ಉಡುಪಿ ಅಕ್ಟೋಬರ್ 30: ತೆಲುಗು ಸಿನೆಮಾರಂಗದಲ್ಲಿ ಹನುಮಾನ್ ಸಿನೆಮಾ ನಿರ್ಮಿಸಿ ಸೈ ಎನಿಸಿಕೊಂಡಿರುವ ಪ್ರಶಾಂತ್ ವರ್ಮಾ ಅವರ ಸಿನೆಮಾದಲ್ಲಿ ಕುಂದಾಪುರ ಬೆಡಗಿ ಭೂಮಿ ಶೆಟ್ಟಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಮಹಾಕಾಳಿ ಎಂಬ ಶೀರ್ಷಿಕೆಯನ್ನೂ ಇಟ್ಟಿದ್ದಾರೆ. ಇದೀಗ ಚಿತ್ರದ ಫಸ್ಟ್ ಲುಕ್ ಅನಾವರಣ ಮಾಡಲಾಗಿದೆ.

ಕುಂದಾಪುರದ ಬೆಡಗಿಗೆ ಭೂಮಿ ಶೆಟ್ಟಿ ಮಹಾಕಾಳಿ ಅವತಾರವೆತ್ತಿದ್ದಾರೆ. ಫಸ್ಟ್ ಲುಕ್ನಲ್ಲಿ ಭೂಮಿ ಶೆಟ್ಟಿ ಮುಖವನ್ನು ಕೆಂಪು ಹಾಗೂ ಗೋಲ್ಡ್ ಬಣ್ಣದಿಂದ ಅಲಂಕಾರಗೊಳಿಸಲಾಗಿದೆ. ಸಾಂಪ್ರದಾಯಿಕ ಆಭರಣಗಳನ್ನು ತೊಟ್ಟು ದೈವಿಕ ಅನುಭವ ನೀಡುವ ಗೆಟಪ್ನಲ್ಲಿ ಭೂಮಿ ಶೆಟ್ಟಿ ಕಾಣಿಸಿಕೊಂಡಿದ್ದಾರೆ.

ಪ್ರಶಾಂತ್ ವರ್ಮಾ ತಮ್ಮದೇ ’ಪ್ರಶಾಂತ್ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್’ ಅಡಿ ಮಹಾಕಾಳಿ ಚಿತ್ರ ಮಾಡುತ್ತಿದ್ದಾರೆ. ಮಹಾಕಾಳಿ ಸಿನಿಮಾಗೆ ಪ್ರಶಾಂತ್ ಕಥೆ ಬರೆದಿದ್ದು, ಮಹಿಳಾ ನಿರ್ದೇಶಕಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವುದು ವಿಶೇಷ. ಈ ಹಿಂದೆ ‘ಮಾರ್ಟಿನ್ ಲೂಥರ್ ಕಿಂಗ್’ ಎಂಬ ಚಿತ್ರ ನಿರ್ದೇಶಿಸಿದ್ದ ಪೂಜಾ ಅಪರ್ಣಾ ಕೊಲ್ಲೂರು, ಮಹಾಕಾಳಿ ಸಾರಥ್ಯ ವಹಿಸಿಕೊಂಡಿದ್ದಾರೆ. ಇನ್ನು, ನಟಿ ಭೂಮಿ ಶೆಟ್ಟಿ ಅವರು ಹೊಸ ಸಿನಿಮಾ ಪೋಸ್ಟರ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.