ಬೆಂಗಳೂರು ಡಿಸೆಂಬರ್ 19: ನಿರ್ಮಾಣ ಹಂತದ ಕಟ್ಟಡದಿಂದ ಇಟ್ಟಿಗೆ ಬಿದ್ದು ನಾಲ್ಕು ವರ್ಷ ಮಗು ಸಾವನಪ್ಪಿದ ಘಟನೆ ಎಚ್‌ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯ ಚಿನ್ನಪ್ಪನಹಳ್ಳಿಯಲ್ಲಿ ನಡೆದಿದೆ. ಈ ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ.

ಮೃತರನ್ನು ಶ್ರೀಶೈಲ್ ಎಂಬುವವರ ಪುತ್ರಿ ಮನುಶ್ರೀ ಅಲಿಯಾಸ್ ಪಾರು ಎಂದು ಗುರುತಿಸಲಾಗಿದೆ.
ಗಾಯಗೊಂಡಿರುವ ಶ್ರೀಯಾನ್ (6), ಶೇಖರ್(5) ಹಾಗೂ ಮಮತಾ (30) ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.
ನಿರ್ಮಾಣ ಹಂತದ ಕಟ್ಟಡದ ಪಕ್ಕದಲ್ಲಿ ಸಿಮೆಂಟ್ ಶೀಟ್ನ ಶೆಡ್‌ನಲ್ಲಿ ವಿಜಯಪುರ ಜಿಲ್ಲೆ ಸಿಂಧಗಿಯ ಕುಟುಂಬವು ವಾಸವಿತ್ತು. ನಿರ್ಮಾಣ ಹಂತದ ಕಟ್ಟಡವು ಶ್ರೀನಿವಾಸುಲು ಅವರಿಗೆ ಸೇರಿದೆ. 4ನೇ ಮಹಡಿ ಮೇಲಿಂದ ಸುಮಾರು 10ರಿಂದ 12 ಸಿಮೆಂಟ್ ಇಟ್ಟಿಗೆಗಳು ಕೆಳಕ್ಕೆ ಬಿದ್ದಿವೆ. ಇಟ್ಟಿಗೆ ಬಿದ್ದ ರಭಸಕ್ಕೆ ಶೆಡ್‌ನಲ್ಲಿದ್ದ ಮಗು ಮೃತಪಟ್ಟು, ಮೂವರು ಗಾಯಗೊಂಡಿದ್ದಾರೆ. ಶೆಡ್‌ನ ಶೀಟ್ ಸಂಪೂರ್ಣ ಧ್ವಂಸವಾಗಿದೆ.
ಮಾಲೀಕರು ಯಾವುದೇ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳದೆ ನಿರ್ಲಕ್ಷ್ಯ ವಹಿಸಿದ್ದೇ ಘಟನೆಗೆ ಕಾರಣ ಎಂಬುದು ಕಂಡುಬಂದಿದೆ. ಕಟ್ಟಡದ ಮಾಲೀಕರ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.



