ಬೀದರ್​​, ಫೆಬ್ರವರಿ 08: ಕೌಟುಂಬಿಕ ಸಮಸ್ಯೆಗೆ 11 ತಿಂಗಳ ಮಗು ಬಿಟ್ಟು ಗೃಹಿಣಿಯೋರ್ವರು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣದ ಓಂ ಬಡಾವಣೆಯಲ್ಲಿ ನಡೆದಿದೆ.
ಅಂಜನಾಬಾಯಿ ಶೇಖರ್ ಪಾಟೀಲ್(22) ಮೃತ ಯುವತಿಯಾಗಿದ್ದು, ಪತಿ ಮನೆಯವರಿಂದ ನಿತ್ಯ ಕಿರುಕುಳ ಹಿನ್ನೆಲೆ ಮನನೊಂದು ಈಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಮೂರು ದಿನಗಳ ಹಿಂದೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

2022ರಲ್ಲಿ ಬಸವಕಲ್ಯಾಣದ ಶೇಖರ್ ಪಾಟೀಲ್ ಜತೆ ಅಂಜನಾಬಾಯಿ ವಿವಾಹ ನಡೆದಿದ್ದು, ಅಂಜನಾಬಾಯಿ ಪತಿ ಶೇಖರ್​​ ಪಾನಿಪುರಿ ವ್ಯಾಪಾರ ಮಾಡಿಕೊಂಡಿದ್ದ ಎನ್ನಲಾಗಿದ್ದು, ನಿತ್ಯವೂ ರಾತ್ರಿ 11-12 ಗಂಟೆ ಅವಧಿಯಲ್ಲಿ ಮನೆಗೆ ಬರುತ್ತಿದ್ದ. ಈ ಬಗ್ಗೆ ತಕರಾರು ಮಾಡಿದ್ದ ಅಂಜನಾಬಾಯಿ ಬೇಗ ಮನೆಗೆ ಬನ್ನಿ ಎಂದಿದ್ದಳು. ಆದರೆ ಇದೇ ವಿಚಾರವಾಗಿ ಅತ್ತೆ ಮಾವ ಆಕೆ ಜೊತೆ ಜಗಳ ಮಾಡಿದ್ದಾರೆ. ನಿನಗೆ ಅಡುಗೆ ಬರಲ್ಲ, ನೀನು ಚೆನ್ನಾಗಿಲ್ಲ ಎಂದೆಲ್ಲ ಹೀಯಾಳಿಸಿದ್ದಾರೆ. ಜೊತೆಗೆ ನೀನು ವೇಶ್ಯಾವಾಟಿಕೆ ಮಾಡು ಎಂದು ಆಕೆಯನ್ನು ಪೀಡಿಸಿದ್ದು, ಆ ಬಗ್ಗೆ ಅಂಜನಾಬಾಯಿ ಹೆತ್ತವರ ಬಳಿಯೂ ಹೇಳಿಕೊಂಡಿದ್ದಳು.

ಆದರೆ ಈ ಬಗ್ಗೆ ಪೋಷಕರು ಆಕೆಗೆ ಸಮಾಧಾನ ಮಾಡಿದ್ದು, ಇಂದೆಲ್ಲ ನಾಳೆ ಸರಿಹೋಗಬಹುದು ಎಂದು ತಿಳುವಳಿಕೆ ಹೇಳಿದ್ದರು. ಈ ನಡುವೆ ಕಿರುಕುಳ ತಾಳಲಾರದೆ ಅಂಜನಾಬಾಯಿ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾಳೆ. ಈ ಬಗ್ಗೆ ಆಕೆಯ ತಂದೆ ವಿಜಯಕುಮಾರ್ ದೂರಿನ ಮೇರೆಗೆ ಮೃತಳ ಗಂಡ ಶೇಖರ್ ಸೇರಿ ಮೂವರ ವಿರುದ್ಧ ಬಸವಕಲ್ಯಾಣ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Share Information