ಹೊಸಪೇಟೆ ಎಪ್ರಿಲ್ 06: ಬೈಕ್ ಗೆ ಬೊಲೆರೋ ಗೂಡ್ಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಅರಣ್ಯ ಇಲಾಖೆ ಇಬ್ಬರು ಸಿಬ್ಬಂದಿ ಸಾವನಪ್ಪಿದ ಘಟನೆ ಹೊಸಪೇಟೆ ತಾಲೂಕಿನ ವೆಂಕಟಾಪುರ ಗ್ರಾಮದ ಬಳಿ ಸಂಭವಿಸಿದೆ.
ಮೃತರನ್ನು ಕಮಲಾಪುರದ ಕೃಷ್ಣ (26) ಹಾಗೂ ವೆಂಕಟಾಪುರದ ಹನುಮಂತಪ್ಪ (50) ಎಂದು ಗುರುತಿಸಲಾಗಿದೆ. ಇವರು ಅರಣ್ಯ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾವಲುಗಾರರಾಗಿ ಕಾರ್ಯನಿರ್ವಹಿಸುತ್ತಿದ್ದರು.

ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ, ಅವರು ಪ್ರಯಾಣಿಸುತ್ತಿದ್ದ ಬೈಕ್ಗೆ ಬೊಲೇರೋ ಗೂಡ್ಸ್ ವಾಹನ ಢಿಕ್ಕಿ ಹೊಡೆದ ಪರಿಣಾಮ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ನಂತರ ಪೊಲೀಸರು ಬೊಲೇರೋ ಗೂಡ್ಸ್ ವಾಹನವನ್ನು ವಶಪಡಿಸಿಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಹಂಪಿ ಸಿಪಿಐ ರಾಜೇಶ್ ಭಟಗುರ್ಕಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.