ಕಡಬ: ಕಡಬ ತಾಲೂಕಿನ ಬಿಳಿನೆಲೆ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ವ್ಯವಹಾರಗಳ ಕುರಿತು ಹಾಗೂ ಆಡಳಿತ ಮಂಡಳಿಯ ವಿರುದ್ಧ ಕೆಲವರು ವ್ಯವಸ್ಥಿತವಾಗಿ ಆಧಾರರಹಿತ ಅಪಪ್ರಚಾರ ನಡೆಸುತ್ತಿದ್ದಾರೆ. ಸಂಘದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಸುಳ್ಳು ಸುದ್ದಿ ಹರಡುತ್ತಿರುವುದರ ವಿರುದ್ಧ, ಸತ್ಯಾಂಶ ಹೊರಬರಬೇಕೆಂದು ಕಡಬ ಕೋಡಿಂಬಾಳದ ಕಾರಣಿಕ ಕ್ಷೇತ್ರ ಮಜ್ಜಾರು ಶ್ರೀ ರಾಜನ್ ದೈವದ ಸನ್ನಿಧಿಯಲ್ಲಿ ಆಡಳಿತ ಮಂಡಳಿಯು ಅರಿಕೆ ಮಾಡಿಕೊಂಡಿದೆ” ಎಂದು ಸಂಘದ ಅಧ್ಯಕ್ಷ ವಾಡ್ಯಪ್ಪ ಗೌಡ ಎರ್ಮಾಯಿಲ್ ತಿಳಿಸಿದ್ದಾರೆ.

ಕಡಬದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘದ ವ್ಯವಹಾರಗಳು ಅತ್ಯಂತ ಸಮರ್ಪಕ ಹಾಗೂ ಪಾರದರ್ಶಕವಾಗಿಯೇ ನಡೆಯುತ್ತಿವೆ. ಆದರೂ ಸಂಘದ ಹೆಸರು ಕೆಡಿಸುವ ಉದ್ದೇಶದಿಂದ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ. ಇದರ ವಿರುದ್ಧ ತಾವು ಮಜ್ಜಾರು ದೈವಸ್ಥಾನದಲ್ಲಿ ಪ್ರಮಾಣ ಮಾಡಿರುವುದಾಗಿ ಹೇಳಿದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ನೇಮಕಾತಿ ವಿವಾದದ ಕುರಿತು ಸತ್ಯಾಂಶ ಬಿಚ್ಚಿಟ್ಟ ಅಧ್ಯಕ್ಷರು, “ಸಿಇಒ ನೇಮಕದ ಪ್ರಕರಣ ಬಹಳ ಹಿಂದಿನಿಂದಲೂ ನಡೆಯುತ್ತಾ ಬಂದಿದೆ. ರಂಜಿತ್ ಎನ್ನುವವರನ್ನು ಸಿಇಒ ಆಗಿ ನೇಮಕಗೊಳಿಸುವಂತೆ ಮಾನ್ಯ ಉಚ್ಚ ನ್ಯಾಯಾಲಯವು (ಹೈಕೋರ್ಟ್) ಆದೇಶ ನೀಡಿತ್ತು. ಆದರೆ ತಾಂತ್ರಿಕ ಕಾರಣಗಳಿಂದ ಅದನ್ನು ಆಡಳಿತ ಸಮಿತಿ ಪಾಲಿಸದಿದ್ದಾಗ, ಎ.ಆರ್ (ಸಹಕಾರ ಸಂಘಗಳ ಸಹಾಯಕ ನಿಬಂಧಕರು) ಕೋರ್ಟ್ನಿಂದ ಸಂಘದ ಆಡಳಿತ ಮಂಡಳಿಯನ್ನು ಸೂಪರ್ ಸೀಡ್ (ವಜಾ) ಮಾಡುವ ನೋಟಿಸ್ ಜಾರಿಯಾಗಿತ್ತು. ಈ ಹಿನ್ನೆಲೆಯಲ್ಲಿ ಆಡಳಿತ ಸಮಿತಿಯವರೆಲ್ಲರೂ ಸೇರಿ ಹೈಕೋರ್ಟ್ ಆದೇಶ ಗೌರವಿಸಿ, ರಂಜಿತ್ ಅವರನ್ನು ಸಿಇಒ ಆಗಿ ನೇಮಕ ಮಾಡಿದ್ದೇವೆ. ಈ ಕಾನೂನಾತ್ಮಕ ನೇಮಕಾತಿ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಕೆಲವರು ಅಪಪ್ರಚಾರ ಮಾಡುತ್ತಿರುವುದು ಖಂಡನೀಯ” ಎಂದು ವಾಡ್ಯಪ್ಪ ಗೌಡ ಎರ್ಮಾಯಿಲ್ ಸ್ಪಷ್ಟಪಡಿಸಿದರು.