ಚೆನ್ನೈ ಎಪ್ರಿಲ್ 03: ತಮಿಳುನಾಡು ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಭಾರತೀಯ ಜನತಾ ಪಕ್ಷವು (ಬಿಜೆಪಿ) ತನ್ನ 27 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆದರೆ, ರಾಜ್ಯ ರಾಜಕಾರಣದಲ್ಲಿ ‘ಸಿಂಘಮ್’ ಎಂದೇ ಖ್ಯಾತರಾಗಿರುವ ಮಾಜಿ ಐಪಿಎಸ್ ಅಧಿಕಾರಿ ಹಾಗೂ ಬಿಜೆಪಿ ಪಕ್ಷದ ಪ್ರಬಲ ನಾಯಕ ಕೆ. ಅಣ್ಣಾಮಲೈ ಅವರ ಹೆಸರು ಪಟ್ಟಿಯಲ್ಲಿ ಇಲ್ಲದಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಬಿಜೆಪಿ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಹಿರಿಯ ನಾಯಕಿ ತಮಿಳಿಸೈ ಸೌಂದರರಾಜನ್ (ಮೈಲಾಪುರ), ವನತಿ ಶ್ರೀನಿವಾಸನ್ (ಕೊಯಮತ್ತೂರು ಉತ್ತರ) ಮತ್ತು ಕೇಂದ್ರ ಸಚಿವ ಎಲ್. ಮುರುಗನ್ (ಅವಿನಾಶಿ) ಅವರಿಗೆ ಟಿಕೆಟ್ ನೀಡಲಾಗಿದೆ. ಆದರೆ, ಕಳೆದ ಕೆಲವು ವರ್ಷಗಳಿಂದ ತಮಿಳುನಾಡಿನಲ್ಲಿ ಬಿಜೆಪಿಯ ಪ್ರಮುಖ ಮುಖವಾಗಿದ್ದ ಅಣ್ಣಾಮಲೈ ಸ್ಪರ್ಧೆಯಿಂದ ದೂರ ಉಳಿದಿದ್ದಾರೆ.
ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಾನು ನಿರ್ಧರಿಸಿದ್ದೇನೆ. ಕಾರ್ಯಕರ್ತರ ಕೈ ಬಲಪಡಿಸುವುದು ಮತ್ತು ಎನ್ಡಿಎ ಮೈತ್ರಿಕೂಟದ ಅಭ್ಯರ್ಥಿಗಳ ಪರ ಪ್ರಚಾರ ಮಾಡುವುದು ನನ್ನ ಆದ್ಯತೆ,” ಎಂದು ಅಣ್ಣಾಮಲೈ ಸ್ಪಷ್ಟಪಡಿಸಿದ್ದಾರೆ. ಆದರೆ, ರಾಜಕೀಯ ವಲಯದಲ್ಲಿ ಬೇರೆಯದೇ ಚರ್ಚೆ ನಡೆಯುತ್ತಿದೆ. ಎಐಎಡಿಎಂಕೆ ಜೊತೆಗಿನ ಸೀಟು ಹಂಚಿಕೆ ಮತ್ತು ತಮಗೆ ಬೇಕಾದ ಕ್ಷೇತ್ರಗಳು ಸಿಗದ ಕಾರಣ ಅವರು ಅಸಮಾಧಾನಗೊಂಡಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೆ, ಕೇವಲ ಆರು ಕ್ಷೇತ್ರಗಳ ಉಸ್ತುವಾರಿ ನೀಡಿದ್ದಕ್ಕೆ ಬೇಸತ್ತು ಅವರು ಈ ಹಿಂದೆ ರಾಜೀನಾಮೆಯನ್ನೂ ನೀಡಿದ್ದರು ಎಂಬ ಮಾತುಗಳು ಕೇಳಿಬರುತ್ತಿವೆ.
ತಮಿಳುನಾಡಿನಲ್ಲಿ ಎಐಎಡಿಎಂಕೆ ನೇತೃತ್ವದ ಎನ್ಡಿಎ ಮೈತ್ರಿಕೂಟ ಅಸ್ತಿತ್ವದಲ್ಲಿದ್ದು, ಒಟ್ಟು 234 ಸ್ಥಾನಗಳಲ್ಲಿ ಎಐಎಡಿಎಂಕೆ 169 ಮತ್ತು ಬಿಜೆಪಿ 27 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿವೆ. ಉಳಿದ ಸ್ಥಾನಗಳನ್ನು ಪಿಎಂಕೆಯಂತಹ ಸಣ್ಣ ಪಕ್ಷಗಳಿಗೆ ಹಂಚಿಕೆ ಮಾಡಲಾಗಿದೆ. ಅಣ್ಣಾಮಲೈ ಅವರು ಎಐಎಡಿಎಂಕೆ ವಿರುದ್ಧ ಈ ಹಿಂದೆ ನೀಡಿದ್ದ ಹೇಳಿಕೆಗಳು ಮೈತ್ರಿಯಲ್ಲಿ ಬಿರುಕು ಮೂಡಿಸಿದ್ದವು. ಈಗ ಮೈತ್ರಿ ಮುಂದುವರಿದಿದ್ದರೂ, ಅಣ್ಣಾಮಲೈ ಅವರ ಅನುಪಸ್ಥಿತಿ ಚುನಾವಣಾ ಫಲಿತಾಂಶದ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದು ಕುತೂಹಲಕಾರಿ.

ಅಣ್ಣಾಮಲೈ ಅವರ ಸಂಘಟನಾ ಕೌಶಲ್ಯವನ್ನು ರಾಷ್ಟ್ರಮಟ್ಟದಲ್ಲಿ ಬಳಸಿಕೊಳ್ಳಲು ಹೈಕಮಾಂಡ್ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ. ಗೃಹ ಸಚಿವ ಅಮಿತ್ ಶಾ ಅವರು ಕೂಡ ಈ ಬಗ್ಗೆ ಸುಳಿವು ನೀಡಿದ್ದಾರೆ. ಮುಂಬೈ ಪುರಸಭೆ ಚುನಾವಣೆಯಲ್ಲಿ ಅಣ್ಣಾಮಲೈ ಅವರ ಪ್ರಭಾವವನ್ನು ಗಮನಿಸಿರುವ ಬಿಜೆಪಿ ನಾಯಕತ್ವ, ಅವರಿಗೆ ದೊಡ್ಡ ಜವಾಬ್ದಾರಿ ನೀಡುವ ಸಾಧ್ಯತೆ ಇದೆ. ಏಪ್ರಿಲ್ 23 ರಂದು ತಮಿಳುನಾಡಿನಲ್ಲಿ ಮತದಾನ ನಡೆಯಲಿದ್ದು, ಮೇ 4 ರಂದು ಫಲಿತಾಂಶ ಪ್ರಕಟವಾಗಲಿದೆ. ಡಿಎಂಕೆ ನೇತೃತ್ವದ ಒಕ್ಕೂಟ, ಎಐಎಡಿಎಂಕೆ-ಬಿಜೆಪಿ ಮೈತ್ರಿ ಹಾಗೂ ನಟ ವಿಜಯ್ ಅವರ ಎಂಟ್ರಿಯಿಂದಾಗಿ ಈ ಬಾರಿಯ ಚುನಾವಣೆ ತ್ರಿಕೋನ ಸ್ಪರ್ಧೆಗೆ ಸಾಕ್ಷಿಯಾಗಲಿದೆ.