ಹೈದರಾಬಾದ್ ಎಪ್ರಿಲ್ 09: ಮೂರು ತಿಂಗಳ ಹಿಂದೆ ಕಳುವಾಗಿದ್ದ ಬೈಕ್ನ ಪತ್ತೆಗಾಗಿ ಪೊಲೀಸರ ಮೊರೆ ಹೋಗಿದ್ದ ಮಾಲೀಕರಿಗೆ, ಅನಿರೀಕ್ಷಿತವಾಗಿ ಬಂದ ಟ್ರಾಫಿಕ್ ಚಲನ್ ಒಂದು ದೊಡ್ಡ ಸಾಕ್ಷ್ಯವನ್ನು ಒದಗಿಸಿದೆ.
ಹಬೀಬ್ ನಗರದ ನಿವಾಸಿಯೊಬ್ಬರ ಬೈಕ್ ಮೂರು ತಿಂಗಳ ಹಿಂದೆ ಕಳುವಾಗಿತ್ತು. ಈ ಬಗ್ಗೆ ಎಫ್ಐಆರ್ ದಾಖಲಾಗಿದ್ದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಆದರೆ ಹಠಾತ್ತಾಗಿ ಮಾಲೀಕರ ಮೊಬೈಲ್ಗೆ ಬಂದ ಸಂಚಾರ ನಿ
ಯಮ ಉಲ್ಲಂಘನೆಯ ಚಲನ್ನಲ್ಲಿ, ಕದ್ದ ಬೈಕ್ ಅನ್ನು ಓಡಿಸುತ್ತಿದ್ದ ವ್ಯಕ್ತಿಯ ಮುಖ ಸ್ಪಷ್ಟವಾಗಿ ದಾಖಲಾಗಿತ್ತು. ಈ ಹೈ-ರೆಸಲ್ಯೂಷನ್ ಫೋಟೋವನ್ನು ಮಾಲೀಕರು ಎಕ್ಸ್ (ಟ್ವಿಟರ್) ನಲ್ಲಿ ಹಂಚಿಕೊಂಡಿದ್ದಾರೆ.
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆಯೇ ಇಂಟರ್ನೆಟ್ ಬಳಕೆದಾರರು ಎರಡು ಬಣಗಳಾಗಿ ವಿಭಜನೆಗೊಂಡಿದ್ದಾರೆ. “ಪೊಲೀಸ್ ತನಿಖೆಗಿಂತ ಟ್ರಾಫಿಕ್ ಕ್ಯಾಮೆರಾವೇ ಚುರುಕಾಗಿದೆ” ಎಂದು ಕೆಲವರು ಶ್ಲಾಘಿಸಿದರೆ, “ಫೋಟೋದಲ್ಲಿರುವ ವ್ಯಕ್ತಿ ಕಳ್ಳನೇ ಆಗಿರಬೇಕು ಎಂದಿಲ್ಲ, ಆತ ಬೇರೆಯವರಿಂದ ಈ ಬೈಕ್ ಖರೀದಿಸಿರುವ ಸಾಧ್ಯತೆಯೂ ಇದೆ. ಸಾಕ್ಷಿಯಿಲ್ಲದೆ ಆತನ ಮುಖವನ್ನು ಸಾರ್ವಜನಿಕವಾಗಿ ಪ್ರದರ್ಶಿಸಿ ನಿಂದಿಸುವುದು ಸರಿಯಲ್ಲ” ಎಂದು ವಿಮರ್ಶಕರು ವಾದಿಸಿದ್ದಾರೆ. ಸದ್ಯ ಹೈದರಾಬಾದ್ ಪೊಲೀಸ್ ಆಯುಕ್ತ ವಿ.ಸಿ. ಸಜ್ಜನರ್ ಅವರ ಗಮನಕ್ಕೆ ಈ ವಿಚಾರ ಬಂದಿದ್ದು, ಶಂಕಿತನ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ.