ಕೋಲ್ಕತ್ತಾ, ಏಪ್ರಿಲ್ 29: ಪಶ್ಚಿಮ ಬಂಗಾಳದ ಡೈಮಂಡ್ ಹಾರ್ಬರ್ನ ಫಾಲ್ಟಾದಲ್ಲಿ 2ನೇ ಹಂತದ ಚುನಾವಣೆ ವೇಳೆ ತೃಣಮೂಲ ಕಾಂಗ್ರೆಸ್ ಪಕ್ಷವು ಮತ ಯಂತ್ರಗಳಲ್ಲಿನ ಬಿಜೆಪಿ ಗುರುತಿನ ಬಟನ್ಗೆ ಟೇಪ್ ಅಂಟಿಸಿದೆ ಬಿಜೆಪಿ ಆರೋಪಿಸಿದೆ. ಈ ಆರೋಪ ಕೇಳಿಬಂದ ಬೆನ್ನಲ್ಲೇ ಡೈಮಂಡ್ ಹಾರ್ಬರ್ನ ಫಾಲ್ಟಾದ ಬೂತ್ಗಳಲ್ಲಿ ಮತದಾನವನ್ನು ಸ್ಥಗಿತಗೊಳಿಸಲಾಗಿದೆ.
ಬಿಜೆಪಿಯ ಆರೋಪವನ್ನು ನಿರಾಕರಿಸಿದ ತೃಣಮೂಲ ಪಕ್ಷವು, ಬಂಗಾಳದಲ್ಲಿ ಸೋಲಿನ ಭೀತಿಯಿಂದ ಬಿಜೆಪಿ ಸುಳ್ಳು ಹೇಳುತ್ತಿದೆ ಎಂದು ಟೀಕಿಸಿದೆ. ಇನ್ನೂ ಈ ಆರೋಪಗಳನ್ನು ಪರಿಶೀಲಿಸಲಾಗುತ್ತದೆ. ಆರೋಪ ನಿಜವಾಗಿದ್ದರೆ ಮತಗಟ್ಟೆಗಳಲ್ಲಿ ಮರು ಮತದಾನಕ್ಕೆ ಅವಕಾಶ ನೀಡಲಾಗುವುದು ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.
ಬಿಜೆಪಿಯ ಮಾಧ್ಯಮ ಉಸ್ತುವಾರಿ ಅಮಿತ್ ಮಾಳವೀಯ, ಫಾಲ್ಟಾದಲ್ಲಿ ಆರೋಪ ಕೇಳಿಬಂದಿರುವ ಎಲ್ಲಾ ಮತಗಟ್ಟೆಗಳಲ್ಲಿ ಮರು ಮತದಾನಕ್ಕೆ ಒತ್ತಾಯಿಸಿದ್ದಾರೆ. ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಇದನ್ನು “ಡೈಮಂಡ್ ಹಾರ್ಬರ್ ಮಾದರಿ” ಎಂದು ಕರೆಯಲಾಗುತ್ತದೆ. ಇದು ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರ ಲೋಕಸಭಾ ಸ್ಥಾನವನ್ನು ಪಡೆಯಲು ಸಹಾಯ ಮಾಡಿದ ಅದೇ ಟೆಂಪ್ಲೇಟ್ ಆಗಿದೆ ಎಂದು ಕಟುವಾಗಿ ಟೀಕಿಸಿದ್ದಾರೆ.
ಅಂತಹ ಒಂದೆರಡು ಬೂತ್ಗಳ ವಿವರಗಳನ್ನು ಅವರು ಹಂಚಿಕೊಂಡಿದ್ದಾರೆ. ಫಾಲ್ಟಾ 144, ಭಾಗ 170, ಕೊಠಡಿ ಸಂಖ್ಯೆ 2 – ಹರಿಂದಂಗ ಪ್ರೌಢಶಾಲೆ ಸೇರಿದಂತೆ ಬೂತ್ 189 ಸೇರಿದಂತೆ ಇತರ ಹಲವಾರು ಮತಗಟ್ಟೆಗಳಲ್ಲಿ ಇದೇ ರೀತಿಯಲ್ಲಿ ರಾಜಿ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ.
ದಕ್ಷಿಣ 24 ಪರಗಣ ಜಿಲ್ಲೆಯ ಡೈಮಂಡ್ ಹಾರ್ಬರ್ ಕ್ಷೇತ್ರವು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಲೋಕಸಭಾ ಸಂಸದ ಅಭಿಷೇಕ್ ಬ್ಯಾನರ್ಜಿ ಅವರ ಭದ್ರಕೋಟೆಯಾಗಿದೆ. 2014 ರಿಂದ ಅಭಿಷೇಕ್ ಬ್ಯಾನರ್ಜಿ ಸತತ ಮೂರು ಬಾರಿ ಇಲ್ಲಿ ಗೆದ್ದಿದ್ದಾರೆ. 2019 ರಲ್ಲಿ ಒಟ್ಟು 7,91,127 ಮತ ಪಡೆದು 3.20 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದರೆ 2024 ರಲ್ಲಿ ಒಟ್ಟು 10,48,230 ಮತಗಳನ್ನು ಪಡೆದು 7,10,930 ಮತಗಳ ಅಂತರದಿಂದ ಗೆದ್ದಿದ್ದರು.