ಬೆಂಗಳೂರು, ಮಾರ್ಚ್ 12: 24 ವರ್ಷದ ನವವಿವಾಹಿತೆಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಇದನ್ನು ಆತ್ಮ*ಹತ್ಯೆ ಎಂದು ಬಿಂಬಿಸಲು ಪತಿ ಮತ್ತು ಕುಟುಂಬಸ್ಥರು ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದ್ದು, ಸದ್ಯ ಯಲಹಂಕ ನ್ಯೂ ಟೌನ್ ಪೊಲೀಸರು ಮೃತಳ ಪತಿ ಪವನ್ ಕಲ್ಯಾಣ್ ಎಂಬಾತನನ್ನು ಬಂಧಿಸಿದ್ದಾರೆ.

ಶೃತಿ (22) ಮೃತ ವಿವಾಹಿತೆಯಾಗಿದ್ದು, ಆಕೆಯ ಸಾವಿನ ಕುರಿತು ಕುಟುಂಬಸ್ಥರು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಶೃತಿ ಪತಿ ಪವನ್ ಕಲ್ಯಾಣ್ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ. ಕುಟುಂಬಸ್ಥರ ಆರೋಪದ ಪ್ರಕಾರ, ಸುಮಾರು ಒಂದೂವರೆ ವರ್ಷದ ಹಿಂದೆ ಶೃತಿ ಹಾಗೂ ಪವನ್ ಕಲ್ಯಾಣ್ ಅವರ ವಿವಾಹ ನಡೆದಿತ್ತು. ಮದುವೆಯಾದ ಬಳಿಕ ಪತಿ ಹಾಗೂ ಅತ್ತೆ-ಮಾವನ ಮನೆತನದಿಂದ ನಿರಂತರವಾಗಿ ವರದಕ್ಷಿಣೆಗಾಗಿ ಕಿರುಕುಳ ನೀಡಲಾಗುತ್ತಿತ್ತು ಎಂದು ಶೃತಿ ಕುಟುಂಬದವರು ದೂರಿದ್ದಾರೆ.
ಈ ವರದಕ್ಷಿಣೆ ಕಿರುಕುಳದ ಹಿನ್ನೆಲೆ ಶೃತಿ ಹಾಗೂ ಪತಿ ಮನೆಯವರ ನಡುವೆ ಹಲವು ಬಾರಿ ಕಲಹಗಳು ನಡೆದಿದ್ದವು. ಕೆಲವು ಸಂದರ್ಭಗಳಲ್ಲಿ ಹಿರಿಯರ ಸಮ್ಮುಖದಲ್ಲಿ ರಾಜಿ ಪಂಚಾಯಿತಿಯೂ ನಡೆಸಲಾಗಿತ್ತು. ಆದರೆ ಬಳಿಕವೂ ಕಿರುಕುಳ ಮುಂದುವರಿದಿತ್ತು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಘಟನೆಯ ದಿನ ಶೃತಿಯನ್ನು ಕುತ್ತಿಗೆಗೆ ಬಟ್ಟೆಯಿಂದ ಬಿಗಿದು ಕೊಲೆ ಮಾಡಲಾಗಿದ್ದು, ಬಳಿಕ ಅದನ್ನು ಆತ್ಮಹತ್ಯೆಯಂತೆ ತೋರಿಸಲು ನೇಣು ಹಾಕಲಾಗಿದೆ ಎಂದು ಶೃತಿ ಕುಟುಂಬದವರು ಆರೋಪಿಸಿದ್ದಾರೆ. ಈ ಸಂಬಂಧ Yelahanka New Town Police Station ನಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪ್ರಕರಣದ ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರೆಸಿದ್ದಾರೆ.