವು ಪಡೆದ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ತಂಡ ಆಗಮಿಸುವ ವೇಳೆ ಗೇಟ್ ಒಳಗೆ ಪ್ರವೇಶಿಸಬಾರದು ಎಂದು ಒತ್ತಾಯಿಸಿ ಘೋಷಣೆ ಕೂಗಿದರು.


    ಇದೇ ವೇಳೆ ಘಟಕದ ಒಳಗೆ ಅಧಿಕಾರಿಗಳನ್ನು ಹೊರತುಪಡಿಸಿದರೆ, ಯಾರಿಗೂ ಪ್ರವೇಶವಿಲ್ಲ ಎಂದು ಸ್ಥಳದಲ್ಲಿದ್ದ ಪೊಲೀಸ್ ಎಸ್‌ಐಗಳಾದ ಅವಿನಾಶ್ ಮತ್ತು ಪ್ರಸನ್ನ ಕಟ್ಟುನಿಟ್ಟಿನ ಬಂದೋಬಸ್ತ್ ವಿಧಿಸಿ ಯಾರನ್ನೂ ಪ್ರವೇಶಿಸದಂತೆ ತಡೆದರು. ಈ ಸಂದರ್ಭ ಧಿಕ್ಕಾರ, ಜೈಕಾರ ಸಹಿತ ತಮ್ಮ ಪಕ್ಷದ ನಾಯಕರ ಪರವಾದ ಘೋಷಣೆಗಳನ್ನು ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಕೂಗಿದರು.

    Share Information
    Advertisement
    Click to comment

    You must be logged in to post a comment Login

    Leave a Reply